Advertisement
ಈಗಾಗಲೇ 14ನೇ ಹಣಕಾಸು ಆಯೋಗದ ಶಿಫಾರಸಿನಡಿ ಕಳೆದ ನಾಲ್ಕು ವರ್ಷಗಳಲ್ಲಿ ಸುಮಾರು 26,000 ಕೋಟಿ ರೂ.ಅನುದಾನ ಖೋತಾ ಆಗಿದೆ. ಪ್ರಸಕ್ತ 2019-20ನೇ ಸಾಲಿನಲ್ಲಿ ರಾಜ್ಯ ಸರ್ಕಾರಕ್ಕೆ 39,806 ಕೋಟಿ ರೂ.ಬರಬೇಕಿದ್ದು, ಇದರಲ್ಲಿ ಕನಿಷ್ಠ 5,000 ಕೋಟಿ ರೂ.ನಿಂದ 10,000 ಕೋಟಿ ರೂ.ಖೋತಾ ಆಗುವ ಲಕ್ಷಣ ಕಾಣುತ್ತಿದೆ. ಮುಂದೆ ರಾಜ್ಯಗಳಿಗೆ ಹಂಚಿಕೆಯಾಗುವ ಪಾಲಿನ ಪ್ರಮಾಣವೂ ಇಳಿಕೆಯಾದರೆ ರಾಜ್ಯ ಸರ್ಕಾರಕ್ಕೆ ಇನ್ನಷ್ಟು ಅನುದಾನ ಖೋತಾ ಆಗಿ, ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಭೀತಿ ಶುರುವಾಗಿದೆ.
Related Articles
Advertisement
ಆರ್ಥಿಕ ಸಂಬಂಧಿ ಸಂಘರ್ಷ ಸಾಧ್ಯತೆ: 15ನೇ ಹಣಕಾಸು ಆಯೋಗ ಶಿಫಾರಸು ಮಾಡುವ ರಾಜ್ಯಗಳ ಪಾಲಿನ ಮೊತ್ತ ಶೇ.40ಕ್ಕಿಂತ ಕಡಿಮೆಯಾದರೆ ರಾಜ್ಯಗಳು ಕೇಂದ್ರ ಸರ್ಕಾರದ ವಿರುದ್ಧ ಆರ್ಥಿಕ ಸಂಬಂಧಿ ವಿಚಾರಗಳಲ್ಲಿ ಸಂಘರ್ಷಕ್ಕಿಳಿಯುವ ಸಾಧ್ಯತೆ ಇದೆ. ಏಕೆಂದರೆ, ಜಿಎಸ್‌ಟಿ ಜಾರಿ ಬಳಿಕ ನಾಲ್ಕು ಹಂತದ ತೆರಿಗೆ ಯಷ್ಟೇ ಸಂಗ್ರಹವಾಗಲಿದ್ದು, ಅದರಲ್ಲೇ ಹಂಚಿಕೆ ಮಾಡಿಕೊಳ್ಳಬೇಕಿದೆ. ಅಲ್ಲದೇ ರಾಜ್ಯ ಸರ್ಕಾರಗಳಿಗೆ ಯಾವುದೇ ರೀತಿಯಲ್ಲಿ ಸೇವಾ ಶುಲ್ಕ ವಿಧಿಸಲು ಅವಕಾಶವಿಲ್ಲ. ಹೀಗಾಗಿ, ಕೇಂದ್ರ ಸರ್ಕಾರ ತೆರಿಗೆ ಆದಾಯದಲ್ಲಿ ಹೆಚ್ಚಿನ ಪಾಲನ್ನು ರಾಜ್ಯಗಳಿಗೆ ನೀಡಬೇಕು ಎಂಬ ಆಗ್ರಹವಿದೆ. ಇಂತಹ ಹೊತ್ತಿನಲ್ಲಿ 15ನೇ ಹಣಕಾಸು ಆಯೋಗದ ಶಿಫಾರಸಿನಡಿ ರಾಜ್ಯಗಳ ಪಾಲನ್ನು ಕಡಿಮೆಗೊಳಿಸಿದರೆ ರಾಜ್ಯಗಳು ಕೇಂದ್ರ ಸರ್ಕಾರದ ಧೋರಣೆಗೆ ವಿರೋಧ ವ್ಯಕ್ತಪಡಿಸುವ ಸಂಭವವಿದೆ ಎಂಬುದು ಅಧಿಕಾರಿಯ ಅನಿಸಿಕೆ.
ಒಂದು ವರ್ಷ ಯಥಾಸ್ಥಿತಿ?: ರಾಜ್ಯ ಸರ್ಕಾರಗಳ ಪ್ರತಿರೋಧಕ್ಕೆ ಗುರಿಯಾಗದಂತೆ 2020-21ನೇ ಸಾಲಿನ ಒಂದು ವರ್ಷದ ಅವಧಿಗೆ ಶೇ.42ರಷ್ಟು ಪಾಲಿನ ಮೊತ್ತ ವನ್ನೇ ಕಾಯ್ದಿರಿಸುವುದು. ಬಳಿಕ, 2021-25ರ ಅವಧಿಗೆ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ರಾಜ್ಯಗಳು ಪಡೆಯುವ ಪಾಲಿನ ಮೊತ್ತ ಇಳಿಕೆ ಮಾಡಿದರೂ ಹೆಚ್ಚಿನ ಪ್ರತಿರೋಧ ತಲೆದೋರದಂತೆ ತಡೆಯಲು ಅವಕಾಶ ವಿದೆ. 2021-25ರ ಅವಧಿಗೆ ಸಂಬಂಧಪಟ್ಟಂತೆ ಮುಂದಿ ನ ಅಕ್ಟೋಬರ್ ಹೊತ್ತಿಗೆ ಅಂತಿಮ ಶಿಫಾರಸು ಸಲ್ಲಿಸಲು ಕಾಲಾವಕಾಶವಿರುವುದರಿಂದ ಸದ್ಯಕ್ಕೆ ಪ್ರತಿರೋಧಕ್ಕೆ ಗುರಿಯಾಗುವುದರಿಂದ ತಪ್ಪಿಸಿಕೊಳ್ಳಲು ಅವಕಾಶವಿದೆ ಎಂಬುದರ ಕುರಿತೂ 15ನೇ ಹಣಕಾಸು ಆಯೋಗದ ಸಭೆಯಲ್ಲಿ ಚರ್ಚೆಯಾಗಿದೆ ಎನ್ನಲಾಗಿದೆ.
ಸಂಸತ್‌ನ ಉಭಯ ಸದನಗಳಲ್ಲಿ ಶನಿವಾರ ಕೇಂದ್ರ ಬಜೆಟ್ ಮಂಡನೆಯಾಗಲಿದ್ದು, ಈ ಸಂದರ್ಭದಲ್ಲೇ 15ನೇ ಹಣಕಾಸು ಆಯೋಗದ ಶಿಫಾರಸು ಕೂಡ ಮಂಡನೆಯಾಗಲಿದೆ. ನೆರೆ ಪರಿಹಾರ ಕಾರ್ಯ, ರೈತರ ಸಾಲಮನ್ನಾ, ತೆರಿಗೆ ಆದಾಯ ಇಳಿಕೆಯಂತಹ ಕಾರಣ ಗಳಿಗೆ ರಾಜ್ಯ ಆರ್ಥಿಕತೆಯಲ್ಲಿ ವ್ಯತ್ಯಯ ಉಂಟಾಗಿದ್ದರೂ ಆರ್ಥಿಕ ವರ್ಷ ಅಂತ್ಯವಾಗುವುದರೊಳಗೆ ನಿಗದಿತ ಗುರಿ ತಲುಪುವ ವಿಶ್ವಾಸವಿದೆ. ಆದರೆ, 15ನೇ ಹಣಕಾಸು ಆಯೋಗದ ಶಿಫಾರಸಿನಡಿ ರಾಜ್ಯಗಳ ಅನುದಾನ ಪ್ರಮಾಣ ಇಳಿಕೆಯಾದರೆ ಆರ್ಥಿಕ ಸ್ಥಿತಿ ಏರುಪೇರಾಗುವ ಭೀತಿ ಮೂಡಿದೆ.
1.20 ಲಕ್ಷ ಕೋಟಿ ಬಿಡುಗಡೆ: 14ನೇ ಹಣಕಾಸು ಆಯೋಗದ ಶಿಫಾರಸಿನಡಿ ರಾಜ್ಯಕ್ಕೆ 2015ರಿಂದ 2020ರ ಅವಧಿಗೆ ಒಟ್ಟು 1.86 ಲಕ್ಷ ಕೋಟಿ ರೂ.ಬಿಡುಗಡೆಯಾಗುವ ನಿರೀಕ್ಷೆ ಇತ್ತು. ಕಳೆದ ನಾಲ್ಕು ವರ್ಷಗಳಲ್ಲಿ 1.20 ಲಕ್ಷ ಕೋಟಿ ರೂ. ಬಿಡುಗಡೆಯಾಗಿದ್ದು, ಈಗಾಗಲೇ 26,000 ಕೋಟಿ ರೂ.ಖೋತಾ ಆಗಿದೆ. 2019-20ನೇ ಸಾಲಿನಲ್ಲಿ 39,806 ಕೋಟಿ ರೂ.ಬರಬೇಕಿದ್ದು, ಇದರಲ್ಲಿ ಕನಿಷ್ಠ 5,000 ಕೋಟಿ ರೂ.ಖೋತಾ ಆಗುವ ಅಂದಾಜಿದೆ. ಹಾಗಾಗಿ, ಪ್ರಸಕ್ತ ಆಯವ್ಯಯದಲ್ಲಿ ಹಂಚಿಕೆ ಮಾಡಿದಷ್ಟು ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಿಡುಗಡೆ ಮಾಡುವಲ್ಲಿ ವ್ಯತ್ಯಯವಾದರೆ ಆಶ್ಚರ್ಯವಿಲ್ಲ ಎಂದು ಆರ್ಥಿಕ ಇಲಾಖೆಯ ಮೂಲಗಳು ಹೇಳಿವೆ.
ಐದು ವರ್ಷಗಳಲ್ಲಿ ರಾಜ್ಯಕ್ಕೆ ಬಿಡುಗಡೆಯಾದ ಎಸ್‌ಎಫ್ಸಿ ಅನುದಾನದ ವಿವರಹಣಕಾಸು ವರ್ಷ ಬಿಡುಗಡೆಯಾದ ಅನುದಾನ (ಕೋಟಿ ರೂ.ಗಳಲ್ಲಿ)
2015- 16 23,983
2016- 17 28,760
2017- 18 31,908
2018- 19 36,215
2019- 20 39,806 * ಎಂ. ಕೀರ್ತಿಪ್ರಸಾದ್