Advertisement

ಶ್ರೀನಿವಾಸಪುರ: ದೇವಸ್ಥಾನದ ಪ್ರಸಾದ ಸೇವಿಸಿ ಸುಮಾರು 50 ಮಂದಿ ಅಸ್ವಸ್ಥ!

11:48 AM Jan 02, 2022 | Team Udayavani |

ಕೋಲಾರ: ಪ್ರಸಾದ ಸೇವಿಸಿ ಸುಮಾರು ಐವತ್ತು ಮಂದಿ ವಾಂತಿಯಿಂದ ಅಸ್ವಸ್ಥರಾದ ಘಟನೆ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಬೀರಗಾನಹಳ್ಳಿಯಲ್ಲಿ ಶನಿವಾರ ರಾತ್ರಿ ಜರುಗಿದೆ.

Advertisement

ಬೀರಗಾನಹಳ್ಳಿ ಗ್ರಾಮದ ಗಂಗಮ್ಮ ದೇವಾಲಯದಲ್ಲಿ ಹೊಸ ವರ್ಷಾಚರಣೆ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು. ಪ್ರಸಾದವಾಗಿ ತಯಾರಿಸಿದ್ದ ಚಿತ್ರಾನ್ನ ಮತ್ತು ಕೇಸರಿಬಾತ್ ಅನ್ನು ಸೇವಿಸಿದ ಭಕ್ತರು ವಾಂತಿ ಮಾಡಿಕೊಂಡು ಅಸ್ವಸ್ಥರಾದ ಕಾರಣ ಈ ಘಟನೆ ಜರುಗಿತು.

ಹೊಸ ವರ್ಷಾಚರಣೆ ಪ್ರಯುಕ್ತ ಬೀರಗಾನಹಳ್ಳಿ ಗಂಗಮ್ಮ ದೇವಾಲಯದಲ್ಲಿ ಮಧ್ಯಾಹ್ನದಿಂದಲೂ ಪ್ರಸಾದ ವಿತರಣೆ ವ್ಯವಸ್ಥೆ ಮಾಡಲಾಗಿತ್ತು. ಮಧ್ಯಾಹ್ನದ ನಂತರ ಕೆಲವರಿಗೆ ವಾಂತಿಯಾಗಿದ್ದು, ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಸುಮ್ಮನಾಗಿದ್ದರು.

ಆದರೆ, ಸಂಜೆ ಮತ್ತು ರಾತ್ರಿಯ ವೇಳೆಗೆ ಪ್ರಸಾದ ಸೇವಿಸಿದ್ದ ಬಹುತೇಕ ಮಕ್ಕಳು, ಮಹಿಳೆಯರಿಗೆ ವಾಂತಿ ಶುರುವಾಗಿದೆ. ಹೀಗೆ ಪ್ರಸಾದ ಸೇವಿಸಿದವರಿಗೆ ವಾಂತಿಯಾಗುತ್ತಿದೆಯೆಂಬ ಮಾಹಿತಿ ಹರಡುತ್ತಿದ್ದಂತೆಯೇ ಪ್ರಸಾದ ಸೇವಿಸಿದ ಇತರರಿಗೂ ಅಸ್ವಸ್ಥತೆ ಕಾಡಿದೆ. ಇದರಿಂದ ಶನಿವಾರ ರಾತ್ರಿ ವೇಳೆಗೆ ಶ್ರೀನಿವಾಸಪುರ ಸರಕಾರಿ ಆಸ್ಪತ್ರೆ, ಹಲವು ಖಾಸಗಿ ನರ್ಸಿಂಗ್ ಹೋಂ, ಆಸ್ಪತ್ರೆಗಳು, ಯಲ್ದೂರು ಆಸ್ಪತ್ರೆ ಇತ್ಯಾದಿಗಳೆಡೆಯಲ್ಲಿ ಪ್ರಸಾದ ಸೇವಿಸಿದವರು ಚಿಕಿತ್ಸೆಗೆ ಧಾವಿಸಿದ್ದಾರೆ. ಇದರಿಂದ ಸಾರ್ವಜನಿಕವಾಗಿ ತೀವ್ರ ಆತಂಕ ಉಂಟಾಗಿತ್ತು.

ಆದರೆ, ವಾಂತಿ ಮತ್ತು ಗಾಬರಿಯಿಂದಾಗಿ ಕೊಂಚ ಸುಸ್ತಾಗಿ ಅಸ್ವಸ್ಥರಾಗಿದ್ದವರಿಗೆ ಪ್ರಾಥಮಿಕ ಚಿಕಿತ್ಸೆ ಮತ್ತು ಕೆಲವರಿಗೆ ಗ್ಲೂಕೋಸ್ ನೀಡಿ ಕಳುಹಿಸಲಾಗಿದೆ. ಯಾರ ಪ್ರಾಣಕ್ಕೂ ಅಪಾಯವಾಗಿರುವ ವರದಿಗಳಿಲ್ಲ. ಕೆಲವರು ರಾತ್ರಿಯೇ ಚಿಕಿತ್ಸೆ ಪಡೆದು ಮನೆಗಳಿಗೆ ವಾಪಸಾಗಿದ್ದಾರೆ.

Advertisement

ಇದನ್ನೂ ಓದಿ:ಅನಾಥನಿಗೆ ಪ್ರೀತಿ ತೋರಿದ ನಾಯಿ:ವೈರಲ್ ವಿಡಿಯೋ; ಕಣ್ಣೀರಿಟ್ಟ ನೆಟಿಜನ್‌ಗಳು

ಗ್ರಾಮಕ್ಕೆ ಶ್ರೀನಿವಾಸಪುರ ಆರೋಗ್ಯಾಧಿಕಾರಿ ವಿಜಯ ಭೇಟಿ ನೀಡಿ ಪರಿಶೀಲಿಸಿದರು. ಪರಿಸ್ಥಿತಿ ಹತೋಟಿಯಲ್ಲಿರುವುದನ್ನು ಖಚಿತಪಡಿಸಿಕೊಂಡರು. ಭಾನುವಾರ ಬೆಳಿಗ್ಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಜಗದೀಶ್ ಶ್ರೀನಿವಾಸಪುರ ಆಸ್ಪತ್ರೆ ಮತ್ತು ಘಟನೆ ನಡೆದ ಬೀರಗಾನಹಳ್ಳಿಗೆ ಭೇಟಿ ನೀಡಿ ಪರಿಶೀಲಿಸಿ ಅಗತ್ಯಮುನ್ನೆಚ್ಛರಿಕೆ ಕ್ರಮವಹಿಸುವಂತೆ ಸೂಚಿಸಿದರು.

ಬೀರಗಾನಹಳ್ಳಿ ಗಂಗಮ್ಮ ದೇವಿಯ ದೇವಾಲಯದ ಪ್ರಸಾದ ಹಾಗೂ ಇನ್ನಿತರ ಜಲ ಮೂಲಗಳನ್ನು ಆರೋಗ್ಯಾಧಿಕಾರಿಗಳು ಪರಿಶೀಲಿಸುತ್ತಿದ್ದು, ಘಟನೆಗೆ ಕಾರಣವೇನೆಂದು ಪತ್ತೆ ಹಚ್ಚುವ ಪ್ರಯತ್ನ ಮುಂದುವರೆಸಿದ್ದಾರೆ.

ಇಬ್ಬರ ಬಂಧನ: ಬೀರಗಾನಹಳ್ಳಿಯ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡಿರುವ ಶ್ರೀನಿವಾಸಪುರ ಪೊಲೀಸರು ಪ್ರಸಾದ ತಯಾರಿಸಿಕೊಂಡು ಬಂದಿದ್ದ ಇಬ್ಬರನ್ನು ವಶಪಡಿಸಿಕೊಂಡು ವಿಚಾರಣೆ ಮಾಡುತ್ತಿದ್ದಾರೆಂದು ತಿಳಿದು ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next