ಬೀದರ: ದೇಶದಲ್ಲಿ 2023ರ ವೇಳೆಗೆ 500 ಗೀಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಮೂಲದಿಂದ ವಿದ್ಯುತ್ ಉತ್ಪಾದನೆ ಮಾಡುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ನವೀಕರಿಸಬಹುದಾದ ಇಂಧನ ಮೂಲ ಹಾಗೂ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಹೇಳಿದರು.
ನಗರದ ರಂಗ ಮಂದಿರದಲ್ಲಿ ಶನಿವಾರ ಜಿಲ್ಲಾಡಳಿತ ಮತ್ತು ಜಿಪಂ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಉಜ್ಜಲ ಭಾರತ- ಉಜ್ವಲ ಭವಿಷ್ಯ’ ವಿದ್ಯುತ್ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿಂಡ್ ಎನರ್ಜಿ, ಸೋಲಾರ್ ಮತ್ತು ಹೈಡ್ರೋಜನ್ ಎನರ್ಜಿಗಳ ಅಭಿವೃದ್ಧಿಯ ನಿಟ್ಟಿನಲ್ಲಿ ಭಾರತ ಸರ್ಕಾರ ಕೆಲಸ ಮಾಡುತ್ತಿದೆ. ಶೇ.40 ನವೀಕರಿಸಬಹುದಾದ ಇಂಧನ ಮೂಲಗಳಿಂದ 175 ಗೀ. ವ್ಯಾಟ್ ವಿದ್ಯುತ್ ಸದ್ಯ ಭಾರತ ಉತ್ಪಾದನೆ ಆಗುತ್ತಿದೆ ಎಂದರು.
ಮನುಷ್ಯನ ಜೀವನಕ್ಕೆ ನೀರು, ಆಹಾರದಷ್ಟೇ ವಿದ್ಯುತ್ತಿನ ಅವಶ್ಯಕತೆ ಬಹಳ ಇದೆ. ಗುಣಮಟ್ಟದ ವಿದ್ಯುತ್ ಇಲ್ಲದಿದ್ದರೆ ಆ ಕ್ಷೇತ್ರ ಅಭಿವೃದ್ಧಿ ಆಗುವುದಿಲ್ಲ. ಭಾರತದಲ್ಲಿ ಈ ಹಿಂದೆ 2 ಲಕ್ಷ ಮೆ.ವ್ಯಾ ವಿದ್ಯುತ್ ಸರಾಸರಿಯಾಗಿ ಉತ್ಪಾದನೆಯಾಗುತ್ತಿತ್ತು. ಈಗ 4 ಲಕ್ಷ ಮೆ.ವ್ಯಾ ಕಳೆದ 8 ವರ್ಷಗಳಲ್ಲಿಯೇ ಭಾರತ ಉತ್ಪಾದನೆ ಮಾಡುತ್ತಿದೆ. ಗ್ರಾಮೀಣ ಭಾಗದಲ್ಲಿಯೂ ವಿದ್ಯುತ್ ಪೂರೈಸಲಾಗುತ್ತಿದೆ. ಕಳೆದ ಎಂಟು ವರ್ಷಗಳಲ್ಲಿ ಈ ಕ್ಷೇತ್ರದಲ್ಲಿ ಭಾರತ ಅದ್ಭುತ ಸಾಧನೆಗೈದು ಈ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ ಮಾಡಿ ಎನರ್ಜಿ ಸೆಕ್ಯುರಿಟಿ ಮಾಡಲಾಗುತ್ತಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ ಅರಳಿ ಮಾತನಾಡಿ, ರೈತರ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ಪೂರೈಕೆಯಾಗಬೇಕು. ಸೋಲಾರ್ ವಿದ್ಯುತ್ತನ್ನು ಎಲ್ಲರೂ ಮನೆ ಮೇಲೆ ಹಾಕಿಸಿಕೊಳ್ಳಬೇಕು. ಹಳ್ಳಿಗಳಲ್ಲಿ ರೈತರಿಗೆ ಬೋರ್‌ವೆಲ್ ಹಾಕಿದ ಮೇಲೆ ಅವುಗಳಿಗೆ ಬೇಗ ವಿದ್ಯುತ್ ಸಂಪರ್ಕ ಕೊಡುವುದಿಲ್ಲ ಹಾಗಾಗಿ ರೈತರಿಗೆ ಸಮಸ್ಯೆಯಾಗುತ್ತಿದ್ದು ಇದನ್ನು ಸರಿಪಡಿಸಬೇಕೆಂದು ಜೆಸ್ಕಾಂ ಅಧಿಕಾರಿಗಳಿಗೆ ಹೇಳಿದರು.
ಶಾಸಕ ರಹೀಮ್ ಖಾನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯುತ್, ಆಸ್ಪತ್ರೆ, ಪೊಲೀಸ್ ಸೇರಿದಂತೆ ಕೆಲವು ಅವಶ್ಯಕ ಇಲಾಖೆಗಳಿದ್ದು ಅವು ಸರಿಯಾಗಿ ಕೆಲಸ ನಿರ್ವಹಿಸದಿದ್ದರೆ ಜನರಿಗೆ ತೊಂದರೆ ಆಗುತ್ತದೆ. ಕಳೆದ 10 ವರ್ಷಗಳಲ್ಲಿ ಕೆಇಬಿಯಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಮುಂದಿನ ದಿನಗಳಲ್ಲಿ ಹೊಸ ತಂತ್ರಜ್ಞಾನ ಬಳಸಿ ಜನರಿಗೆ ಉತ್ತಮ ರೀತಿಯಲ್ಲಿ ಸೇವೆ ನೀಡಬೇಕು ಎಂದರು.
ಈ ವೇಳೆ ರಾಜ್ಯ ಹಜ್ ಸಮಿತಿ ಅಧ್ಯಕ್ಷ ರೌಫುದ್ದೀನ್ ಕಚೇರಿವಾಲೆ, ಬುಡಾ ಅಧ್ಯಕ್ಷ ಬಾಬು ವಾಲಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರಬಾಬು, ಜೆಸ್ಕಾಂ ಅಧೀಕ್ಷಕ ಎಂಜಿನಿಯರ್ ಸಚಿನ್ ಹುಂಡೆಕರ್ ಸೇರಿದಂತೆ ಇತರರಿದ್ದರು