Advertisement
ಅಂಗಡಿ ಮಾಲಕ, ಕಾರ್ಕಡ ನಿವಾಸಿ ಗ್ರೇಶನ್ ಲೋಬೊ (37) ಲೂಟಿಗೊಳಗಾದ ವ್ಯಕ್ತಿ. ಗ್ರಾಹಕರ ಸೋಗಿನಲ್ಲಿ ಬಂದು ಕೃತ್ಯ: ವ್ಯಾಪಾರ ಮುಗಿಸಿ ಅಂಗಡಿಯ ಎದುರು ಬಾಗಿಲನ್ನು ಹಾಕಿ ಮನೆಗೆ ಹೋಗಲು ತಯಾರಿ ನಡೆಸುತ್ತಿದ್ದ ಸಂದರ್ಭ ಹೆಲ್ಮೆಟ್ ಧರಿಸಿದ್ದ ವ್ಯಕ್ತಿಯೋರ್ವ ಗ್ರಾಹಕನಂತೆ ಹಿಂದಿನ ಬಾಗಿಲಿನಿಂದ ಒಳಗಡೆ ಬಂದು ಕೋಳಿ ಕ್ಲೀನ್ ಮಾಡಿಕೊಡುವಂತೆ ವಿನಂತಿಸಿಕೊಂಡ. ವ್ಯಾಪಾರ ಮುಗಿದಿದ್ದು ಇವತ್ತು ಸಾಧ್ಯವಿಲ್ಲ, ಫ್ರಿಜ್‌ನಲ್ಲಿಟ್ಟು ನಾಳೆ ಕ್ಲೀನ್ ಮಾಡಿಕೊಡುವುದಾಗಿ ಅಂಗಡಿ ಮಾಲಕ ಆತನಿಗೆ ತಿಳಿಸಿದ್ದರು ಹಾಗೂ ಆತ ನೀಡಿದ ಪ್ಲಾಸ್ಟಿಕ್ ಚೀಲವನ್ನು ಫ್ರಿಜ್‌ನಲ್ಲಿ ಇಡಲು ತೆರಳುತ್ತಿದ್ದಾಗ ಆ ಅಪರಿಚಿತ ವ್ಯಕ್ತಿ ಮುಖಕ್ಕೆ ಖಾರದ ಪುಡಿ ಎರಚಿದ್ದು, ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದ ಇನ್ನೋರ್ವ ವ್ಯಕ್ತಿ ಅಂಗಡಿಯೊಳಗೆ ಪ್ರವೇಶಿಸಿ ಚೂರಿ ತೋರಿಸಿ ಕೊಲ್ಲುವುದಾಗಿ ಬೆದರಿಕೆ ಹಾಕಿ ಕ್ಯಾಶ್ ಬಾಕ್ಸಿನಲಿದ್ದ 50 ಸಾವಿರ ರೂ. ದೋಚಿ, ಅಂಗಡಿ ಮಾಲಕನ ಕೈಕಾಲುಗಳನ್ನು ಕಟ್ಟಿ ಮಂಚದ ಕೆಳಗಡೆ ತಳ್ಳಿದ್ದರು.
ಅನಂತರ ಸ್ಥಳೀಯರ ಸಹಕಾರದೊಂದಿಗೆ ಕೈ-ಕಾಲಿಗೆ ಕಟ್ಟಿದ ಹಗ್ಗವನ್ನು ಬಿಚ್ಚಿ ಹಲ್ಲೆ ಗೊಳಗಾದವನನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ದರೋಡೆಕೋರರ ತಂಡ ಕೋಳಿ ಎಂದು ನೀಡಿದ ಚೀಲವನ್ನು ಪರೀಕ್ಷಿಸಿದಾಗ ಅದರಲ್ಲಿ ಕೋಳಿಯ ಬದಲಿಗೆ ಚಾಕು ಮುಂತಾದ ವಸ್ತುಗಳು ಇದ್ದವು. ಅದನ್ನು ಪೊಲೀಸರ ವಶಕ್ಕೆ ನೀಡಲಾಗಿದೆ.
Related Articles
Advertisement
ರವಿವಾರ ಅಂಗಡಿಯಲ್ಲಿ ಸ್ವಲ್ಪ ಹೆಚ್ಚು ವ್ಯಾಪಾರವಿದ್ದು, ಹಣವನ್ನು ಬ್ಯಾಂಕ್‌ಗೆ ಹಾಕದೆ ಅಂಗಡಿಯಲ್ಲೇ ಇರಿಸಿಕೊಳ್ಳಲಾಗಿತ್ತು. ಇದನ್ನೆಲ್ಲ ಗಮನಿಸಿಯೇ ಈ ಕೃತ್ಯ ನಡೆಸಲಾಗಿದೆ.
ಈ ಅನಿರೀಕ್ಷಿತ ಘಟನೆಯಿಂದ ಭೀತಿಗೊಂಡ ಗ್ರೇಶನ್ ಅವರು ಸುಮಾರು 4 ಗಂಟೆ ಆಸ್ಪತ್ರೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ತೀವ್ರ ಅಸ್ವಸ್ಥಗೊಂಡಿದ್ದರು.
ಹಿಂದೊಮ್ಮೆ ದರೋಡೆ ಯತ್ನ ನಡೆದಿತ್ತು: ಗ್ರೇಶನ್ ಲೋಬೊ ಅವರಿಗೆ ಸುಮಾರು ನಾಲ್ಕೈದು ವರ್ಷಗಳ ಹಿಂದೆ ಮನೆಯಲ್ಲಿರುವಾಗ ಅಪರಿಚಿತರು ಚೂರಿ ಇರಿದು ದರೋಡೆ ನಡೆಸಲು ಪ್ರಯತ್ನಿಸಿದ್ದರು. ಆ ಸಂದರ್ಭ ಇವರು ಕೂಗಿಕೊಂಡಾಗ ಅಕ್ಕ-ಪಕ್ಕದ ಮನೆಯವರು ಸ್ಥಳಕ್ಕೆ ಧಾವಿಸಿದ್ದು, ದರೋಡೆ ನಡೆಸಲು ಬಂದ ತಂಡ ಸ್ಥಳದಿಂದ ಪರಾರಿಯಾಗಿತ್ತು. ಈಗ ನಾಲ್ಕೈದು ವರ್ಷದ ಅನಂತರ ಮತ್ತೆ ಅದೇ ಮಾದರಿಯಲ್ಲಿ ಈ ಕೃತ್ಯ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಅಂಗಡಿಯಿಂದ, ಜನ ಸಂಚಾರವಿರುವ ಸಂದರ್ಭ ದಲ್ಲೇ ನಡೆದ ಈ ದರೋಡೆ ಪ್ರಕರಣದಿಂದ ಸಾಲಿಗ್ರಾಮ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್, ಕೋಟ ಠಾಣಾಧಿಕಾರಿ ಸಂತೋಷ್ ಎ. ಕಾಯ್ಕಿಣಿ ಹಾಗೂ ಸಿಬಂದಿ ಆಸ್ಪತ್ರೆಗೆ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ.