Advertisement

ನೀತಿ ಸಂಹಿತೆ ಜಾರಿ ಬಳಿಕ 552 ಅಬಕಾರಿ ದಾಳಿ

01:07 PM Mar 29, 2019 | Lakshmi GovindaRaju |

ಕೋಲಾರ: ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಗೆಯಾದ ನಂತರ ಜಿಲ್ಲೆಯಲ್ಲಿ 552 ಅಬಕಾರಿ ದಾಳಿಗಳನ್ನು ನಡೆಸಿ 230 ಕೇಸುಗಳನ್ನು ದಾಖಲಿಸಿ 18.05 ಲಕ್ಷ ರೂ ಮೌಲ್ಯದ ಮದ್ಯ ಹಾಗೂ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಬಕಾರಿ ಜಿಲ್ಲಾಧಿಕಾರಿ ಸುಮಿತ ಹೇಳಿದರು.

Advertisement

ನಗರದ ತಮ್ಮ ಕಚೇರಿಯಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಚುನಾವಣಾ ಬಂದೋಬಸ್ತ್ಗಾಗಿ 18 ಚೆಕ್‌ಪೋಸ್ಟ್‌ಗಳನ್ನು ಅಳವಡಿಸಲಾಗಿದ್ದು, ಈ ಪೈಕಿ 13 ಚೆಕ್‌ಪೋಸ್ಟ್‌ಗಳಲ್ಲಿ ಅಬಕಾರಿ ಸಿಬ್ಬಂದಿ ಕಾರ್ಯಾಚರಣೆ ಮಾಡುತ್ತಿದ್ದಾರೆಂದು ವಿವರಿಸಿದರು.

ಕೇಸು, ದಂಡ ವಸೂಲಿ: ಈವರೆವಿಗೂ ಒಟ್ಟು 230 ಕೇಸುಗಳನ್ನು ದಾಖಲು ಮಾಡಿಕೊಂಡಿದ್ದು, ಈ ಪೈಕಿ 33 ಕೇಸುಗಳು ಘೋರ ಅಪರಾಧ, 172 ಕೇಸುಗಳು 15ಎ ಸೆಕ್ಷನ್‌ ಅಡಿ ದಾಖಲಾಗಿದೆ. ಉಳಿದ 25 ಕೇಸುಗಳು ಬಿಎಲ್‌ಸಿ ಅಡಿ ದಾಖಲಾಗಿದೆ, 22 ಮಂದಿಯನ್ನು ವಿವಿಧ ಅಪರಾಧ ಪ್ರಕರಣಗಳಲ್ಲಿ ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, 1.73 ಲಕ್ಷ ರೂ.ಗಳ ದಂಡ ವಿಧಿಸುವಂತೆ ಮಾಡಲಾಗಿದೆಯೆಂದು ಹೇಳಿದರು.

ಈ ಪ್ರಕರಣಗಳಡಿಯಲ್ಲಿ 22 ಬೈಕ್‌, 1 ಆಟೋ, 2 ಸಾವಿರ ಲೀಟರ್‌ ಮದ್ಯ ಮತ್ತು 2 ಸಾವಿರ ಲೀಟರ್‌ ಬೀರ್‌ ವಶಪಡಿಸಿಕೊಳ್ಳಲಾಗಿದೆ. ಹಗಲು ರಾತ್ರಿ ಕಾರ್ಯಾಚರಣೆ ನಡೆಸಲು ತನಿಖಾ ತಂಡಗಳನ್ನು ರಚಿಸಲಾಗಿದೆ ಎಂದರು.

500 ಲೀ. ಕಳ್ಳಭಟ್ಟಿ ನಾಶ: ಅಬಕಾರಿ ಅಪರಾಧಗಳನ್ನು ತಡೆಗಟ್ಟುವ ಉದ್ದೇಶದಿಂದ ನೆರೆ ರಾಜ್ಯದ ಅಬಕಾರಿ ಅಧಿಕಾರಿಗಳೊಂದಿಗೆ ತಮಿಳುನಾಡಿನ ಹೊಸೂರು ಮತ್ತು ಆಂಧ್ರಪ್ರದೇಶದ ಹೈದರಾಬಾದ್‌ನಲ್ಲಿ ಅಧಿಕಾರಿಗಳ ಸಭೆ ನಡೆಸಲಾಗಿದೆ. ಜಂಟಿ ಕಾರ್ಯಾಚರಣೆಯ ಭಾಗವಾಗಿಯೇ ಬುಧವಾರ ಆಂಧ್ರಪ್ರದೇಶದ ಪುಂಗನೂರು ಬಳಿ 500 ಲೀಟರ್‌ ಕಳ್ಳಭಟ್ಟಿ ಕೊಳೆಯನ್ನು ನಾಶಪಡಿಸಲಾಗಿದೆ ಎಂದು ಹೇಳಿದರು.

Advertisement

ಅಬಕಾರಿ ಅಪರಾಧಗಳ ದೂರುಗಳನ್ನು ಸ್ಪೀಕರಿಸಲು ಕಂಟ್ರೋಲ್‌ ರೂಂ ಡೀಸಿ ಕಚೇರಿಯಲ್ಲಿ ಪ್ರಾರಂಭಿಸಲಾಗಿದ್ದು, ದೂರು ಬಂದ 24 ಗಂಟೆಯೊಳಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದರು.

ಅಬಕಾರಿ ನಿಗಾ: ಆಯೋಗವು ಚುನಾವಣೆಯ ಸಂದರ್ಭದಲ್ಲಿ ಸರಾಸರಿಗಿಂತಲೂ ಶೇ.30 ರಷ್ಟು ಹೆಚ್ಚಿನ ಮದ್ಯ ಮಾರಾಟವಾದರೆ ನಿಗಾ ಇಡುವಂತೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮಾಡಲಾಗುತ್ತಿದ್ದು, ಕೋಲಾರ ಜಿಲ್ಲೆಯಲ್ಲಿ ಹಿಂದಿನ ವರ್ಷದ ಮಾರ್ಚ್‌ಗೆ ಹೋಲಿಸಿದರೆ ಕಡಿಮೆ ಮದ್ಯ ಮಾರಾಟವಾಗಿದೆ ಎಂದು ತಿಳಿಸಿದರು.

2018 ಮಾರ್ಚ್‌ನಲ್ಲಿ 1.36 ಲಕ್ಷ ಲೀಟರ್‌ ಬೀರ್‌ ಮಾರಾಟವಾಗಿದ್ದರೆ, ಈ ವರ್ಷ ಕೇವಲ 95 ಸಾವಿರ ಲೀಟರ್‌ ಬೀರ್‌ ಮಾರಾಟವಾಗಿದೆ. ಈ ವರ್ಷದ ಮಾರ್ಚ್‌ನ ಮಾರಾಟ ಗುರಿಯೇ 1.10 ಲಕ್ಷ ಲೀಟರ್‌ ಇದ್ದು ಇದನ್ನು ತಲುಪುವುದು ಕಷ್ಟವಾಗಿದೆಯೆಂದರು.

ಕೋಲಾರ ಜಿಲ್ಲೆಯಲ್ಲಿ ಈಗ ಕ‌ಳ್ಳಭಟ್ಟಿ ಇಳಿಸುವ ಪ್ರಕರಣಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯಾಗಿದ್ದು, ನೆರೆ ರಾಜ್ಯಗಳ ಗಡಿಯಿಂದ ಬರುವ ಕುರಿತು ನಿಗಾವಹಿಸಲಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next