Advertisement

ರಾಂಧವನಿಗೆ 50ರ ಸಂಭ್ರಮ

08:26 AM Nov 02, 2019 | Team Udayavani |

ನಟ ಭುವನ್‌ ಪೊನ್ನಣ್ಣ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಿದ್ದ “ರಾಂಧವ’ ಚಿತ್ರ ಸದ್ದಿಲ್ಲದೆ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಚಿತ್ರತಂಡ “ರಾಂಧವ’ನ ಅರ್ಧ ಶತಕದ ಸಂಭ್ರಮವನ್ನು ಅದ್ಧೂರಿಯಾಗಿ ಆಚರಿಸಿತು. ಇದೇ ವೇಳೆ ಚಿತ್ರತಂಡ, ಕನ್ನಡ ಚಿತ್ರರಂಗದಲ್ಲಿ ಹಲವು ದಶಕಗಳಿಂದ ಹಾಸ್ಯ ನಟರಾಗಿ ಅಭಿನಯಿಸುತ್ತಿರುವ ಅನೇಕ ಹಿರಿಯ ಕಲಾವಿದರನ್ನು ಸನ್ಮಾನಿಸಿದ್ದು ವಿಶೇಷವಾಗಿತ್ತು.

Advertisement

ಸಚಿವ ಆರ್‌. ಅಶೋಕ್‌, ನಿರ್ಮಾಪಕ ಸೌಂದರ್ಯ ಜಗದೀಶ್‌, ಚಿತ್ರ ಸಾಹಿತಿ ಮತ್ತು ನಿರ್ದೇಶಕ ಕವಿರಾಜ್‌, ನಟಿ ಹರ್ಷಿಕಾ ಪೂಣಚ್ಚ ಮೊದಲಾದವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ “ರಾಂಧವ’ನ ಐವತ್ತು ದಿನಗಳ ಯಶಸ್ವಿ ಪ್ರದರ್ಶನಕ್ಕೆ ಅಭಿನಂದಿಸಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಹಿರಿಯ ಹಾಸ್ಯ ನಟ ಸರಿಗಮ ವಿಜಿ, ಬ್ಯಾಂಕ್‌ ಜನಾರ್ಧನ್‌, ಡಿಂಗ್ರಿ ನಾಗರಾಜ್‌, ಟೆನ್ನಿಸ್‌ ಕೃಷ್ಣ ಸೇರಿದಂತೆ ಹಲವು ಕಲಾವಿದರನ್ನು ಸನ್ಮಾನಿಸಲಾಯಿತು.

ಇದೇ ವೇಳೆ ಮಾತನಾಡಿದ ನಟ ಭುವನ್‌ ಪೊನ್ನಣ್ಣ, “ಮೊದಲ ಬಾರಿಗೆ “ರಾಂಧವ’ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕ ನಟನಾಗಿ ಅಭಿನಯಿಸಿದ್ದು, ಮರೆಯಲಾರದ ಅನುಭವ. ರಿಲೀಸ್‌ ವೇಳೆ, ಪ್ರೇಕ್ಷಕರು ಚಿತ್ರವನ್ನು ಹೇಗೆ ಸ್ವೀಕರಿಸುತ್ತಾರೋ ಎನ್ನುವ ಭಯವಿತ್ತು. ರಿಲೀಸ್‌ ಆದ ನಂತರ ಚಿತ್ರವನ್ನು ನೋಡಿದ ಪ್ರೇಕ್ಷಕರು, ವಿಮರ್ಶಕರು ಚಿತ್ರದ ಬಗ್ಗೆ ಸಾಕಷ್ಟು ಒಳ್ಳೆಯ ಮಾತುಗಳನ್ನಾಡುತ್ತಿದ್ದಾರೆ. ಮೊದಲ ಚಿತ್ರಕ್ಕೆ, ನಾನು ಮಾಡಿದ ಪಾತ್ರಕ್ಕೆ ಇಷ್ಟು ದೊಡ್ಡ ಮಟ್ಟದ ರೆಸ್ಪಾನ್ಸ್‌ ಸಿಗುತ್ತಿರುವುದನ್ನು ಕಂಡು ಖುಷಿಯಾಗಿದೆ. ಚಿತ್ರ ಯಶಸ್ವಿಯಾಗಿ ಐವತ್ತು ದಿನ ಪೂರೈಸಿರುವುದು ನನಗೆ, ನಮ್ಮ ತಂಡಕ್ಕೆ ಹೊಸ ಹುರುಪು ತಂದಿದೆ. ಈ ಖುಷಿಯನ್ನು ಅರ್ಥಪೂರ್ಣವಾಗಿ ಮತ್ತು ವಿಶೇಷವಾಗಿ ಆಚರಿಸುವ ಉದ್ದೇಶದಿಂದ, ಈ ಸಂದರ್ಭದಲ್ಲಿ ಕನ್ನಡದ ಹಿರಿಯ ಹಾಸ್ಯ ನಟರನ್ನು ಸನ್ಮಾನಿಸಲು ನಿರ್ಧರಿಸಿದೆವು. “ರಾಂಧವ’ ನನಗೆ, ನಮ್ಮ ತಂಡಕ್ಕೆ ಸಾಕಷ್ಟು ಅನುಭವ ತಂದುಕೊಟ್ಟಿದೆ’ ಎಂದು ತಮ್ಮ ಖುಷಿಯನ್ನು ಹಂಚಿಕೊಂಡರು.

ಸಮಾರಂಭದಲ್ಲಿ ಹಾಜರಿದ್ದ ನಿರ್ದೇಶಕ ಸುನೀಲ್‌ ಆಚಾರ್ಯ, ನಟಿಯರಾದ ಅಪೂರ್ವ, ವಾಣಿಶ್ರೀ, ಲಕ್ಷ್ಮೀ ಹೆಗಡೆ, ನಟ ಮಂಜುನಾಥ ಹೆಗ್ಡೆ ಮೊದಲಾದವರು ಚಿತ್ರದ ಬಗ್ಗೆ ತಮ್ಮ ಖುಷಿಯನ್ನು ಹಂಚಿಕೊಂಡರು. ಇದೇ ಸಂದರ್ಭದಲ್ಲಿ “ರಾಂಧವ’ ಚಿತ್ರದಲ್ಲಿ ಅಭಿನಯಿಸಿದ ಕಲಾವಿದರು ಮತ್ತು ತಂತ್ರಜ್ಞರಿಗೆ ಸ್ಮರಣಿಗೆ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next