Advertisement

ಐದು ದಿನ; 500 ಕಿ.ಮೀ. ಬೃಹತ್‌ ಟ್ರ್ಯಾಕ್ಟರ್ ರ್ಯಾಲಿ ಸಮಾಪ್ತಿ

03:47 PM Apr 18, 2022 | Team Udayavani |

ಬಾಗಲಕೋಟೆ: ಮಲಪ್ರಭಾ ನದಿ ಪಾತ್ರದಿಂದ ಕೃಷ್ಣೆಯ ನೆಲದವರೆಗೆ ಕಳೆದ ಐದು ದಿನಗಳ ಹಿಂದೆ ನರಗುಂದದಿಂದ ಆರಂಭಗೊಂಡಿದ್ದ ಉತ್ತರ ಕನಾಟಕ ಸ್ವಾಭಿಮಾನ ವೇದಿಕೆಯ ಟ್ರ್ಯಾಕ್ಟರ್ ರ್ಯಾಲಿ, ಸುಮಾರು 500 ಕಿ.ಮೀ. ಗೂ ಅಧಿಕ ಚಲಿಸಿ ಸರ್ಕಾರಕ್ಕೆ ಎಚ್ಚರಿಕೆಯ ಸಂದೇಶ ರವಾನಿಸುವ ಮೂಲಕ ರವಿವಾರ ಸಂಜೆ ಸಮಾರೋಪಗೊಂಡಿತು.

Advertisement

ಮಾಜಿ ಸಚಿವ, ಕಾಂಗ್ರೆಸ್‌ನ ಹಿರಿಯ ನಾಯಕ ಎಸ್‌.ಆರ್‌. ಪಾಟೀಲ ನೇತೃತ್ವದಲ್ಲಿ ಕಳೆದ ಏ.13ರಂದು ಮಲಪ್ರಭಾ ನದಿ ದಡದ ನರಗುಂದದಿಂದ ಈ ಯಾತ್ರೆ ಆರಂಭಗೊಂಡಿತ್ತು. ನರಗುಂದ, ಬಾದಾಮಿ, ಗುಳೇದಗುಡ್ಡ, ಇಳಕಲ್ಲ, ನಿಡಗುಂದಿ, ಕೊಲ್ಹಾರ, ಬಬಲೇಶ್ವರ, ಜಮಖಂಡಿ, ಮುಧೋಳ ತಾಲೂಕು ವ್ಯಾಪ್ತಿಯ ಸುಮಾರು 108 ಗ್ರಾಮಗಳಿಗೆ ಸುತ್ತಿ ರವಿವಾರ ಸಂಜೆ ಬೀಳಗಿ ತಾಲೂಕಿನ ಬಾಡಗಂಡಿಯ ಬಾಪೂಜಿ ಶಾಲೆಯ ಆವರಣ ತಲುಪಿತು.

ಈ ಟ್ರ್ಯಾಕ್ಟರ್ ರ್ಯಾಲಿಯುದ್ಧಕ್ಕೂ ವಿವಿಧ ಗ್ರಾಮಗಳಲ್ಲಿ ಹೂವಿನ ಮಳೆಗೈದು ಜನರು ಸ್ವಾಗತಿಸಿದರು. ಬಾಗಲಕೋಟೆಯಲ್ಲಂತೂ ಎಸ್‌. ಆರ್‌. ಪಾಟೀಲರ ಅಪ್ಪಟ ಬೆಂಬಲಿಗ ಪೀರಪ್ಪ ಮ್ಯಾಗೇರಿ 800 ಕೆ.ಜಿಗೂ ಅಧಿಕ ಸೇಬು ಹಣ್ಣಿನ ಬೃಹತ್‌ ಗಾತ್ರದ ಹಾರ ಹಾಕಿ ಯಾತ್ರೆಗೆ ಸ್ವಾಗತ ಕೋರಿದ್ದು ವಿಶೇಷವಾಗಿತ್ತು.

ಬಾಡಗಂಡಿಯಲ್ಲಿ ಸಂಜೆ ನಡೆದ ಟ್ಯಾಕ್ಟರ್‌ ರ್ಯಾಲಿಯ ಸಮಾರೋಪ ಕಾರ್ಯಕ್ರಮ, ಸಂತ್ರಸ್ತರ ಹೋರಾಟಗಾರ ದಿ|ವಾಸಣ್ಣ ದೇಸಾಯಿ ವೇದಿಕೆಯಲ್ಲಿ ನೆರವೇರಿತು. ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆಯ ಸಂಚಾಲಕ ಪ್ರಕಾಶ ಅಂತರಗೊಂಡ, ಅಧ್ಯಕ್ಷ ಎಸ್‌.ಆರ್‌. ಪಾಟೀಲ, ಮಾಜಿ ಸಚಿವರಾದ ಶಿವಾನಂದ ಪಾಟೀಲ, ಅಜಯಕುಮಾರ ಸರನಾಯಕ, ಜಮಖಂಡಿ ಶಾಸಕ ಆನಂದ ನ್ಯಾಮಗೌಡ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ಮಾಜಿ ಶಾಸಕರಾದ ಜೆ.ಟಿ. ಪಾಟೀಲ, ಬಿ.ಆರ್‌. ಯಾವಗಲ್‌, ಜಿ.ಎಸ್‌. ಪಾಟೀಲ, ಪ್ರಮುಖರಾದ ಮುತ್ತಪ್ಪ ಕೋಮಾರ, ಅದೃಶ್ಯಪ್ಪ ದೇಸಾಯಿ, ಸತೀಶ ಬಂಡಿವಡ್ಡರ, ಪೀರಪ್ಪ ಮ್ಯಾಗೇರಿ, ಈರಣ್ಣ ಕೊಣ್ಣೂರ, ನಂದಕುಮಾರ ಪಾಟೀಲ, ಬಸವರಾಜ ದೇಸಾಯಿ(ಜೈನಾಪುರ) ಸೇರಿದಂತೆ ಹಲವಾರು ನಾಯಕರು ಪಾಲ್ಗೊಂಡಿದ್ದರು.

ಶಿರಹಟ್ಟಿ ಫಕೀರೇಶ್ವರ ಮಠದ ದಿಂಗಾಲೇಶ್ವರ ಶ್ರೀ, ಇಂಗಳೇಶ್ವರದ ಸಿದ್ಧಲಿಂಗ ಸ್ವಾಮೀಜಿ, ಗಿರಿಸಾಗರದ ರುದ್ರಮುನಿ ಶ್ರೀ, ಕಲಾದಗಿಯ ಫಯಾಜಅಹ್ಮದ ಖಾನ, ಬಿದರಿಯ ಶಿವಲಿಂಗ ಸ್ವಾಮೀಜಿ ಸೇರಿದಂತೆ 50ಕ್ಕೂ ಹೆಚ್ಚು ವಿವಿಧ ಮಠಾಧೀಶರು ಭಾಗವಹಿಸಿ, ಹೋರಾಟಕ್ಕೆ ಬೆಂಬಲಿಸಿದರು.

Advertisement

ಯುಕೆಪಿ 3ನೇ ಹಂತದ ಯೋಜನೆ ಪೂರ್ಣಗೊಳಿಸಬೇಕು, ನವಲಿ ಸಮಾನಾಂತರ ಜಲಾಶಯ ನಿರ್ಮಾಣಗೊಳ್ಳಬೇಕು, ಮಹಾದಾಯಿ ಕುಡಿವ ನೀರು ಯೋಜನೆ ತಕ್ಷಣ ಆರಂಭಿಸಬೇಕು, ಬಬಲೇಶ್ವರ ಮತಕ್ಷೇತ್ರ ವ್ಯಾಪ್ತಿಯ 14 ಹಳ್ಳಿಗಳ ಉಪ ನೋಂದಣಿ ಕಚೇರಿಯ ಭೂ ಬೆಲೆ ಪರಿಷ್ಕರಣೆ ಮಾಡಬೇಕು ಎಂಬ ಒತ್ತಾಯದ ಜತೆಗೆ ಹಲವು ಹಕ್ಕೊತ್ತಾಯ ಮಂಡಿಸಲಾಯಿತು. ಸರ್ಕಾರದ ಉತ್ತರದ ಈ ಸಮಗ್ರ ಅಭಿವೃದ್ಧಿಗೆ ತಕ್ಷಣ ಮುಂದಾಗ ದಿದ್ದರೆ ಮುಂದೆ ಮತ್ತೆ ದೊಡ್ಡ ಮಟ್ಟದ ಹೋರಾಟ ರೂಪಿಸುವ ಎಚ್ಚರಿಕೆಯೂ ನೀಡಲಾಯಿತು.

ನನಗೆ ಯಾವುದೇ ದುರುದ್ದೇಶಗಳಿಲ್ಲ. ಯಾರಿಗೋ ಸೆಡ್ಡು ಹೊಡೆಯಲು ಈ ಹೋರಾಟ ಮಾಡಿಲ್ಲ. ನಮ್ಮ ಹಕ್ಕಿಗಾಗಿ ಈ ಹೋರಾಟ ಮಾಡಿದ್ದೇವೆ. ಐದು ದಿನಗಳ 500 ಕಿ.ಮೀ.ಗೂ ಅಧಿಕ ಟ್ರ್ಯಾಕ್ಟರ್ ರ್ಯಾಲಿಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಯುಕೆಪಿ 3ನೇ ಹಂತ, ಮಹದಾಯಿ ಮತ್ತು ನವಲಿ ಜಲಾಶಯ ಯೋಜನೆ ಅನುಷ್ಠಾನಗೊಳಿಸಬೇಕು. ಬಜೆಟ್‌ನಲ್ಲಿ ಶೇ.15 ಅನುದಾನ ಮೀಸಲಿಡಬೇಕು. 1ಲಕ್ಷ ಕೋಟಿ ಯೋಜನೆಗೆ 5 ಸಾವಿರ ಕೋಟಿ ಕೊಟ್ಟರೆ, ಶತಮಾನ ಕಂಡರೂ ಯುಕೆಪಿ ಪೂರ್ಣಗೊಳ್ಳಲ್ಲ. -ಎಸ್‌.ಆರ್‌. ಪಾಟೀಲ, ಮಾಜಿ ಸಚಿವ ಹಾಗೂ ಅಧ್ಯಕ್ಷ, ಉತ್ತರ ಕರ್ನಾಟಕ ಸ್ವಾಭಿಮಾನ ವೇದಿಕೆ

Advertisement

Udayavani is now on Telegram. Click here to join our channel and stay updated with the latest news.

Next