Advertisement

ಕೊಳ್ಳೇಗಾಲ-ಹನೂರು ಕ್ಷೇತ್ರದಲ್ಲಿ 500 ಮತಗಟ್ಟೆ

09:22 PM Apr 17, 2019 | Lakshmi GovindaRaju |

ಕೊಳ್ಳೇಗಾಲ: ಹನೂರು ಮತ್ತು ಕೊಳ್ಳೇಗಾಲ ತಾಲೂಕು ಕೇಂದ್ರಗಳಿಗೆ ಏ.18ರಂದು ಮೊದಲನೇ ಹಂತದ ಚುನಾವಣೆ ನಡೆಯಲಿದ್ದು, ಮತಗಟ್ಟೆಗಳಿಗೆ ನಿಯೋಜನೆಗೊಂಡಿರುವ ಸಿಬ್ಬಂದಿ ಮತಯಂತ್ರಗಳೊಂದಿಗೆ ನೇಮಕಗೊಂಡಿರುವ ಮತಗಟ್ಟೆಗಳಿಗೆ ತೆರಳಿದರು.

Advertisement

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿರುವ ಕಾಂಗ್ರೆಸ್‌, ಬಿಜೆಪಿ, ಬಿಎಸ್ಪಿ ಹಾಗೂ ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಚುನಾವಣಾ ಪ್ರಚಾರ ನಡೆಸಿ ಪ್ರಚಾರ ಧೂಳೆಬ್ಬಿಸಿದ್ದರು. ಬಹಿರಂಗ ಮತಯಾಚನೆಗೆ ಮಂಗಳವಾರ ತೆರೆ ಬಿದ್ದಿತ್ತು.

ನಂತರ ಅಭ್ಯರ್ಥಿಗಳು ತಮ್ಮ ಗೆಲುವಿಗಾಗಿ ವಿವಿಧ ಸಮಾಜದ ಮುಖಂಡರ ಮನೆ ಬಾಗಿಲಿಗೆ ತೆರಳುತ್ತಿದ್ದಂತೆ ಚುನಾವಣೆಗೆ ನೇಮಕಗೊಂಡಿರುವ ಸಿಬ್ಬಂದಿ ಅಭ್ಯರ್ಥಿಗಳ ಹಣೆಬರಹ ಪರೀಕ್ಷೆಗೆ ಮತಯಂತ್ರವನ್ನು ಚುನಾವಣಾಧಿಕಾರಿಗಳಿಂದ ಪಡೆದು ಮತಗಟ್ಟೆಗಳಿಗೆ ಬುಧವಾರ ತೆರಳಿದರು.

ಮತಯಂತ್ರಗಳ ರವಾನೆ: ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದಲ್ಲಿ 243 ಮತಗಟ್ಟೆಗಳಿಗೆ 973 ಸಿಬ್ಬಂದಿ ತಮ್ಮ ಮತಗಟ್ಟೆಗಳಿಗೆ ತೆರಳಿದರು. ಮತಗಟ್ಟೆಗಳಲ್ಲಿ ನೇಮಕಗೊಂಡಿರುವ ಸಿಬ್ಬಂದಿಯಿಂದ ಅಡಚಣೆ ಉಂಟಾದ ಪಕ್ಷದಲ್ಲಿ ನ್ಯೂನತೆಯನ್ನು ಸರಿಪಡಿಸಲು ಮುಂಗಡವಾಗಿ 100 ಜನರನ್ನು ನಿಯೋಜನೆ ಮಾಡಲಾಗಿದೆ.

ಗುರುವಾರ ನಡೆಯುವ ಲೋಕಸಭಾ ಚುನಾವಣೆ ಬಳಿಕ ಮತಯಂತ್ರಗಳನ್ನು ಸರ್ಕಾರಿ ಪ್ರಥಮ ದರ್ಜೆ ಮಹದೇಶ್ವರ ಕಾಲೇಜಿನಲ್ಲಿ ಸಂಗ್ರಹಿಸಿ ಬಳಿಕ ಜಿಲ್ಲಾ ಕೇಂದ್ರಕ್ಕೆ ಬಿಗಿ ಭದ್ರತೆಯೊಂದಿಗೆ ಮತಯಂತ್ರಗಳನ್ನು ರವಾನೆ ಮಾಡಲಾಗುವುದೆಂದು ಸಹಾಯಕ ಚುನಾವಣಾಧಿಕಾರಿ ಹಾಗೂ ಉಪ ವಿಭಾಗಾಧಿಕಾರಿ ನಿಖೀತ ಚಿನ್ನಸ್ವಾಮಿ ತಿಳಿಸಿದ್ದಾರೆ.

Advertisement

ಬಿಗಿ ಪೊಲೀಸ್‌ ಬಂದೋಬಸ್ತ್: ಶಾಂತಿಯುತ ಮತದಾನ ನಡೆಸುವ ಸಲುವಾಗಿ ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಓರ್ವ ಡಿವೈಎಸ್ಪಿ, ಸರ್ಕಲ್‌ ಇನ್ಸ್‌ಪೆಕ್ಟರ್‌ 3, ಎಸೈ 4, ಸಹಾಯಕ ಎಸೈ 17, ಪೊಲೀಸ್‌ ಮತ್ತು ಗೃಹ ರಕ್ಷಕದಳ, 250 ಸಿಬ್ಬಂದಿ, ಡಿಎಆರ್‌ 3 ತುಕ್ಕಡಿ, ಕೆಎಸ್‌ಆರ್‌ಪಿ 2 ತುಕ್ಕಡಿ, ಪ್ಯಾರ ಮಿಲಿಟರಿಗೆ 8 ಸೆಕ್ಷನ್‌ಗೆ 40 ಜನರನ್ನು ನಿಯೋಜನೆ ಮಾಡಿರುವುದಾಗಿ ಡಿವೈಎಸ್ಪಿ ಪುಟ್ಟಮಾದಯ್ಯ ತಿಳಿಸಿದ್ದಾರೆ.

ಹನೂರು ತಾಲೂಕು: ಹನೂರು ವಿಧಾನಸಭಾ ಕ್ಷೇತ್ರದಲ್ಲಿ 247 ಬೂತ್‌ಗಳಿಗೆ 1080 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮುಂಗಡ ಸಿಬ್ಬಂದಿಯಾಗಿ 92 ಜನರನ್ನು ನಿಯೋಜನೆ ಮಾಡಲಾಗಿದೆ. ಹನೂರು ವಿಧಾನಸಭಾ ಕ್ಷೇತ್ರದಲ್ಲಿ 8 ಮತಗಟ್ಟೆಗಳು ಅರಣ್ಯದಲ್ಲಿದ್ದು, ಅಲ್ಲಿಗೆ ಅರಣ್ಯ ಸಿಬ್ಬಂದಿಯನ್ನೇ ನೇಮಕ ಮಾಡಲಾಗಿದೆ ಎಂದು ಸಹಾಯಕ ಚುನಾವಣಾಧಿಕಾರಿ ಪ್ರಕಾಶ್‌ ಮಾಹಿತಿ ನೀಡಿದ್ದಾರೆ.

ಏ.18 ರಂದು ನಡೆಯುವ ಲೋಕಸಭಾ ಚುನಾವಣೆ ಮತದಾನದ ಬಳಿಕ ಮತಯಂತ್ರಗಳನ್ನು ನಗರದ ಎಂಜಿಎಸ್‌ವಿ ಜೂನಿಯರ್‌ ಕಾಲೇಜು ಭದ್ರತಾ ಕೊಠಡಿಯಲ್ಲಿ ಶೇಖರಣೆ ಮಾಡಿ ನಂತರ ಎಲ್ಲಾ ಮತಯಂತ್ರಗಳನ್ನು ಜಿಲ್ಲಾಡಳಿತಕ್ಕೆ ಒಪ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

ಚುನಾವಣೆ ಶಾಂತಿಯುತವಾಗಿ ನಡೆಸುವ ಸಲುವಾಗಿ ಡಿವೈಎಸ್ಪಿ 1, ಸರ್ಕಲ್‌ ಇನ್ಸ್‌ಪೆಕ್ಟರ್‌ 4, ಎಸೈ 5, ಸಹಾಯಕ ಎಸೈ 14, ಪೊಲೀಸ್‌ ಮತ್ತು ಗೃಹ ರಕ್ಷಕದಳ 250, ಡಿಎಆರ್‌ 3 ತುಕ್ಕಡಿ, ಕೆಎಸ್‌ಆರ್‌ಪಿ 2, ಪ್ಯಾರ ಮಿಲಿಟರಿ 8 ಸಕ್ಷೆನ್‌ಗೆ 40 ಜನ ನಿಯೋಜನೆಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next