ಕಾನ್ಪುರ: ಉತ್ತರ ಪ್ರದೇಶ ರಾಜ್ಯದ ಕಾನ್ಪುರದ ಮಕ್ಕಳ ನಿರಾಶ್ರಿತರ ಕೇಂದ್ರದಲ್ಲಿದ್ದ 57 ಅಪ್ರಾಪ್ರ ಬಾಲಕಿಯರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ. ಈ 57 ಬಾಲಕಿಯರಲ್ಲಿ ಐವರು ಗರ್ಭಿಣಿಯರಾಗಿದ್ದಾರೆ ಎಂದು ವೈದ್ಯಕೀಯ ತಪಾಸಣೆ ವೇಳೆ ತಿಳಿದು ಬಂದಿದೆ.
ಇದು ಸರ್ಕಾರ ನಡೆಸುತ್ತಿರುವ ಶೆಲ್ಟರ್ ಹೋಂ ಆಗಿದ್ದು, ಇಲ್ಲಿ ಹೇಗೆ ಕೋವಿಡ್ ಸೋಂಕು ಹರಡಿದೆ ಎನ್ನುವುದರ ಕುರಿತು ತನಿಖೆ ನಡೆಸಲಾಗುತ್ತಿದೆ. ಇದಲ್ಲದೆ ಸೋಂಕು ತಾಗಿರದ ಮತ್ತತಿಬ್ಬರು ಬಾಲಕಿಯರು ಕೂಡ ಗರ್ಭಿಣಿಯಾಗಿದ್ದು, ಇಲ್ಲಿನ ಭದ್ರತೆಯ ಬಗ್ಗೆ ಪ್ರಶ್ನೆ ಎದ್ದಿದೆ.
ಜಿಲ್ಲೆಯ ಸ್ವರೂಪ್ ನಗರದ ಶೆಲ್ಟರ್ ಹೋಂ ನಲ್ಲಿ ಈ ಘಟನೆ ನಡೆದಿದ್ದು, ಈ ಬಾಲಕಿಯರು ಇಲ್ಲಿಗೆ ಬರುವ ಮೊದಲೇ ಗರ್ಭಿಣಿಯಾಗಿದ್ದರು, ಮಕ್ಕಳ ರಕ್ಷಣಾ ಸಮಿತಿಯ ಶಿಫಾರಸಿನ ಮೇರೆಗೆ ಇವರನ್ನು ಇಲ್ಲಿ ಸೇರಿಸಿಕೊಳ್ಳಲಾಗಿದೆ ಎಂದು ಶೆಲ್ಟರ್ ಹೋಂ ಆಡಳಿತ ಮಂಡಳಿ ತಿಳಿಸಿದೆ.
ಇದನ್ನೂ ಓದಿ: ಶಿರೂರು ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢ: ಆಸ್ಪತ್ರೆ ಸೀಲ್ ಡೌನ್
ಶೆಲ್ಟರ್ ಹೋಂ ನ ಇಬ್ಬರಿಗೆ ಸೋಂಕು ತಾಗಿರುವ ಬಗ್ಗೆ ದೃಢವಾದ ನಂತರ ಸಾಮೂಹಿಕವಾಗಿ ಎಲ್ಲರಿಗೂ ವೈದ್ಯಕೀಯ ತಪಾಸಣೆ ಮಾಡಲಾಗಿತ್ತು. ಈ ವೇಳೆ ಐವರು ಸೋಂಕಿತೆಯರು ಸೇರಿದಂತೆ ಏಳು ಮಂದಿ ಬಾಲಕಿಯರು ಗರ್ಭಿಣಿಯಾಗಿರುವ ಕುರಿತು ಪತ್ತೆಯಾಗಿದೆ.
ಸದ್ಯ ಸೋಂಕಿತರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಶೆಲ್ಟರ್ ಹೋಂ ಕಟ್ಟಡವನ್ನು ಸೀಲ್ ಡೌನ್ ಮಾಡಲಾಗಿದೆ.