Advertisement

ಐದು ವರ್ಷದಲ್ಲಿ ಜಿಲ್ಲಾಭಿವೃದ್ಧಿಗೆ 5 ಸಾವಿರ ಕೋಟಿ

03:45 PM Mar 11, 2018 | |

ಮೈಸೂರು: ಮೈಸೂರು ನಗರ ಮತ್ತು ಜಿಲ್ಲೆಯ ಅಭಿವೃದ್ಧಿಗೆ ತಮ್ಮ ಸರ್ಕಾರ ಕಳೆದ ಐದು ವರ್ಷಗಳಲ್ಲಿ 5ಸಾವಿರ ಕೋಟಿ ರೂ. ವೆಚ್ಚಮಾಡಿದೆ. ಸ್ವಾತಂತ್ರ್ಯ ಭಾರತದಲ್ಲಿ ಹಿಂದಿನ ಯಾವುದೇ ಸರ್ಕಾರಗಳು ಒಂದು ಜಿಲ್ಲೆಗೆ ಇಷ್ಟು ಹಣ ಖರ್ಚು ಮಾಡಿದ ನಿದರ್ಶನ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ನಗರದ ಕೆ.ಆರ್‌.ಎಸ್‌. ರಸ್ತೆಯಲ್ಲಿರುವ ಪಿ.ಕೆ. ಸ್ಯಾನಿಟೋರಿಯಂ ಆಸ್ಪತ್ರೆ ಆವರಣದಲ್ಲಿ ಶನಿವಾರ ಏರ್ಪಡಿಸಿದ್ದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ರಾಜರುಗಳ ನಂತರ ಮೈಸೂರಿಗೆ ಇಷ್ಟೊಂದು ಕೊಡುಗೆಗಳನ್ನು ಕೊಟ್ಟು, ಆಸ್ತಿಗಳನ್ನು ನಿರ್ಮಾಣ ಮಾಡಿದ್ದು ತಮ್ಮ ಸರ್ಕಾರ ಎಂದರು. ಮೈಸೂರು ನಗರ ಮತ್ತು ಜಿಲ್ಲೆಗೆ ಕಳೆದ ಐದು ವರ್ಷಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ್ದು, ಮೈಸೂರಿಗೆ ಸುವರ್ಣಾಕ್ಷರದಲ್ಲಿ ಬರೆದಿಡಬೇಕಾದ ದಿನ ಇದು ಎಂದು ಹೇಳಿದರು.

ಅಭಿವೃದ್ಧಿ ಕಣ್ಣಿಗೆ ಕಟ್ಟುತ್ತಿದೆ: ನಮ್ಮ ಸರ್ಕಾರದ ಕೆಲಸಗಳು ಜನರ ಕಣ್ಣಿಗೆ ಕಾಣಿಸುತ್ತಿವೆ. ನಾವು ಯಾರಿಗೋ ಕಣ್ಣು ಕಟ್ಟುವ, ಮುಂದೆ ಅಧಿಕಾರಕ್ಕೆ ಬಂದರೆ ಮಾಡುತ್ತೇವೆ ಎಂದು ಹೇಳುತ್ತಿಲ್ಲ. ಹಿಂದಿನ ಯಾವ ಸರ್ಕಾರಗಳೂ ಮೈಸೂರು ಅಭಿವೃದ್ಧಿಗೆ ಇಷ್ಟು ಕಾರ್ಯಕ್ರಮ ಕೊಡಲಿಲ್ಲ. ಆದರೂ ತವರು ಜಿಲ್ಲೆಗೆ ಸಿದ್ದರಾಮಯ್ಯ ಏನೂ ಮಾಡಲಿಲ್ಲ ಎಂದು ಬುರುಡೆ ಬಿಡುತ್ತಾರೆ. ಇಷ್ಟೆಲ್ಲಾ ಅಭಿವೃದ್ಧಿ ಕೆಲಸಗಳು ಕಣ್ಣಿಗೆ ಕಾಣಿಸುತ್ತಿಲ್ಲವೆ ಎಂದು ಪ್ರಶ್ನಿಸಿದರು. ದೇವರಾಜ ಅರಸ್‌ರ ನಂತರ ಮೈಸೂರು ಜಿಲ್ಲೆಯ ಎರಡನೇ ಮುಖ್ಯಮಂತ್ರಿ ನಾನು. ಜತೆಗೆ ಅರಸರ ನಂತರ ಐದು ವರ್ಷ ಅವಧಿ ಪೂರ್ಣಗೊಳಿಸುತ್ತಿರುವುದೂ ನಾನೇ ಎಂದರು.

ಮೈಸೂರಿಗೂ ಕಿದ್ವಾಯಿ ಘಟಕ: ಕೆ.ಆರ್‌. ಆಸ್ಪತ್ರೆಯಲ್ಲಿ ಆರಂಭಿಸಿರುವ ನೆಫ್ರೋಯುರಾಲಜಿ ಕೇಂದ್ರದಲ್ಲಿ ಮೂತ್ರಪಿಂಡ ಕಸಿ ಕೇಂದ್ರವನ್ನೂ ತೆರೆಯಲಾಗುವುದು. ಜತೆಗೆ ಕ್ಯಾನ್ಸರ್‌ ರೋಗಿಗಳಿಗೆ ಅಡ್ವಾನ್ಸ್‌ ಸ್ಕ್ಯಾನ್‌ ಮಾಡುವ ಕೇಂದ್ರ ತೆರೆಯಲು 15 ಕೋಟಿ ರೂ. ಅನುದಾನ ನೀಡಲಾಗಿದ್ದು, ಮೈಸೂರಿನಲ್ಲಿ ಕಿದ್ವಾಯಿ ಆಸ್ಪತ್ರೆಯ ಘಟಕ
ಆರಂಭಿಸಲಾಗುವುದು ಎಂದು ಹೇಳಿದರು. ಬಹುತೇಕ ಯೋಜನೆಗಳು ಚಾಮರಾಜ ಕ್ಷೇತ್ರದಲ್ಲೇ ಬಂದಿವೆ. ನರಸಿಂಹರಾಜ ಕ್ಷೇತ್ರದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯ ಸುಂದರ ಕಟ್ಟಡ ಆಗಿದೆ ಎಂದರು.

ಹುಬ್ಬಳ್ಳಿಯಲ್ಲೂ ಜಯದೇವ ಆರಂಭ: ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿರುವವರೆಲ್ಲಾ ಬೆಂಗಳೂರಿಗೆ ಹೋಗಲಾಗುವುದಿಲ್ಲ. ಆರೋಗ್ಯ ಸೇವೆ ಜನರಿಗೆ ಹತ್ತಿರದಲ್ಲಿ ಸಿಕ್ಕರೆ ಅನುಕೂಲ ಆಗುತ್ತದೆ ಎಂಬ ಕಾರಣಕ್ಕೆ ಜಯದೇವ ಹೃದ್ರೋಗಗಳ ಆಸ್ಪತ್ರೆಯನ್ನು ಮೈಸೂರು, ಕಲಬುರ್ಗಿಯಲ್ಲಿ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ಹುಬ್ಬಳ್ಳಿಯಲ್ಲೂ ಜಯದೇವ ಹೃದ್ರೋಗ ಆಸ್ಪತ್ರೆ ಸ್ಥಾಪಿಸಲಾಗುವುದು ಎಂದು ಹೇಳಿದರು.

Advertisement

ಬಡವರಿಗೆ ಉಚಿತವಾಗಿ ಡಯಾಲಿಸೀಸ್‌ ಸೌಲಭ್ಯ ಒದಗಿಸಲು ತಮ್ಮ ಸರ್ಕಾರ ರಾಜ್ಯದ ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸೀಸ್‌ ಕೇಂದ್ರವನ್ನು ಆರಂಭಿಸಿದೆ. ಆರೋಗ್ಯ ಕರ್ನಾಟಕ ಯೋಜನೆ ಜಾರಿಗೆ ತಂದಿದ್ದು, ರಾಜ್ಯದ 1.43 ಕೋಟಿ ಕುಟುಂಬಗಳ ಪೈಕಿ 1.20 ಕೋಟಿ ಬಿಪಿಎಲ್‌ ಪಡಿತರ ಚೀಟಿದಾರರಿಗೆ ಹೆಲ್ತ್‌ಕಾರ್ಡ್‌ ನೀಡಲಾಗುವುದು. ಈ ಹೆಲ್ತ್‌ಕಾರ್ಡ್‌ ಬಳಸಿ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಪಡೆಯಬಹುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಆ ಸೌಲಭ್ಯವಿಲ್ಲದಿದ್ದಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಖರ್ಚನ್ನು ಸರ್ಕಾರ ಭರಿಸಲಿದೆ. ಎಪಿಎಲ್‌
ಪಡಿತರಚೀಟಿದಾರರಿಗೂ ಶೇ.30ರಷ್ಟು ಹಣ ಭರಿಸಲಾಗುವುದು ಎಂದರು.

ಬಡವರು, ಮಧ್ಯಮ ವರ್ಗದವರು, ಜನ ಸಾಮಾನ್ಯರು ಸೇರಿದಂತೆ ಪ್ರತಿಯೊಬ್ಬರಿಗೂ ಗುಣ ಮಟ್ಟದ ಆರೋಗ್ಯ ಸೇವೆ ದೊರಕುವಂತಾಗಬೇಕು ಎಂಬ ಕಾರಣಕ್ಕೆ ತಮ್ಮ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ ಎಂದರು.

ಶಾಸಕ ವಾಸು ಅಧ್ಯಕ್ಷತೆವಹಿಸಿದ್ದರು. ಸಚಿವರಾದ ಡಾ. ಎಚ್‌.ಸಿ. ಮಹದೇವಪ್ಪ, ತನ್ವೀರ್‌ಸೇಠ್ಠ್, ಡಾ. ಗೀತಾ ಮಹದೇವಪ್ರಸಾದ್‌, ಸಂಸದ ಧ್ರುವ ನಾರಾಯಣ, ಶಾಸಕರಾದ ಎಚ್‌.ಪಿ. ಮಂಜುನಾಥ್‌, ಕಳಲೆ ಕೇಶವಮೂರ್ತಿ, ವಿಧಾನ ಪರಿಷತ್‌ ಉಪ ಸಭಾಪತಿ ಮರಿತಿಬ್ಬೇಗೌಡ, ಎಂಎಲ್‌ಸಿ ಆರ್‌. ಧರ್ಮಸೇನ, ಮೇಯರ್‌ ಎಸ್‌. ಭಾಗ್ಯವತಿ, ಡಾ. ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ಸತ್ಯನಾರಾಯಣ ಸೇರಿದಂತೆ ವಿವಿಧ ನಿಗಮ- ಮಂಡಳಿ ಅಧ್ಯಕ್ಷರುಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next