Advertisement

ಮಂಗಳೂರು, ಉಡುಪಿ: ಹೊಸ ವರ್ಷಕ್ಕೆ 54 ಶಿಶು ಜನನ

10:13 AM Jan 02, 2020 | sudhir |

ಮಂಗಳೂರು/ಉಡುಪಿ, ಜ. 1: ಹೊಸ ವರ್ಷ ಹೊಸತನಗಳನ್ನು ಹೊತ್ತು ತರಬೇಕೆಂಬುದು ಪ್ರತಿಯೊಬ್ಬರ ಕನಸು. ಇಂತಹ ವೇಳೆ ಕುಟುಂಬಕ್ಕೆ ಹೊಸ ಅತಿಥಿಯ ಆಗಮನವಾದರೆ ಆ ಕುಟುಂಬದ ಸಂತೋಷಕ್ಕೆ ಪಾರವಿರದು. ಅಂತಹ ಖುಷಿಯನ್ನು ಹೊತ್ತು ತಂದ ಶುಭದಾಯಕ ಸುದ್ದಿ ಇದು.

Advertisement

ಇಡೀ ಮಂಗಳೂರು, ಉಡುಪಿ ಹೊಸ ವರ್ಷದ ಸ್ವಾಗತದಲ್ಲಿ ತೊಡಗಿದ್ದರೆ, ಇತ್ತ 25ಕ್ಕೂ ಹೆಚ್ಚು ಕುಟುಂಬಗಳಲ್ಲಿ ಮುದ್ದು ಕಂದಮ್ಮಗಳ ಆಗಮನವಾಗಿದೆ. ಮಂಗಳೂರು ನಗರದ ವಿವಿಧ ಆಸ್ಪತ್ರೆಗಳಲ್ಲಿ ಜನವರಿ 1ರ ಶುಭ ಗಳಿಗೆಯಲ್ಲಿ 26ಕ್ಕೂ ಹೆಚ್ಚು ಮತ್ತು ಉಡುಪಿ ನಗರದ ವಿವಿಧ ಆಸ್ಪತ್ರೆಗಳಲ್ಲಿ 28ಕ್ಕೂ ಹೆಚ್ಚು ಶಿಶುಗಳ ಜನನವಾಗಿದೆ.

ನಗರದ ಲೇಡಿಗೋಶನ್‌ ಸರಕಾರಿ ಆಸ್ಪತ್ರೆಯಲ್ಲಿ 4 ಹೆಣ್ಣು, 6 ಗಂಡು ಮಕ್ಕಳ ಜನನವಾಗಿದ್ದು, ಒಟ್ಟು 10 ಶಿಶುಗಳು ಜನಿಸಿವೆ. ಇದರಲ್ಲಿ ಒಂದು ಹೆಣ್ಣು ಮತ್ತು ಒಂದು ಗಂಡು ಮಗು ಅವಳಿಯಾಗಿವೆ. ಮಂಗಳಾ ಆಸ್ಪತ್ರೆಯಲ್ಲಿ 1 ಹೆಣ್ಣು ಮಗುವಿನ ಜನನವಾಗಿದೆ. ಮಂಗಳೂರು ನರ್ಸಿಂಗ್‌ ಹೋಂನಲ್ಲಿ 5 ಶಿಶುಗಳು ಜನಿಸಿದ್ದು, ಈ ಪೈಕಿ 2 ಗಂಡು, 3 ಹೆಣ್ಣು ಶಿಶುಗಳು. ಕುಂಟಿಕಾನ ಎ.ಜೆ. ಆಸ್ಪತ್ರೆಯಲ್ಲಿ 1 ಗಂಡು ಮಗು ಜನಿಸಿದೆ. ಅತ್ತಾವರ ಕೆಎಂಸಿ ಆಸ್ಪತ್ರೆಯಲ್ಲಿ 2 ಗಂಡು ಶಿಶುಗಳ ಜನನವಾಗಿದೆ. ಕಂಕನಾಡಿ ಫಾದರ್‌ ಮುಲ್ಲರ್‌ ಆಸ್ಪತ್ರೆಗಳಲ್ಲಿ 7 ಶಿಶುಗಳು ಜನಿಸಿದ್ದು, ಈ ಪೈಕಿ 4 ಗಂಡು, 3 ಹೆಣ್ಣು ಶಿಶುಗಳು. ಇದು ಸಂಜೆ 4.30ರವರೆಗೆ ಲಭ್ಯವಾದ ಸಂಖ್ಯೆಗಳು.

ಗಂಡು ಮಕ್ಕಳೇ ಜಾಸ್ತಿ
ವಿಶೇಷವೆಂದರೆ, 2020ನೇ ವರ್ಷದ ಮೊದಲ ದಿನದಂದು ಹುಟ್ಟಿದ ಮಕ್ಕಳ ಪೈಕಿ ಗಂಡು ಮಕ್ಕಳ ಸಂಖ್ಯೆ ಜಾಸ್ತಿ ಇದೆ. “ಉದಯವಾಣಿ’ಗೆ ಲಭ್ಯವಾದ ಒಟ್ಟು 26 ಮಕ್ಕಳ ಜನನ ಸಂಖ್ಯೆಯ ಪೈಕಿ 15 ಗಂಡು ಮಕ್ಕಳಾದರೆ, 11 ಹೆಣ್ಣು ಮಕ್ಕಳ ಜನನವಾಗಿದೆ. ಇನ್ನು ಇತರ ಆಸ್ಪತ್ರೆಗಳಲ್ಲಿ ಜನನವಾಗಿರುವ ಮಕ್ಕಳ ಸಂಖ್ಯೆ ಲಭ್ಯವಾಗಿಲ್ಲ. 2019ರ ಜ. 1ರಂದು ಹುಟ್ಟಿದ 32 ಶಿಶುಗಳ ಪೈಕಿ 21 ಹೆಣ್ಣು ಶಿಶುಗಳಾಗಿದ್ದವು.

13 ಸಹಜ, 13 ಸಿಸೇರಿಯನ್‌ ಹೆರಿಗೆ
2020ನೇ ಇಸವಿಯ ಮೊದಲ ತಿಂಗಳ ಮೊದಲ ದಿನದಂದು ಜನನವಾದ 26 ಮಕ್ಕಳ ಪೈಕಿ ಸಹಜ ಹೆರಿಗೆ ಮತ್ತು ಸಿಸೇರಿಯನ್‌ ಹೆರಿಗೆ ಸಮಪ್ರಮಾಣದಲ್ಲಿದೆ. 13 ಸಿಸೇರಿಯನ್‌ ಹೆರಿಗೆ ಮತ್ತು 13 ಸಹಜ ಹೆರಿಗೆಗಳು ಜ. 1ರಂದು ಆಗಿವೆ.

Advertisement

ಸಿಸೇರಿಯನ್‌ ಹೆಚ್ಚು
ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಎರಡು ಹೆರಿಗೆಗಳಾಗಿದ್ದು ಒಂದು ಗಂಡು, ಒಂದು ಹೆಣ್ಣು, ಒಂದು ಸಿಸೇರಿಯನ್‌ ಮತ್ತು ಇನ್ನೊಂದು ನಾರ್ಮಲ್‌ ಹೆರಿಗೆಯಾಗಿದೆ. ಉಡುಪಿಯ ಆದರ್ಶ ಆಸ್ಪತ್ರೆಯಲ್ಲಿ ಎರಡು ಹೆರಿಗೆಗಳಲ್ಲಿ ಒಂದು ಗಂಡು, ಒಂದು ಹೆಣ್ಣು ಮಗುವಿನ ಜನನವಾಗಿದೆ. ಇದರಲ್ಲಿ ಒಂದು ಸಿಸೇರಿಯನ್‌ ಮತ್ತು ಒಂದು ನಾರ್ಮಲ್‌ ಹೆರಿಗೆಯಾಗಿದೆ. ಉಡುಪಿ ಡಾ|ಟಿಎಂಎ ಪೈ ಆಸ್ಪತ್ರೆಯಲ್ಲಿ ಮೂರು ಹೆರಿಗೆ ಆಗಿವೆ. ಮೂರೂ ಹೆಣ್ಣು ಮಕ್ಕಳಾಗಿವೆ ಮತ್ತು ಸಿಸೇರಿಯನ್‌ ಆಗಿವೆ. ಕೂಸಮ್ಮ ಶಂಭು ಶೆಟ್ಟಿ ಹಾಜಿ
ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಟ್ಟು 16 ಹೆರಿಗೆಗಳಾಗಿವೆ. ಇದರಲ್ಲಿ ಆರು ನಾರ್ಮಲ್‌ ಮತ್ತು ಹತ್ತು ಸಿಸೇರಿಯನ್‌ ಹೆರಿಗೆಯಾಗಿವೆ. 12 ಗಂಡು ಮಕ್ಕಳು, ನಾಲ್ಕು ಹೆಣ್ಣು ಮಕ್ಕಳಾಗಿವೆ.

ಉಡುಪಿ ಗಾಂಧಿ ಆಸ್ಪತ್ರೆಯಲ್ಲಿ
ಎರಡು ಹೆರಿಗೆಯಾಗಿವೆ. ಒಂದು ಗಂಡು, ಒಂದು ಹೆಣ್ಣು ಮಗುವಾಗಿದ್ದು ಎರಡೂ ಸಿಸೇರಿಯನ್‌ ಆಗಿವೆ. ಮಿಶನ್‌ ಆಸ್ಪತ್ರೆಯಲ್ಲಿ ಒಂದು ಸಿಸೇರಿಯನ್‌ ಹೆರಿಗೆಯಾಗಿದ್ದು ಇದು ಗಂಡು ಮಗುವಾಗಿದೆ. ಲಲಿತ್‌ ಆಸ್ಪತ್ರೆಯಲ್ಲಿ ಒಂದು ಸಿಸೇರಿಯನ್‌ ಹೆರಿಗೆಯಾಗಿದ್ದು ಹೆಣ್ಣು ಮಗುವಾಗಿದೆ. ನ್ಯೂ ಸಿಟಿ ಆಸ್ಪತ್ರೆಯಲ್ಲಿ ಒಂದು ಸಿಸೇರಿಯನ್‌ ಹೆರಿಗೆಯಾಗಿದ್ದು ಹೆಣ್ಣು ಮಗುವಾಗಿದೆ. ಒಟ್ಟು ಮಕ್ಕಳಲ್ಲಿ 16 ಗಂಡು, 12 ಹೆಣ್ಣು ಮಕ್ಕಳು. ರಾತ್ರಿ 12 ಗಂಟೆಯೊಳಗೆ ಇನ್ನೂ ಹೆರಿಗೆಯಾಗುವ ಸಾಧ್ಯತೆಗಳಿವೆ.

ಫ್ಯಾನ್ಸಿ ನಂಬರ್‌ ಮೋಹಕ್ಕೊಳಗಾಗಿ ಜ. 1ರ ಹೊಸ ವರ್ಷದಂದೇ ಶಿಶು ಜನನವಾಗಬೇಕಂಬ ದೃಷ್ಟಿಯಿಂದ ಕೆಲವರು ಸಿಸೇರಿಯನ್‌ ಮೊರೆ ಹೋಗುವುದಿದೆ. ಆದರೆ, ಬುಧವಾರ ಜನಿಸಿದ ಶಿಶುಗಳ ಪೈಕಿ ಅಂತಹ ಒತ್ತಡಗಳಿರಲಿಲ್ಲ. ಬದಲಾಗಿ ಸಹಜ ಹೆರಿಗೆ ಸಾಧ್ಯವಾಗದ್ದನ್ನು ಸಿಸೇರಿಯನ್‌ ಮಾಡಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. ಆದರೆ ಉಡುಪಿಯಲ್ಲಿ ಸಿಸೇರಿಯನ್‌ ಸಂಖ್ಯೆ ಜಾಸ್ತಿ ಇರುವುದರಿಂದ ಹೊಸ ವರ್ಷದಂದು ಜನಿಸಬೇಕೆಂಬ ಒತ್ತಡ ಇರಬಹುದೆ ಎಂಬ ಸಂದೇಹ ಬರುತ್ತದೆ.

ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಒಟ್ಟು 16 ಹೆರಿಗೆಗಳಾಗಿವೆ. ಎಲ್ಲರೂ ಆರೋಗ್ಯದಿಂದ ಇದ್ದಾರೆ.
– ಡಾ| ಮಧುಸೂದನ ನಾಯಕ್‌, ಜಿಲ್ಲಾ ಸರ್ಜನ್‌, ಉಡುಪಿ

ತಾಯಿ-ಶಿಶು ಆರೋಗ್ಯ
ಸರಕಾರಿ ಲೇಡಿಗೋಶನ್‌ ಆಸ್ಪತ್ರೆಯಲ್ಲಿ ಜ. 1ರಂದು ಸಂಜೆ 4.30ರ ವರೆಗೆ ಎಂಟು ಹೆರಿಗೆಗಳಾಗಿದ್ದು, 10 ಶಿಶುಗಳ ಜನನವಾಗಿದೆ. ಈ ಪೈಕಿ 1 ಗಂಡು ಮತ್ತು 1 ಹೆಣ್ಣು ಅವಳಿ ಜನನವಾಗಿದೆ. ಎಲ್ಲ ತಾಯಂದಿರು ಮತ್ತು ಶಿಶುಗಳು ಆರೋಗ್ಯವಾಗಿದ್ದಾರೆ. ಹೊಸ ವರ್ಷದಂದು ಮಕ್ಕಳ ಜನನವಾಗಿದ್ದಕ್ಕೆ ತಾಯಂದಿರೂ ಖುಷಿಯಲ್ಲಿದ್ದಾರೆ.
-ಡಾ| ಸವಿತಾ, ವೈದ್ಯಕೀಯ ಅಧೀಕ್ಷಕಿ,ಸರಕಾರಿ ಲೇಡಿಗೋಶನ್‌ ಆಸ್ಪತ್ರೆ ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next