Advertisement

ಉಡುಪಿ: 53 ಪಾಸಿಟಿವ್‌, ಮತ್ತೊಂದು ಸಾವು ; ಬಾಧಿತರೆಲ್ಲರೂ ಸ್ಥಳೀಯರು

12:57 AM Jul 14, 2020 | Hari Prasad |

ಉಡುಪಿ: ಜಿಲ್ಲೆಯಲ್ಲಿ ಸೋಮವಾರ 53 ಪಾಸಿಟಿವ್‌ ಪ್ರಕರಣಗಳು ವರದಿಯಾಗಿವೆ.

Advertisement

ಕೋವಿಡ್ 19 ಸೋಂಕು ಬಾಧಿತ 72 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ.

ಉಪ್ಪುಂದ ಮೂಲದ ಅವರು ಡಾ| ಟಿಎಂಎ ಪೈ ಆಸ್ಪತ್ರೆಯಲ್ಲಿ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ವಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು.

ಆದರೆ ಸೋಮವಾರ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಬಹು ಅಂಗಗಳ ವೈಫ‌ಲ್ಯದಿಂದ ಬಳಲುತ್ತಿದ್ದರು.

ಉಡುಪಿಯಲ್ಲಿ ಅಂತಿಮ ಸಂಸ್ಕಾರ ನಡೆಯಿತು ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿಗೆ ನಾಲ್ಕನೆಯ ಸಾವು ಉಂಟಾಗಿದೆ. ಶುಕ್ರವಾರ ಮೃತಪಟ್ಟ ದಾವಣಗೆರೆಯ ಹಿರಿಯರೊಬ್ಬರ ಸಾವು ದಾವಣಗೆರೆ ಜಿಲ್ಲೆಯ ವ್ಯಾಪ್ತಿಗೆ ಸೇರಿದೆ.

Advertisement

ಸೋಂಕಿತರಲ್ಲಿ 31 ಪುರುಷರು, 18 ಮಹಿಳೆಯರು, ಇಬ್ಬರು ಹೆಣ್ಣು ಮಕ್ಕಳು, ಇಬ್ಬರು ಗಂಡು ಮಕ್ಕಳು. ಉಡುಪಿ ತಾಲೂಕಿನ 27, ಕುಂದಾಪುರದ 23, ಕಾರ್ಕಳದ ಮೂವರು ಇದ್ದಾರೆ. ಜ್ವರ ಲಕ್ಷಣದ 12 ಮಂದಿ ಮತ್ತು ಉಳಿದವರು ಪ್ರಾಥಮಿಕ ಸಂಪರ್ಕದವರು. ಇದೇ ಪ್ರಥಮ ಬಾರಿಗೆ ಮುಂಬಯಿ, ದುಬಾೖ, ಬೆಂಗಳೂರು ಹೀಗೆ ವಿವಿಧ ಊರುಗಳಿಂದ ಬಂದವರು ಯಾರೂ ಇಲ್ಲದ, ಕೇವಲ ಸ್ಥಳೀಯರೇ ಸೋಂಕಿತರಾಗಿರುವುದು ಕಂಡುಬಂದಿದ್ದು ಸಮುದಾಯಕ್ಕೆ ಹರಡಿರುವ ಶಂಕೆ ಮೂಡಿದೆ.

65 ಮಂದಿ ಬಿಡುಗಡೆ
ಸೋಮವಾರ 260 ನೆಗೆಟಿವ್‌ ಪ್ರಕರಣ ವರದಿಯಾಗಿದೆ. ಉಡುಪಿ ಡಾ| ಟಿಎಂಎ ಪೈ ಆಸ್ಪತ್ರೆಯಿಂದ 12, ಕುಂದಾಪುರ ತಾ| ಆಸ್ಪತ್ರೆಯಿಂದ 50, ಕಾರ್ಕಳ ತಾಲೂಕು ಆಸ್ಪತ್ರೆಯಿಂದ ಮೂವರು ಸೇರಿದಂತೆ ಒಟ್ಟು 65 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಒಟ್ಟು 1,661 ಪಾಸಿಟಿವ್‌ ಪ್ರಕರಣಗಳಲ್ಲಿ 1,280 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 378 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. 1,749 ಜನರ ಮಾದರಿಗಳ ವರದಿ ಬರಬೇಕಾಗಿದೆ. 1,401 ಮಂದಿ ಮನೆಗಳಲ್ಲಿ ಮತ್ತು 148 ಮಂದಿ ಐಸೊಲೇಶನ್‌ ವಾರ್ಡ್‌ಗಳಲ್ಲಿ ನಿಗಾದಲ್ಲಿದ್ದಾರೆ. 34 ಮಂದಿ ಐಸೊಲೇಶನ್‌ ವಾರ್ಡ್‌ ನಿಗಾಕ್ಕೆ ಸೇರಿದ್ದು 26 ಮಂದಿ ಬಿಡುಗಡೆಗೊಂಡಿದ್ದಾರೆ.

ಸೀಲ್‌ಡೌನ್‌
ಕರಂಬಳ್ಳಿ ಸಂತೋಷನಗರದ 3ನೇ ಕ್ರಾಸ್‌, ಪೆರಂಪಳ್ಳಿ ಬೊಬ್ಬರ್ಯ ದೈವಸ್ಥಾನದ ಬಳಿ, ಮಣಿಪಾಲ ಎಎಲ್‌ಎನ್‌ಲೇಔಟ್‌, ಮೂಡುತೋನ್ಸೆ, ಮೂಡನಿಡಂಬೂರು, 41 ಶಿರೂರು, ಕಿನ್ನಿಮೂಲ್ಕಿಯಲ್ಲಿ ತಲಾ ಒಂದು ಮನೆ, ಹೆರ್ಗದಲ್ಲಿ ಎರಡು ಮನೆ, ಪೆರಂಪಳ್ಳಿಯಲ್ಲಿ ಒಂದು ಫ್ಲ್ಯಾಟನ್ನು ಸೀಲ್‌ಡೌನ್‌ ಮಾಡಲಾಗಿದೆ. ಹೆರ್ಗದ ಮಾಂಸದ ಅಂಗಡಿ ಮಾಲಕರೊಬ್ಬರ ಮನೆಯನ್ನು ಸೀಲ್‌ಡೌನ್‌ ಮಾಡಿದ್ದು ಮಂಗಳವಾರ ಪ್ರಾಯಃ ಅವರ ಅಂಗಡಿಯನ್ನೂ ಸೀಲ್‌ಡೌನ್‌ ಮಾಡುವ ಸಾಧ್ಯತೆ ಇದೆ.

ಕುಂದಾಪುರ: ಎಎಸ್‌ಪಿ ಕಚೇರಿ ಸಿಬಂದಿಗೆ ಸೋಂಕು
ಉಪವಿಭಾಗ ಕಚೇರಿ ಪೊಲೀಸ್‌ ಸಿಬಂದಿಗೆ ಕೋವಿಡ್ 19 ಸೋಂಕು ತಗಲಿದ ಕಾರಣ ಎರಡು ದಿನಗಳ ಕಾಲ ಎಎಸ್‌ಪಿ ಕಚೇರಿ ಮುಚ್ಚುಗಡೆಯಾಗಲಿದೆ. ಎಎಸ್‌ಪಿ ಕಚೇರಿಯ ಒಬ್ಬ ಸಿಬಂದಿ, ಹೈವೇ ಪೆಟ್ರೋಲ್‌ ಕರ್ತವ್ಯದಲ್ಲಿದ್ದ ಕುಂದಾಪುರ ಸಂಚಾರ ಠಾಣೆಯ ಎಎಸ್‌ಐ ಹಾಗೂ ಅದರ ಚಾಲಕರಿಗೆ (ಜಿಲ್ಲಾ ಸಶಸ್ತ್ರ ಪಡೆಯ ಸಿಬಂದಿ) ಪಾಸಿಟಿವ್‌ ಕಾಣಿಸಿದೆ. ಎಎಸ್‌ಪಿ ಕಚೇರಿ ಸಿಬಂದಿ ಜು. 2ರಿಂದ, ಉಳಿದವರು ಜು. 5ರಿಂದ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಎಎಸ್‌ಪಿ ಕಚೇರಿಯನ್ನು ಎರಡು ದಿನಗಳ ಕಾಲ ಮುಚ್ಚಿ ಸ್ಯಾನಿಟೈಸ್‌ ಮಾಡಲಾಗುವುದು. ಕಚೇರಿ ತಾತ್ಕಾಲಿಕವಾಗಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಕಚೇರಿಯಲ್ಲಿ ಕಾರ್ಯ ನಿರ್ವಹಿಸಲಿದೆ.

ಕಾಪು: ಸೆಲೂನ್‌ ಸಿಬಂದಿಗೆ ಸೋಂಕು
ಮಂಗಳೂರಿನ ಆಸ್ಪತ್ರೆಗೆ ಚಿಕಿತ್ಸೆಗೆ ತೆರಳಿದ್ದ ಕಾಪು ಪೊಲಿಪುವಿನ ಮಹಿಳೆ ಮತ್ತು ಕಾಪು ಪೇಟೆಯ ಸೆಲೂನೊಂದರ ಆಂಧ್ರ ಮೂಲದ ಕಾರ್ಮಿಕನಿಗೆ ಸೋಮವಾರ ಸೋಂಕು ದೃಢವಾಗಿದೆ. 3-4 ದಿನಗಳಿಂದ ಆ ಸೆಲೂನ್‌ಗೆ ತೆರಳಿರುವ ಗ್ರಾಹಕರ ಮಾಹಿತಿ ಕಲೆ ಹಾಕಲಾಗುತ್ತಿದೆ. ಗ್ರಾಹಕರು ತಾವಾಗಿ ಆರೋಗ್ಯ ಇಲಾಖೆಗೆ ಮಾಹಿತಿ ನೀಡುವ ಮೂಲಕ ಸೋಂಕು ಹರಡದಂತೆ ನೋಡಿಕೊಳ್ಳಲು ಕಾಪು ವೈದ್ಯಾಧಿ ಕಾರಿ ಡಾ| ಸುಬ್ರಾಯ ಕಾಮತ್‌ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next