Advertisement

ಬಿಜೆಪಿ ಮೇಲೆ ಎಚ್‌ಡಿಕೆ  500 ಕೋಟಿ ಬಾಂಬ್‌

03:45 AM Mar 24, 2017 | Team Udayavani |

ಬೆಂಗಳೂರು:ಗಣಿ ಅಕ್ರಮದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಜನಾರ್ಧನರೆಡ್ಡಿ ಅವರಿಂದ ಮುಂದಿನ ವಿಧಾನಸಭೆ ಚುನಾವಣೆ ಖರ್ಚಿಗಾಗಿ ಬಿಜೆಪಿ 500 ಕೋಟಿ ರೂ. ಕಿಕ್‌ಬ್ಯಾಕ್‌ ಪಡೆಯಲು ಒಪ್ಪಂದ ಮಾಡಿಕೊಂಡಿದೆ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೊಸ ಬಾಂಬ್‌ ಸಿಡಿಸಿದ್ದಾರೆ.

Advertisement

ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಇಂತದ್ದೊಂದು ರಹಸ ಒಪ್ಪಂದದ ಫ‌ಲವಾಗಿಯೇ ಜನಾರ್ಧನರೆಡ್ಡಿ ವಿರುದ್ಧದ  ನಿರ್ದೇಶನಾಲಯ ಸೇರಿ ಕೇಂದ್ರದ ತನಿಖಾ ಸಂಸ್ಥೆಗಳಲ್ಲಿ ಅವರ ವಿರುದ್ಧದ ಪ್ರಕರಣಗಳಿಗೆ ಕ್ಲೀನ್‌ಚಿಟ್‌ ನೀಡಲಾಗುತ್ತಿದೆ. ಜಫ್ತಿ ಮಾಡಿದ್ದ ಸಂಪತ್ತು ವಾಪಸ್‌ ಬರುತ್ತಿದೆ ಎಂದು ಹೇಳಿದರು.

ಬೇಲೆಕೇರಿ ಬಂದರಿನಿಂದ ಕಬ್ಬಿಣದ ಅದಿರು ಕಳ್ಳಸಾಗಣೆ ಪ್ರಕರಣದಲ್ಲಿ ನ್ಯಾ.ಸಂತೋಷ್‌ ಹೆಗ್ಡೆ ನೀಡಿರುವ ವರದಿಗೆ ರಾಜ್ಯ ಸರ್ಕಾರವು  ಎಳ್ಳುನೀರು ಬಿಟ್ಟಿದೆ. ಬಿಜೆಪಿ ಅಧಿಕಾರವಧಿಯಲ್ಲಿ ನಡೆಸಲಾಗಿದ್ದ ಬ್ರಹ್ಮಾಂಡ ಭ್ರಷ್ಟಾಚಾರದ ಎಲ್ಲ ಪ್ರಕರಣಗಳಲ್ಲಿಯೂ ಎಲ್ಲರಿಗೂ ನ್ಯಾಯಾಲಯ ಸೇರಿ ಎಲ್ಲ ಕಡೆ ಕ್ಲೀನ್‌ಚಿಟ್‌ ಸಿಗುತ್ತಿದೆ ಎಂದು ತಿಳಿಸಿದರು.

ಭಾಷಣದುದ್ದಕ್ಕೂ ಪ್ರಧಾನಿ ನರೇಂದ್ರಮೋದಿ, ಬಿಜೆಪಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ವಿರುದ್ಧ ವಾಗಾœಳಿ ನಡೆಸಿದ ಕುಮಾರಸ್ವಾಮಿ, ನರೇಂದ್ರಮೋದಿ ಕಿಂದರಿಜೋಗಿ ಇದ್ದಂತೆ ಕನಸು ಮಾರಾಟಕ್ಕಿಟ್ಟಿದ್ದಾರೆ. ಅವರ ಹಿಂದೆ ಹೋದರೆ ನಿರಾಸೆ ಖಂಡಿತ. 25 ಕೋಟಿ  ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಮೋದಿ ಎರಡೂವರೆ ವರ್ಷದಲ್ಲಿ ಎಷ್ಟು ಉದ್ಯೋಗ ಸೃಷ್ಟಿಸಿದ್ದಾರೆ ಎಂಬುದನ್ನು ಯುವಕರು ಅರ್ಥಮಾಡಿಕೊಳ್ಳಬೇಕು. ಮಾತಿಗೆ ಮರುಳಾಗಬಾರದು ಎಂದು ಹೇಳಿದರು.

ಎಲ್ಲೋ ಜೋಗಪ್ಪ ನಿನ್ನರಮನೆ ಎಂಬ ಜಾನಪದ ಗೀತೆಯನ್ನೂ ಸಮಾವೇಶದಲ್ಲಿ ವಾಚಿಸಿದ ಕುಮಾರಸ್ವಾಮಿ, ಕಿಂದರಿಜೋಗಿ ನಂಬಿ ಗಂಡ, ಮಕ್ಕಳು, ಹೊಲ ಬಿಟ್ಟು ಹೋದ ಮಹಿಳೆಗೆ  ನಿರಾಸೆಯಾದಂತೆ ಮೋದಿ ನಂಬಿದವರಿಗೂ ನಿರಾಸೆ ಕಟ್ಟಿಟ್ಟ ಬುಟ್ಟಿ ಎಂದು ತಿಳಿಸಿದರು.

Advertisement

ಬಿಎಸ್‌ವೈ ವಿರುದ್ಧ ವಾಗ್ಧಾಳಿ
ಯಡಿಯೂರಪ್ಪ ಅವರು ಈಗ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳುತ್ತಿದ್ದಾರೆ. ಆದರೆ, ಸಮ್ಮಿಶ್ರ ಸರ್ಕಾರದಲ್ಲಿ ನಾನು ಮುಖ್ಯಮಂತ್ರಿಯಾಗಿ ರೈತರ ಸಾಲ ಮನ್ನಾ ಘೋಷಿಸಿದಾಗ, ಉಪ ಮುಖ್ಯಮಂತ್ರಿಯಾಗಿದ್ದ ಅವರು ಎಲ್ಲಿಂದ ಹಣ ತರಲು ಸಾಧ್ಯ, ಸಾಲ ಮನ್ನಾ ಸಾಧ್ಯವೇ ಇಲ್ಲ ಎಂದು ಹೇಳಿದ್ದರು.

ಬಿಜೆಪಿ ಅಧಿಕಾರಕ್ಕೆ ಬಂದು ಅವರೇ ಮುಖ್ಯಮಂತ್ರಿಯಾದ ನಂತರ ಸಾಲಮನ್ನಾ ಮಾಡಿ ಎಂದರೆ ನಾನು ಹಣ ಪ್ರಿಂಟ್‌ ಮಾಡುವ ಯಂತ್ರ ಇಟ್ಟಿಲ್ಲ ಎಂದು ತಿಳಿಸಿದ್ದರು. ಇದೀಗ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳುವ ನೈತಿಕತೆ ಅವರಿಗೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯಡಿಯೂರಪ್ಪ ಅವರೇ, ನೀವು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಹೆಣ್ಣು ಮಕ್ಕಳು ಪ್ರತಿನಿತ್ಯ ದೇವರ ಪೂಜೆ ಮಾಡುವಾಗ ಎರಡು ಹೂವು ಹೆಚ್ಚು ದೇವರ ಬಳಿ ಇಟ್ಟು ನನನಗಾಗಿ ಪ್ರಾರ್ಥಿಸಿ ಎಂದು ಹೇಳಿದಿರಿ. ನಾಲ್ಕು ದಿನಗಳಿಂದ ಸಾವಿರಾರು ಹೆಣ್ಣು ಮಕ್ಕಳು ಬೆಂಗಳೂರಿನ ಬೀದಿಯಲ್ಲಿ ಮಲಗಿದ್ದಾರೆ. ನಿಮಗೆ ಆ ಹೆಣ್ಣು ಮಕ್ಕಳ ಬಗ್ಗೆ ಯೋಚಿಸಲು ಪುರುಸೊತ್ತಿಲ್ಲವೇ? ನಿಮಗೆ ಉಪ ಚುನಾವಣೆಯೇ ಹೆಚ್ಚಾಯಿತೇ? ಎಂದು ಪ್ರಶ್ನಿಸಿದರು.

ಉಪ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಇಳಿಸದ ಬಗ್ಗೆ ಬಿಜೆಪಿ ಏನೇನೋ ಹೇಳಿಕೊಂಡು ತಿರುಗುತ್ತಿದೆ. ಯಾರೂ ನಂಬುವ ಅಗತ್ಯವಿಲ್ಲ. ನಾವು ಅಲ್ಲಿ ಯಾರಿಗೂ ಬೆಂಬಲ ಕೊಟ್ಟಿಲ್ಲ. ಐದಾರು ತಿಂಗಳಲ್ಲಿ ವಿಧಾನಸಭೆ ಚುನಾವಣೆಯೇ ಎದುರಾಗುವ ಸ್ಥಿತಿ ಇದ್ದು ಅನಾವಶ್ಯಕವಾಗಿ ಯಾಕೆ ಸ್ಪರ್ಧೆ ಎಂಬ ಕಾರಣಕ್ಕೆ ಆ ತೀರ್ಮಾನ ಮಾಡಿದ್ದೇವೆ. ಎರಡೂ ರಾಷ್ಟ್ರೀಯ ಪಕ್ಷಗಳು ರಾಜ್ಯದ ಜನರಿಂದ ಮಾಡಿರುವ ಲೂಟಿ ಹಣದಲ್ಲಿ ಅಲ್ಲಿ ಚುನಾವಣೆ ನಡೆಸುತ್ತಿವೆ. ಪ್ರತಿಷ್ಠೆಯಾಗಿ ತೆಗೆದುಕೊಂಡು ಆರೋಪ-ಪ್ರತ್ಯಾರೋಪಗಳಲ್ಲಿ ತೊಡಗಿವೆ ಎಂದು ದೂರಿದರು.

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಜತೆ ಮೈತ್ರಿ ಎಂಬುದು ಶುದ್ಧ ಸುಳ್ಳು. ಕಾಂಗ್ರೆಸ್‌ ಜತೆ ಹೋಗುವ ಅವಶ್ಯಕತೆ ನಮಗಿಲ್ಲ. ಜೆಡಿಎಸ್‌ ಯಾವ ಪಕ್ಷದೊಂದಿಗೂ ಹೋಗುವುದಿಲ್ಲ, ಯಾರೊಂದಿಗೂ ಒಳ ಅಥವಾ ಹೊರ ಒಪ್ಪಂದದ ಪ್ರಶ್ನೆಯೇ ಇಲ್ಲ.
– ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next