ನೆಲಮಂಗಲ: ಬೆಂಗಳೂರು ನಗರ ಸೇರಿ ವಿವಿಧೆಡೆ ಗಳಲ್ಲಿ ದರೋಡೆ, ಸುಲಿಗೆ ಸೇರಿದಂತೆ 56 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಜಯಂತ್ ಅಲಿಯಾಸ್ ಬ್ಯಾಟರಿ ಜಯಂತ್ (26) ಕಾಲಿಗೆ 2ನೇ ಬಾರಿ ಗುಂಡಿಕ್ಕಿ ದಾಬಸ್‌ಪೇಟೆ ಪೊಲೀಸರು ಬಂಧಿಸಿದ್ದಾರೆ.
ಡಾಬಸ್‌ಪೇಟೆ, ರಾಮ ನಗರ ಮತ್ತಿತರ ಹೆದ್ದಾರಿಗಳಲ್ಲಿ ರಾತ್ರಿವೇಳೆ ಪಲ್ಸರ್ ಬೈಕಿನಲ್ಲಿ ಬಂದು ರಾಬರಿ ನಡೆಸಿದ್ದ ಜಯಂತ್ (26) ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಆಲೂರು ಗ್ರಾಮದವನು.
ಈತ ಆ.31ರಂದು ಸಂಜೆ ಬಾಣಾವಾಡಿ ಗ್ರಾಮದ ಮೂಲಕ ಡಾಬಸ್‌ಪೇಟೆ ಕಡೆ ಬೈಕ್‌ನಲ್ಲಿ ಬರುತ್ತಿರುವ ಮಾಹಿತಿ ಮೇರೆಗೆ ಇನ್ಸ್‌ಪೆಕ್ಟರ್ ಬಿ.ರಾಜು ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದ್ದರು. ತಾಲೂಕಿನ ಶಿವಗಂಗೆ ಬಳಿಯ ಕಂಬಾಳು ಗ್ರಾಮದ ನೀಲಗಿರಿ ತೋಪಿನಲ್ಲಿ ಪರಾರಿಯಾಗಲು ಯತ್ನಿಸಿದ ಜಯಂತ್‌ನನ್ನು ಸಿಬ್ಬಂದಿ ಇಮ್ರಾನ್ ಹಿಡಿಯಲು ಹೋದಾಗ ಕೈಗೆ ಡ್ರಾಗರ್‌ನಿಂದ ಚುಚ್ಚಿ ಹಲ್ಲೆಗೆ ಯತ್ನಿಸಿದ್ದಾನೆ. ಆಗ ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿದ್ದರೂ ಜಯಂತ್ ಓಡಲು ಯತ್ನಿಸಿದ್ದಾನೆ. ಕೊನೆಗೆ ಇನ್ಸ್‌ಪೆಕ್ಟರ್ ಬಿ.ರಾಜು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಚಿಕಿತ್ಸೆಗೆ ಜಯಂತ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿದೆ.
ಬಂಧಿತ ಜಯಂತ್ ವಿರುದ್ಧ ಬೆಂಗಳೂರಿನ ಜ್ಞಾನಭಾರತಿ, ಪೀಣ್ಯ, ಸೋಲದೇವನಹಳ್ಳಿ ಠಾಣೆ ಸೇರಿದಂತೆ ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಡ್ಯ ಜಿಲ್ಲೆಯ ವಿವಿಧ ಠಾಣೆಗಳಲ್ಲಿ 56 ಪ್ರಕರಣ ದಾಖಲಾಗಿವೆ.
2ನೇ ಬಾರಿ ಫೈರಿಂಗ್: ಈ ಹಿಂದೆ 2019ರಲ್ಲಿ ಇದೇ ಬ್ಯಾಟರಿ ಜಯಂತನ ಮೇಲೆ ನೆಲಮಂಗಲ ಸಮೀಪದ ವೀರನಂಜೀಪುರದಲ್ಲಿ, ನೆಲಮಂಗಲ ಉಪವಿಭಾಗದ ಪೊಲೀಸ್ ತಂಡ ಗುಂಡುಹಾರಿಸಿ ಬಂಧಿಸಿತ್ತು. ಆದರೂ, ಈತ ತನ್ನ ಚಾಳಿ ಮುಂದುವರಿಸಿದ್ದನು.