Advertisement

ಪ್ರವಾಸೋದ್ಯಮಕ್ಕೆ 5,650 ಕೋಟಿ ರೂ.

10:01 AM Feb 03, 2020 | Team Udayavani |

ಬಜೆಟ್‌ನಲ್ಲಿ ಪ್ರವಾಸೋದ್ಯಮ ಹಾಗೂ ಸಂಸ್ಕೃತಿಗೆ ಒತ್ತು ನೀಡಲಾಗಿದ್ದು, ವಿಶೇಷ ಯೋಜನೆಗಳನ್ನು ಘೋಷಿಸಲಾಗಿದೆ. ಕಲೆ, ಸಂಸ್ಕೃತಿಗೆ 3,150 ಕೋಟಿ ರೂ. ಹಾಗೂ ಪ್ರವಾಸೋದ್ಯಮಕ್ಕೆ 2,500 ಕೋಟಿ ರೂ. ಅನುದಾನ ಮೀಸಲಿರಿಸಲಾಗಿದೆ. ದೇಶೀಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹಿಸಲಾಗುವುದು. ಭಾರತೀಯ ಪಾರಂಪರಿಕ ಹಾಗೂ ಸಂರಕ್ಷಣೆ ಸಂಸ್ಥೆಯನ್ನು ಸ್ಥಾಪಿಸಲಾಗುವುದು. ಸಂಸ್ಕೃತಿ ಸಚಿವಾಲಯದಡಿ ಡೀಮ್ಡ್ ಯುನಿವರ್ಸಿಟಿ ಸ್ಥಾನಮಾನದಡಿ ಸಂಸ್ಥೆಯನ್ನು ತೆರೆಯಲಾಗುವುದು ಎಂದು ಸಚಿವೆ ನಿರ್ಮಲಾ ತಿಳಿಸಿದ್ದಾರೆ.

Advertisement

ಜಾರ್ಖಂಡ್‌ ರಾಜಧಾನಿ ರಾಂಚಿಯಲ್ಲಿ ಬುಡಕಟ್ಟು ವಸ್ತು ಸಂಗ್ರಹಾಲಯ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಐದು ಪುರಾತತ್ವ ಶಾಸ್ತ್ರ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ. ಹರ್ಯಾಣದ ರಾಖೀಗಢ, ಉತ್ತರ ಪ್ರದೇಶದ ಹಸ್ತನಿಪುರ, ಅಸ್ಸಾಂನ ಶಿವಸಾಗರ್‌, ಗುಜರಾತ್‌ನ ದೋಲಾವಿರಾ ಹಾಗೂ ತಮಿಳುನಾಡಿನ ಅದಿಚಾನಲ್ಲೂರ್‌ನಲ್ಲಿ ಪ್ರಾಕ್ತನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ದೇಶದ ನಾಲ್ಕು ಪ್ರಾಚೀನ ವಸ್ತು ಸಂಗ್ರಹಾಲಯವನ್ನು ಪುನಶ್ಚೇತನಗೊಳಿಸಲು ನಿರ್ಧರಿಸಲಾಗಿದೆ. ಪ್ರಯಾಣ ಹಾಗೂ ಪ್ರವಾಸೋದ್ಯಮ ಸ್ಪರ್ಧೆ ಸೂಚ್ಯಂಕದಲ್ಲಿ 2014ರಲ್ಲಿ 65ನೇ ಸ್ಥಾನ ಪಡೆದಿದ್ದ ಭಾರತ 2019ರಲ್ಲಿ 34ನೇ ರ್‍ಯಾಂಕ್‌ ಪಡೆದು ಅತ್ಯುತ್ತಮ ಸಾಧನೆ ತೋರಿದೆ. ವಿದೇಶಿ ವಿನಿಮಯ ಆದಾಯ 1.75 ಲಕ್ಷ ಕೋಟಿ ರೂ.ನಿಂದ 1.88 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.

ಖಾತ್ರಿಗೆ ಕತ್ತರಿ
“ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’ಗೆ ಕತ್ತರಿ ಹಾಕಿದೆ. ಕಳೆದ ಬಾರಿ ಯೋಜನೆಗೆ 71 ಸಾವಿರ ಕೋಟಿ ರೂ.ಗಳನ್ನು ಘೋಷಿಸಿದ್ದ ಸರ್ಕಾರ, ಈ ಬಾರಿ ಕೇವಲ 61,600 ಕೋಟಿ ರೂ.ಮೀಸಲಿಟ್ಟಿದೆ. ಹಣದುಬ್ಬರದ ಪರಿಣಾಮ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ, ಬಡತನ ಹೆಚ್ಚಾಗಿದೆ. ಇವು ಗಳ ನಿವಾರಣೆಗೆ ಈ ಬಾರಿಯ ಬಜೆಟ್‌ನಲ್ಲಿ ಹೆಚ್ಚು ಒತ್ತು ನೀಡಬೇಕು ಎನ್ನುವ ತಜ್ಞರ ಸಲಹೆ ಮಧ್ಯೆಯೂ ಬಜೆಟ್‌ನಲ್ಲಿ ಉದ್ಯೋಗ ಖಾತ್ರಿ ಯೋಜನೆಗೆ ಸುಮಾರು 9,500 ಕೋಟಿ ರೂ.ಗಳನ್ನು ಖೋತಾ ಮಾಡಲಾಗಿದೆ. ಇದರ ಬೆನ್ನಿಗೆ, “ಪ್ರಧಾನಮಂತ್ರಿ ಗ್ರಾಮ ಸಡಕ್‌’ ಯೋಜನೆಯ ಮೊತ್ತವನ್ನು 5 ಸಾವಿರ ಕೋಟಿಯಷ್ಟು ಏರಿಕೆ ಮಾಡಿದ್ದು, ಗ್ರಾಮೀಣ ಭಾಗದ ರಸ್ತೆಗಳ ಅಭಿವೃದ್ಧಿಗೆ ಇದನ್ನು ಬಳಸುವುದಾಗಿ ತಿಳಿಸಿದೆ. ಕಳೆದ ಸಾಲಿನ ಬಜೆಟ್‌ನಲ್ಲಿ “ಗ್ರಾಮ ಸಡಕ್‌’ ಯೋಜನೆಗೆ 14,070 ಕೋಟಿ ರೂ. ಬಿಡುಗಡೆಯಾಗಿತ್ತು. ಇದರ ಜೊತೆಗೆ, ಗ್ರಾಮೀಣ ಗೃಹ ನಿರ್ಮಾಣ ಯೋಜನೆಯ ಅನುದಾನದ ಮೊತ್ತವನ್ನು 925 ಕೋಟಿ ರೂ.ಗಳಿಗೆ ಹೆಚ್ಚಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next