ಮಂಗಳೂರು: ಅಫ್ಘಾನಿಸ್ಥಾನ ದಲ್ಲಿ ತಾಲಿಬಾನ್ ಕ್ರೌರ್ಯ ಮೇರೆ ಮೀರುತ್ತಿದ್ದಂತೆ ಇತ್ತ ಮಂಗಳೂರು ವಿಶ್ವ ವಿದ್ಯಾನಿಲಯದಲ್ಲಿ ವ್ಯಾಸಂಗ ಮಾಡಲು ಅಫ್ಘಾನ್ ವಿದ್ಯಾರ್ಥಿಗಳಿಂದ ಬರೋಬ್ಬರಿ ಒಂದು ಸಾವಿರಕ್ಕೂ ಅಧಿಕ ಅರ್ಜಿ ಸಲ್ಲಿಕೆ ಯಾಗಿದ್ದು, ಈ ಪೈಕಿ 156 ಮಂದಿ ದಾಖಲಾತಿ ಪಡೆದಿದ್ದಾರೆ.
ಈ ಪೈಕಿ ಪದವಿ 31, ಸ್ನಾತಕೋತ್ತರ ಪದವಿ 111 ಹಾಗೂ ಪಿಎಚ್‌ಡಿಗೆ 14 ವಿದ್ಯಾರ್ಥಿಗಳು ದಾಖಲಾಗಿದ್ದಾರೆ. 53 ವಿದ್ಯಾರ್ಥಿಗಳು ಈಗಾಗಲೇ ವಿ.ವಿ.ಯಲ್ಲಿ ವ್ಯಾಸಂಗ ಪಡೆಯುತ್ತಿದ್ದಾರೆ.
ವಿ.ವಿ.ಯಲ್ಲಿ 22ಕ್ಕೂ ಅಧಿಕ ವಿಭಾಗಗಳಿದ್ದು, 34 ಕೋರ್ಸ್‌ಗಳ ಕಲಿಕೆಗೆ ಅವಕಾಶ ಇದೆ. ಪ್ರಸಕ್ತ 38 ದೇಶಗಳ 180 ವಿದ್ಯಾರ್ಥಿಗಳು ಇಲ್ಲಿದ್ದಾರೆ. ಅವರಲ್ಲಿ 53 ಮಂದಿ ಅಫ್ಘಾನಿಗಳು. ಒಂದು ವಿಭಾಗದಲ್ಲಿ ಗರಿಷ್ಠ 10 ಮಂದಿ ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶ ಅವಕಾಶ ಇದೆ.
“ಮೊದಲ ಸುತ್ತಿನಲ್ಲಿ 156 ಮಂದಿಗೆ ದಾಖಲಾತಿಗೆ ಅನುಮತಿ ನೀಡಲಾಗಿದೆ. ಪ್ರಸಕ್ತ ಸಾಲಿನ ಸೆಮಿಸ್ಟರ್ ಪರೀಕ್ಷೆ ನಡೆಯುತ್ತಿದ್ದು ಅದು ಪೂರ್ಣವಾದ ಬಳಿಕ ವಿದೇಶಿ ವಿದ್ಯಾರ್ಥಿಗಳ ದಾಖಲಾತಿ ಪ್ರಕ್ರಿಯೆ ಅಂತಿಮಗೊಳ್ಳಲಿದೆ’ ಎಂದು ಪ್ರೊ| ಪಿ.ಎಸ್. ಯಡಪಡಿತ್ತಾಯ ತಿಳಿಸಿದರು.
ಮಂಗಳೂರು ವಿ.ವಿ.ಯಲ್ಲಿ ವಿದೇಶಿ ವಿದ್ಯಾರ್ಥಿಗಳಿಗೆ ಪ್ರವೇಶಾತಿ 2014ರಿಂದ ಆರಂಭವಾಗಿದೆ. ಪ್ರಥಮ ವರ್ಷ 16 ಮಂದಿ ಇದ್ದರು. 2015ರಲ್ಲಿ ಅಫ್ಘಾನ್ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಕಳೆದ ವರ್ಷ 150 ಮಂದಿ ಅರ್ಜಿ ಸಲ್ಲಿಸಿದ್ದರು. ಈ ವರ್ಷ ಅರ್ಜಿ ಸಲ್ಲಿಸಿದವರ ಸಂಖ್ಯೆ ಸಾವಿರದ ಗಡಿ ದಾಟಿದೆ. ಎಪ್ರಿಲ್, ಮೇ ತಿಂಗಳಲ್ಲಿ ಆನ್‌ಲೈನ್ ಮೂಲಕ ಈ ಎಲ್ಲ ಅರ್ಜಿಗಳು ಸಲ್ಲಿಕೆಯಾಗಿವೆ.