Advertisement

Miracle: ಈ ಶಿವಲಿಂಗಕ್ಕೆ ದಿನದ 24 ಗಂಟೆ ಸಮುದ್ರದೇವನಿಂದಲೇ ಅಭಿಷೇಕ… ಏನಿದು ಮಹಿಮೆ

06:08 PM Sep 23, 2024 | ಸುಧೀರ್ |

ಶತಮಾನಗಳಷ್ಟು ಹಳೆಯದಾದ ಇತಿಹಾಸವನ್ನು ಹೊಂದಿರುವ ಅನೇಕ ದೇವಾಲಯಗಳು ನಮ್ಮ ಭಾರತದಲ್ಲಿವೆ. ಕೆಲವು ದೇವಾಲಯಗಳು ಎಷ್ಟು ಪುರಾತನವಾಗಿದೆ ಎಂದರೆ ಅದರ ವಾಸ್ತುಶಿಲ್ಪದ ಆಧಾರದ ಮೂಲಕವೇ ಅಂದಾಜಿಸಬೇಕು. ಶತಮಾನಗಳಿಂದಲೂ ಇಂತಹ ಅನೇಕ ಪುರಾತನ ದೇವಾಲಯಗಳಿಗೆ ನಮ್ಮ ಭಾರತ ಭೂಮಿ ಸಾಕ್ಷಿಯಾಗಿದೆ. ಇಂದಿಗೂ ಅಂತಹ ಅದೆಷ್ಟೋ ದೇವಸ್ಥಾನಗಳನ್ನು ಭಾರತದ ಮೂಲೆ ಮೂಲೆಯಲ್ಲೂ ಕಾಣಬಹುದಾಗಿದೆ. ಅಂತಹ ಪುರಾತನ ದೇವಾಲಯಗಳಲ್ಲಿ ಗಂಗೇಶ್ವರ ಮಹಾದೇವ ದೇವಾಲಯವೂ ಒಂದು. ಇಲ್ಲಿರುವ ಶಿವಲಿಂಗಕ್ಕೆ ಪ್ರತೀ ಎರಡು ನಿಮಿಷಕ್ಕೊಮ್ಮೆ ಸಮುದ್ರದೇವ ಅಭಿಷೇಕ ಮಾಡುತ್ತಾನೆ ಇದನ್ನು ಸ್ವತಃ ಅಲ್ಲಿಗೆ ಹೋಗಿ ಕಣ್ತುಂಬಿಕೊಳ್ಳುವುದೇ ಒಂದು ಪುಣ್ಯ. ಬನ್ನಿ ಹಾಗಾದರೆ ಈ ಪುರಾಣ ಪ್ರಸಿದ್ಧ ಗಂಗೇಶ್ವರ ಮಹಾದೇವ ದೇವಸ್ಥಾನ ಮತ್ತು ಶಿವಲಿಂಗ ಎಲ್ಲಿದೆ ಎಂಬುದನ್ನು ತಿಳಿಯೋಣ…

Advertisement

ಎಲ್ಲಿದೆ ದೇವಸ್ಥಾನ:
ಗಂಗೇಶ್ವರ ಮಹಾದೇವ ದೇವಾಲಯವು ಗುಜರಾತ್ ರಾಜ್ಯದ ಸೋಮನಾಥ ಜ್ಯೋತಿರ್ಲಿಂಗದಿಂದ ಸುಮಾರು 80 ಕಿ.ಮೀ ದೂರದಲ್ಲಿದೆ. ಖಾಸಗಿ ವಾಹನದಲ್ಲಿ ಸುಮಾರು 3 ಗಂಟೆಗಳ ಕಾಲ ಪ್ರಯಾಣಿಸಿದರೆ ಈ ಪುಣ್ಯಸ್ಥಳವನ್ನು ತಲುಪಬಹುದು. ಮತ್ತು ಇದು ಅರಬ್ಬೀ ಸಮುದ್ರದ ಕರಾವಳಿಯ ಫುಡಮ್ ಗ್ರಾಮದ ಕೇಂದ್ರಾಡಳಿತ ಪ್ರದೇಶವಾದ ದಿಯುದಿಂದ 3 ಕಿ.ಮೀ ದೂರದಲ್ಲಿದೆ.

ಇತಿಹಾಸ:
ಗಂಗೇಶ್ವರ ಮಹಾದೇವ ದೇವಾಲಯವು ಸುಮಾರು 5000 ವರ್ಷ ಇತಿಹಾಸವನ್ನು ಹೊಂದಿರುವ ಅತ್ಯಂತ ಹಳೆಯ ದೇವಾಲಯವಾಗಿದೆ, ಮಹಾಭಾರತದ ಕಾಲದಲ್ಲಿ, ಪಂಚಪಾಂಡವರಾದ ಧರ್ಮರಾಜ (ಯುಧಿಷ್ಟರ), ಭೀಮ, ಅರ್ಜುನ, ನಕುಲ ಮತ್ತು ಸಹದೇವರಿಂದ ಐದು ಶಿವಲಿಂಗಗಳನ್ನು ಸ್ಥಾಪಿಸಲಾಯಿತು ಮತ್ತು ಅವರ ಅಜ್ಞಾತವಾಸ ಕಾಲದಲ್ಲಿ ಶಿವಲಿಂಗವನ್ನು ಪೂಜಿಸುತ್ತಿದ್ದರು ಎಂದು ಹೇಳಲಾಗಿದೆ. ಈ ದೇವಾಲಯ ಸಮುದ್ರ ತೀರದಲ್ಲಿರುವುದರಿಂದ ಇದನ್ನು ‘ಸಮುದ್ರ ದೇವಾಲಯ’ ಎಂಬ ಹೆಸರಿನಿಂದಲೂ ಕರೆಯುತ್ತಾರಂತೆ. ಗುಜರಾತ್‌ನ ಅತ್ಯಂತ ಹಳೆಯ ಶಿವ ದೇವಾಲಯಗಳಲ್ಲಿ ಈ ದೇವಾಲಯವೂ ಒಂದಾಗಿದೆ.

Advertisement

ಸಮುದ್ರದೇವನಿಂದ ಅಭಿಷೇಕ:
ಸಮುದ್ರತೀರದಲ್ಲಿರುವ ಬಂಡೆಗಳ ನಡುವೆ ಈ ದೇವಾಲಯವನ್ನು ನಿರ್ಮಿಸಲಾಗಿದೆ. ಯಾತ್ರಾರ್ಥಿಗಳು ಗುಹಾಲಯವನ್ನು ಪ್ರವೇಶಿಸಿದ ಕೂಡಲೇ ವಿವಿಧ ಗಾತ್ರದ ಐದು ಶಿವಲಿಂಗಗಳು ಕಾಣಸಿಗುತ್ತವೆ ಸಮುದ್ರದ ತಟದಲ್ಲಿರುವ ಪರಿಣಾಮ ಪ್ರತೀ ಎರಡು ನಿಮಿಷಕೊಮ್ಮೆ ಸಮುದ್ರದ ಅಲೆಗಳಿಂದ ಅಭಿಷೇಕಗೊಳ್ಳುತ್ತದೆ ಸಮುದ್ರದಲ್ಲಿ ಉಬ್ಬರವಿಳಿತ ಸಮಯದಲ್ಲಿ ಶಿವಲಿಂಗಗಳು ಸಮುದ್ರದ ನೀರಿನಲ್ಲಿ ಮರೆಯಾಗಿ ಅಲೆಗಳು ಕಡಿಮೆಯಾದಾಗ ಗೋಚರಿಸುತ್ತವೆ. ಅಷ್ಟು ಮಾತ್ರವಲ್ಲದೆ ಈ ಶಿವಲಿಂಗದ ಜೊತೆಗೆ ಗಣೇಶ, ವಿಷ್ಣು ಮತ್ತು ಲಕ್ಷ್ಮಿ ದೇವಿಯ ವಿಗ್ರಹಗಳು ಇದ್ದು ಜೊತೆಗೆ ಶಿವಲಿಂಗವನ್ನು ಶೇಷನಾಗ ಕಾಯುವ ಭಂಗಿಯಲ್ಲಿ ಬಂಡೆಗಳ ಮೇಲೆ ದೊಡ್ಡದಾಗಿ ಕೆತ್ತಲಾಗಿದೆ.

ಲಕ್ಷಂತಾರ ಭಕ್ತರು :
ಈ ಪವಿತ್ರ ಕ್ಷೇತ್ರಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರಂತೆ, ಸೋಮವಾರ, ಶಿವರಾತ್ರಿ ಹಾಗೂ ಶ್ರಾವಣ ಮಾಸದ ವಿಶೇಷ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಇಲ್ಲಿಗೆ ಭೇಟಿ ನೀಡಿ ಶಿವಲಿಂಗದ ದರ್ಶನ ಪಡೆದುಕೊಳ್ಳುತ್ತಾರಂತೆ, ಅಲ್ಲದೆ ಈ ಸಮಯದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ನೆರವೇರುತ್ತದೆ.

ಭೇಟಿ ನೀಡುವ ಸಮಯ:
ಗಂಗೇಶ್ವರ ಮಹಾದೇವ ದೇವಾಲಯಕ್ಕೆ ಬೆಳಿಗ್ಗೆ ಆರರಿಂದ ರಾತ್ರಿ ಒಂಬತ್ತು ಗಂಟೆಯವರೆಗೆ ಭಕ್ತರು ಭೇಟಿ ನೀಡಲು ಅವಕಾಶವಿದೆ, ಸಮುದ್ರದ ತಟದಲ್ಲಿರುವುದರಿಂದ ಪ್ರದೇಶ ಶಾಂತವಾಗಿದ್ದು ರಜಾ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರೂ ಬರುತ್ತಾರೆ, ನೀವು ಒಂದು ವೇಳೆ ದಿಯು ಪ್ರವಾಸ ಕೈಗೊಂಡಿದ್ದಲ್ಲಿ ಗಂಗೇಶ್ವರ ಮಹಾದೇವ ದೇವಾಲಯಕ್ಕೂ ಒಮ್ಮೆ ಭೇಟಿ ನೀಡಿ ಶಿವಲಿಂಗದ ದರ್ಶನ ಪಡೆದುಕೊಳ್ಳಿ.

ಗಂಗೇಶ್ವರ ದೇವಸ್ಥಾನಕ್ಕೆ ವಿಮಾನ, ರೈಲು ಮತ್ತು ರಸ್ತೆ ಮಾರ್ಗಗಳ ಮೂಲಕ ತಲುಪಬಹುದು.

ವಿಮಾನದ ಮೂಲಕ:
ಗಂಗೇಶ್ವರ ಮಹಾದೇವ ದೇವಸ್ಥಾನವನ್ನು ತಲುಪಲು ನೀವು ಗಂಗೇಶ್ವರ ಮಹಾದೇವ ದೇವಸ್ಥಾನದಿಂದ ಸುಮಾರು 6 ಕಿಲೋಮೀಟರ್ ದೂರದಲ್ಲಿರುವ ಹತ್ತಿರದ ವಿಮಾನ ನಿಲ್ದಾಣದಲ್ಲಿ ಇಳಿಯಬೇಕು. ಇಲ್ಲಿಂದ ನೀವು ಸ್ಥಳೀಯ ಸೇವೆಗಳು ಅಥವಾ ಟ್ಯಾಕ್ಸಿಗಳನ್ನು ಬಳಸಿಕೊಂಡು ಸುಲಭವಾಗಿ ದೇವಸ್ಥಾನವನ್ನು ತಲುಪಬಹುದು.

ರೈಲು ಮಾರ್ಗ:
ಗಂಗೇಶ್ವರ ಮಹಾದೇವ ದೇವಸ್ಥಾನಕ್ಕೆ ಬರಲು, ನೀವು ದೆಲ್ವಾರಾ ರೈಲು ನಿಲ್ದಾಣದಲ್ಲಿ ಇಳಿಯಬೇಕು. ಇದು ದೇವಾಲಯದಿಂದ ಸುಮಾರು 12.9 ಕಿಲೋಮೀಟರ್ ದೂರದಲ್ಲಿದೆ. ರೈಲ್ವೆ ನಿಲ್ದಾಣವನ್ನು ತಲುಪಿದ ನಂತರ, ನೀವು ಸ್ಥಳೀಯ ಸೇವೆ ಅಥವಾ ಟ್ಯಾಕ್ಸಿ ಮೂಲಕ ಸುಲಭವಾಗಿ ದೇವಸ್ಥಾನವನ್ನು ತಲುಪಬಹುದು.

ರಸ್ತೆ ಮಾರ್ಗ:
ಗಂಗೇಶ್ವರ ಮಹಾದೇವ ದೇವಸ್ಥಾನವನ್ನು ತಲುಪಲು ಅನೇಕ ಖಾಸಗಿ ಮತ್ತು ಸಾರ್ವಜನಿಕ ಬಸ್ಸುಗಳು ಮತ್ತು ಟ್ಯಾಕ್ಸಿಗಳು ಲಭ್ಯವಿವೆ ಇದರ ಮೂಲಕ ಸುಲಭವಾಗಿ ದೇವಸ್ಥಾನ ತಲುಪಬಹುದು.

– ಸುಧೀರ್ ಪರ್ಕಳ

Advertisement

Udayavani is now on Telegram. Click here to join our channel and stay updated with the latest news.

Next