ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೋವಿಡ್ ಸೋಂಕು ಹರಡುವಿಕೆ ನಿಯಂತ್ರಣದಲ್ಲಿದೆ. ಸಾರ್ವಜನಿಕರು ಅನಗತ್ಯವಾಗಿ ಭಯ ಪಡುವ ಅಗತ್ಯವಿಲ್ಲ. ಕಡ್ಡಾಯವಾಗಿ ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಯ್ದು ಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ಕಿಮ್ಸ್ ಆಸ್ಪತ್ರೆಯಲ್ಲಿ ಕೋವಿಡ್-19 ಕರ್ತವ್ಯ ನಿರ್ವಹಿಸಿ ರೋಗಿಗಳ ಆರೈಕೆ ಮಾಡಿದ ವೈದ್ಯಕೀಯ ಸಿಬ್ಬಂದಿಯನ್ನು ಸನ್ಮಾನಿಸಿ ಮಾತನಾಡಿದ ಅವರು, ಕಿಮ್ಸ್ ಆಸ್ಪತ್ರೆಯಲ್ಲಿ 250 ಬೆಡ್ ಸೇರಿದಂತೆ ಇತರೆ ಸ್ಥಳಗಳಲ್ಲಿ ಕೋವಿಡ್ ಚಿಕಿತ್ಸೆಗಾಗಿ 500 ಬೆಡ್ ಗುರುತಿಸಲಾಗಿದ್ದು, ಎಲ್ಲಾ ರೀತಿಯ ಸೌಲಭ್ಯಗಳನ್ನು ಕೈಗೊಳ್ಳಲಾಗಿದೆ. ನುರಿತ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಎಲ್ಲಾ ಸೌಲಭ್ಯಗಳು ಇವೆ ಎಂದರು.
ಸದ್ಯದ ಹವಾಮಾನದ ಸ್ಥಿತಿಯಲ್ಲಿ ಸೋಂಕು ಹರಡುವ ಸಂಭವ ಹೆಚ್ಚಿರುತ್ತದೆ. ಜನರು ಅನಗತ್ಯ ಓಡಾಟ ಕಡಿಮೆ ಮಾಡಬೇಕು. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಜಾಗೃತರಾಗಿದ್ದರೆ ಮಾತ್ರ ಸೋಂಕಿನಿಂದ ದೂರ ಇರಲು ಸಾಧ್ಯ. ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಲಾಗುತ್ತಿದೆ ಎಂದು ಹೇಳಿದರು.
ತಾರತಮ್ಯ ಬೇಡ: ಕೋವಿಡ್ ವಾರಿಯರ್‌ಗಳಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯಕೀಯ ಸಿಬ್ಬಂದಿಯನ್ನು ತಾರತಮ್ಯದಿಂದ ಕಾಣುವುದು ಸರಿಯಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸೋಂಕಿತರಿಗೆ ಉತ್ತಮ ಚಿಕಿತ್ಸೆ ನೀಡುತ್ತಿದ್ದಾರೆ. ಸಿಬ್ಬಂದಿ ಯೊಬ್ಬರನ್ನು ಜನರು ತಾರತಮ್ಯದಿಂದ ಕಾಣುತ್ತಿರುವ ಪ್ರಕರಣವೊಂದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ. ಚಿಕಿತ್ಸೆ ಸಂದರ್ಭ ದಲ್ಲಿ ಸಿಬ್ಬಂದಿ ಪಿಪಿಇ ಕಿಟ್ ಸೇರಿದಂತೆ ಸುರಕ್ಷತಾ ಸಲಕರಣೆಗಳನ್ನು ಬಳಸುತ್ತಿದ್ದಾರೆ. ಅವರಿಗೆ ಆತ್ಮಸ್ಥೈರ್ಯ ತುಂಬಲು ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಗುತ್ತಿದೆ ಎಂದರು.
ವೈದ್ಯಕೀಯ ಸಿಬ್ಬಂದಿಯಾದ ಮಂಜುಳಾ ಕೊತರೆ, ಕಮಲಾ, ಬಾಲಕೃಷ್ಣಾ, ಗಂಗಮ್ಮ ಬಳ್ಳಾರಿ, ಶ್ವೇತಾ ಬಣ್ಣಾ, ಎಸ್.ಬಿ. ಆಶಾ, ಡಿ.ಸಿ. ಜ್ಯೊತಿ, ಎಚ್.ರಾಜೇಶ್ವರಿ ಸೇರಿದಂತೆಇನ್ನಿತರರನ್ನು ಸನ್ಮಾನಿಸಲಾಯಿತು. ಪಾಲಿಕೆ ಆಯುಕ್ತ ಡಾ| ಸುರೇಶ ಇಟ್ನಾಳ, ಕಿಮ್ಸ್ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ, ಶಹರ ತಹಶೀಲ್ದಾರ್ ಶಶಿಧರ ಮಾಡ್ಯಾಳ, ಕಿಮ್ಸ್ ಮುಖ್ಯ ಆಡಳಿತಾಧಿಕಾರಿ ರಾಜಶ್ರೀ ಜೈನಾಪುರ, ಡಾ| ಅರುಣ ಕುಮಾರ, ಡಾ| ರಾಜಶೇಖರ ದ್ಯಾಬೇರಿ, ಡಾ| ಲಕ್ಷ್ಮೀಕಾಂತ, ಡಾ| ಎಸ್.ವೈ. ಮುಲ್ಕಿಪಾಟೀಲ, ವಾರ್ತಾ ಇಲಾಖೆ ಅಧೀಕ್ಷಕ ಡಿ. ವಿನೋದಕುಮಾರ ಇದ್ದರು.