Advertisement

ಬರಲಿವೆ 5,000 ಮೆ.ಟ. ಸಾಮರ್ಥ್ಯದ ಹಡಗು!

12:52 AM Jul 03, 2020 | Sriram |

ಮಹಾನಗರ: ಲಕ್ಷದ್ವೀಪ, ಮಹಾರಾಷ್ಟ್ರ, ಗುಜರಾತ್‌ ಸಹಿತ ದೇಶದ ಹಲವು ಭಾಗಗಳಿಂದ ಮಂಗಳೂರು ನಡುವೆ ವಾಣಿಜ್ಯ ವ್ಯವಹಾರಕ್ಕೆ ಪೂರಕ ವಾಗುವ ನೆಲೆಯಲ್ಲಿ ನಗರದ ಬೆಂಗ್ರೆಯಲ್ಲಿ ಕೇಂದ್ರ, ರಾಜ್ಯ ಸರಕಾರದ ಸಹಭಾಗಿತ್ವದ 65 ಕೋಟಿ ರೂ. ವೆಚ್ಚದ ವಾಣಿಜ್ಯ ದಕ್ಕೆ ನಿರ್ಮಾಣ ಯೋಜನೆ ಇದೀಗ ಅನುಷ್ಠಾನ ಹಂತಕ್ಕೆ ಬಂದಿದೆ.

Advertisement

ನಗರದ ಬೆಂಗ್ರೆ ಬದಿಯ ಮೂರನೇ ಹಂತದ ಮೀನುಗಾರಿಕೆ ದಕ್ಕೆಯ ಉತ್ತರ ಭಾಗದ 350 ಮೀಟರ್‌ ವ್ಯಾಪ್ತಿಯಲ್ಲಿ ನೂತನ ವಾಣಿಜ್ಯ ದಕ್ಕೆ ನಿರ್ಮಾಣ ವಾಗಲಿದ್ದು, ಸದ್ಯ ಟೆಂಡರ್‌ನ ಕೊನೆಯ ಹಂತದಲ್ಲಿದೆ. ಇದು ಸಾಧ್ಯವಾದರೆ, ನವಮಂಗಳೂರು ಬಂದರಿಗೆ ಬರುವ ಸುಮಾರು 5,000 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಹಡಗುಗಳು ಇನ್ನು ಮುಂದೆ ಬೆಂಗ್ರೆಯ ವಾಣಿಜ್ಯ ದಕ್ಕೆಗೆ ಬರಲಿವೆ!

ಯೋಜನೆ ಶೀಘ್ರ ಅನುಷ್ಠಾನಿಸುವ ನಿಟ್ಟಿನಲ್ಲಿ ಬಂದರು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಇತ್ತೀಚೆಗೆ ಮಂಗಳೂರಿನಲ್ಲಿ ಅಧಿಕಾರಿಗಳ ಜತೆಗೆ ಸಭೆ ನಡೆಸಿ ಸೂಚನೆ ನೀಡಿದ್ದಾರೆ. ಸಾಗರ ಮಾಲಾ ಯೋಜನೆಯಲ್ಲಿ ಕೋಸ್ಟಲ್‌ ಬರ್ತ್‌ ನಿರ್ಮಾಣವಾಗಲಿದ್ದು, ಒಟ್ಟು 65 ಕೋ.ರೂ.ಗಳ ಪೈಕಿ 25 ಕೋಟಿ ರೂ.ಗಳನ್ನು ಕೇಂದ್ರ, 40 ಕೋ.ರೂ.ಗಳನ್ನು ರಾಜ್ಯ ಸರಕಾರ ಭರಿಸಲಿವೆ.

ಈ ದಕ್ಕೆ ನಿರ್ಮಾಣವಾದರೆ ಮಂಗಳೂರು  – ಲಕ್ಷದ್ವೀಪದ ಜನರಿಗೆ ಪ್ರಯಾಣ, ಕಾರ್ಗೊ ಸಾಗಾಟ ಇನ್ನಷ್ಟು ಸುಲಭವಾಗಲಿದೆ. ಸದ್ಯ ಸುಮಾರು 300ರಿಂದ 500 ಮೆಟ್ರಿಕ್‌ ಟನ್‌ನ ಧಾರಣ ಶಕ್ತಿಯ ಮಂಜುಗಳು ಈಗ ಹಳೆ ಬಂದರಿಗೆ ಬರುತ್ತಿದ್ದು, ಅದಕ್ಕಿಂತ ಜಾಸ್ತಿ ಸಾಮರ್ಥ್ಯದ ಹಡಗುಗಳು ನವಮಂಗಳೂರು ಬಂದರಿಗೆ ತೆರಳುತ್ತಿವೆ. ಬೆಂಗ್ರೆಯಲ್ಲಿ ನೂತನ ದಕ್ಕೆ ನಿರ್ಮಾಣವಾದರೆ ಎನ್‌ಎಂಪಿಟಿ ಒತ್ತಡ ಕಡಿಮೆಯಾಗುವ ನಿರೀಕ್ಷೆಯಿದೆ.

ಪ್ರತ್ಯೇಕ ಡ್ರೆಜ್ಜಿಂಗ್‌ ಕಾಮಗಾರಿ
ದಕ್ಕೆಯಲ್ಲಿ ದೊಡ್ಡ ನೌಕೆಗಳು ತಂಗಲು ಪೂರಕವಾಗಿ ಸುಸಜ್ಜಿತ ಬರ್ತ್‌, ಪ್ರಯಾಣಿಕರಿಗೆ ತಂಗುದಾಣ ನಿರ್ಮಾಣ, ಸರಕು ಸಂಗ್ರಹಕ್ಕಾಗಿ ಗೋದಾಮು ರಚನೆ ಮತ್ತಿತರ ಮೂಲಸೌಕರ್ಯ ಒದಗಿ ಸಲಾಗುತ್ತದೆ. 2 ದೊಡ್ಡ ಪ್ರಮಾಣದ ಗೋಡೌನ್‌ ಕಟ್ಟಡ, ಪ್ರಯಾಣಿಕ ಹಡಗಿ ನಲ್ಲಿ ಬಂದವರಿಗೆ ಒಂದು ಕಟ್ಟಡ ಸೌಲಭ್ಯ ಇರುತ್ತದೆ. ಮುಖ್ಯವಾಗಿ, ಅಳಿವೆಬಾಗಿಲಿನಿಂದ ಹೊಸ ಜೆಟ್ಟಿ ನಿರ್ಮಾಣವಾಗಲಿರುವ ಬೆಂಗ್ರೆಯವರೆಗೆ ಸಂಪರ್ಕ ಕಲ್ಪಿಸಲು 29 ಕೋ.ರೂ. ವೆಚ್ಚ ದಲ್ಲಿ ಪ್ರತ್ಯೇಕವಾಗಿ ಡ್ರೆಜ್ಜಿಂಗ್‌ ಕಾಮಗಾರಿ ಆಯೋಜಿಸಲಾಗುತ್ತದೆ.

Advertisement

ಬಂದರಿನಲ್ಲಿ ಆಳ ಇನ್ನಷ್ಟು !
ಮಂಗಳೂರಿನ ಹಳೆ ಬಂದರು 4 ಮೀ., ಎನ್‌ಎಂಪಿಟಿಯಲ್ಲಿ 12 ಮೀ. ಆಳವಿದೆ. ಹೀಗಾಗಿ ಹಳೆ ಬಂದರಿನಿಂದ ಸಣ್ಣ ಪ್ರಮಾಣದಲ್ಲಿ ಸರಕು ಸಾಗಾಟ (ಬಹುತೇಕ ಲಕ್ಷದ್ವೀಪಕ್ಕೆ) ಮಾತ್ರ ನಡೆಯುತ್ತದೆ. ಆದರೆ ಹೊಸ ದಕ್ಕೆ ಬೆಂಗ್ರೆಯಲ್ಲಿ ನಿರ್ಮಾಣವಾದರೆ ದೊಡ್ಡ ಪ್ರಮಾಣದಲ್ಲಿ ಲಕ್ಷದ್ವೀಪ, ಗುಜರಾತ್‌, ಮಹಾರಾಷ್ಟ್ರ ಸಹಿತ ಇತರ ರಾಜ್ಯಗಳಿಗೂ ಆಮದು-ರಫ್ತು ಮಾಡಬಹುದು. ಇದಕ್ಕಾಗಿ 4 ಮೀ. ಇರುವ ಹಳೆಬಂದರಿನ ಆಳ ಮುಂದೆ 7 ಮೀ. ಆಗಲಿದೆ. ಜತೆಗೆ, ರಾ.ಹೆ. ಕೂಳೂರಿನ ಎನ್‌ಎಂಪಿಟಿ ರಸ್ತೆಯಿಂದ ತಣ್ಣೀರುಬಾವಿ ಮೂಲಕ ಬೆಂಗ್ರೆಯಿಂದ ಹೊಸ ಧಕ್ಕೆಗೆ ನೇರ ಸಂಪರ್ಕ ರಸ್ತೆ ಕೂಡ ನಿರ್ಮಾಣವಾಗಲಿದೆ. ಲಕ್ಷದ್ವೀಪ ಹಾಗೂ ಮಂಗಳೂರು ಮಧ್ಯೆ ಪ್ರಸ್ತುತ ವಾರ್ಷಿಕವಾಗಿ 1.2 ಲಕ್ಷ ಮೆಟ್ರಿಕ್‌ ಟನ್‌ ರಪು¤, ಆಮದು ವಹಿವಾಟು ನಡೆಯುತ್ತಿದೆ.

ಅಂತಿಮ ಹಂತದ ಟೆಂಡರ್‌
ವಾಣಿಜ್ಯ ವ್ಯವಹಾರಕ್ಕೆ ಪೂರಕವಾಗುವ ನೆಲೆಯಲ್ಲಿ ನಗರದ ಬೆಂಗ್ರೆಯಲ್ಲಿ ಕೇಂದ್ರ, ರಾಜ್ಯ ಸರಕಾರದ ಸಹಭಾಗಿತ್ವದ 65 ಕೋಟಿ ರೂ. ವೆಚ್ಚದ ವಾಣಿಜ್ಯ ದಕ್ಕೆ ನಿರ್ಮಾಣ ಯೋಜನೆಯ ಟೆಂಡರ್‌ ಇದೀಗ ಅಂತಿಮ ಹಂತದಲ್ಲಿದೆ. ಶೀಘ್ರದಲ್ಲಿ ಯೋಜನೆ ಅನುಷ್ಠಾನ ಸಂಬಂಧ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುವುದು.
 - ಸುಜನ್‌ಚಂದ್ರ ರಾವ್‌, ಸಹಾಯಕ ಕಾ.ನಿ.ಎಂಜಿನಿಯರ್‌ ಬಂದರುಹಾಗೂ ಮೀನುಗಾರಿಕಾ ಇಲಾಖೆ-ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next