Advertisement
ಮಧ್ಯವರ್ತಿಗಳುಒಂದಿಲ್ಲೊಂದು ಕಾರ್ಯಕ್ಕಾಗಿ ಪ್ರತಿಯೊಬ್ಬರೂ ಅವಲಂಬಿಸಬೇಕಾದ ಇಲಾಖೆಗಳಲ್ಲಿ ಕಂದಾಯ ಇಲಾಖೆಯೇ ಪ್ರಮುಖ. ಜನನ ಪ್ರಮಾಣ ಪತ್ರ ಈಗಷ್ಟೇ ಗ್ರಾಮ ಪಂಚಾಯತ್‌ಗಳಲ್ಲಿ ಆರಂಭವಾಗಿದೆ. ಇಲ್ಲದಿದ್ದರೆ ಜನನ ಪ್ರಮಾಣ ಪತ್ರದಿಂದ ಮರಣ ಪ್ರಮಾಣ ಪತ್ರದವರೆಗೆ ಕಂದಾಯ ಇಲಾಖೆ ಅನಿವಾರ್ಯ ಎನ್ನುವಂತಿತ್ತು. ಆದರೂ ಕಂದಾಯ, ಭೂಮಿ ಸಂಬಂಧಿತ ವಿಚಾರಗಳು, ಜಾಗದ ಅಳತೆ, ಪಡಿತರ ಶಾಖೆ ಹೀಗೆ ಅನೇಕ ವಿಭಾಗಗಳು ತಾಲೂಕು ಕಚೇರಿಯ ಜತೆಗೆ ಬೆಸೆದುಕೊಂಡಿವೆ. ಹಾಗಾಗಿ ನೂರಾರು ಜನ ಮಿನಿವಿಧಾನಸೌಧಕ್ಕೆ ಇಂತಹ ಕೆಲಸಗಳಿಗಾಗಿ ಎಡತಾಕುತ್ತಿರುತ್ತಾರೆ. ಸಿಬಂದಿ ಕೊರತೆ ನೆಪದಲ್ಲಿ ಕೆಲಸ ಕಾರ್ಯಗಳು ವಿಳಂಬವಾಗುತ್ತವೆ. ಜನ ಅನಿವಾರ್ಯವಾಗಿ ಮಧ್ಯವರ್ತಿಗಳ ಮೊರೆ ಹೋಗುತ್ತಿದ್ದಾರೆ. ಇದು ಕಂದಾಯ ಇಲಾಖೆ ಮೇಲಿನ ಅಪವಾದಕ್ಕೂ ಕಾರಣವಾಗಿದೆ. ಮಧ್ಯವರ್ತಿಗಳು ಸಾರ್ವಜನಿಕರಿಂದ ಹಣ ಪಡೆದು ಕಂದಾಯ ಇಲಾಖೆಯ ಅಧಿಕಾರಿ, ಸಿಬಂದಿಗೂ ನೀಡುತ್ತಿದ್ದೇವೆ ಎನ್ನುವುದು ಆರೋಪವೂ, ಸತ್ಯವೋ, ಸುಳ್ಳೋ ಗೊತ್ತಿಲ್ಲ. ಇಂತಹ ಅಪವಾದ ದೂರವಾಗಬೇಕಾದರೆ ಸೂಕ್ತ ಸಂಖ್ಯೆಯ ಸಿಬಂದಿ ಇದ್ದು ಅವರು ಸಾರ್ವಜನಿಕರಿಗೆ ಸ್ಪಂದಿಸಬೇಕು.
ಕಚೇರಿಯಲ್ಲಿ ಸಿಬಂದಿ ಕೊರತೆ ಕಾಡುತ್ತಿರುವು ದರಿಂದ ಪ್ರಸ್ತುತ ಇರುವ ಸಿಬಂದಿ ಮೇಲೆ ಅಧಿಕ ಹೊರೆಯಾಗುತ್ತಿದೆ. ಇಲ್ಲಿಗೆ ಬದಲಿ ಸಿಬಂದಿಯನ್ನು ನೇಮಿಸಲಾಗಿದ್ದರೂ ತಾತ್ಕಾಲಿಕವಾಗಿ ನಿಯೋಜನೆ ಮಾಡಿದ ಕಾರಣ ಒಬ್ಬೊಬ್ಬ ಗ್ರಾಮ ಕರಣಿಕರು ಮೂರು ಮೂರು ಗ್ರಾಮ ಪಂಚಾಯತ್‌ಗಳ ಹೊಣೆ ಹೊತ್ತ ಕಾರಣ ಸಿಬಂದಿಗೂ ಹೊರೆಯಾಗಿದೆ. ಜನರಿಗೂ ಕಾಯುವಿಕೆ ಅನಿವಾರ್ಯವಾಗಿದೆ. ಖಾಲಿ
ತಾಲೂಕು ಕಚೇರಿಯಲ್ಲಿ 6 ಉಪ ತಹಶೀಲ್ದಾರ್ ಹುದ್ದೆ ಮಂಜೂರಾಗಿದ್ದು ಈ ಪೈಕಿ 2 ಹುದ್ದೆಗಳು ಖಾಲಿಯಿವೆ. ಈಚೆಗಷ್ಟೇ ಒಬ್ಬರು ವರ್ಗಾವಣೆಯಾಗಿದ್ದಾರೆ. ಪ್ರಥಮ ದರ್ಜೆ ಸಹಾಯಕರ ಹುದ್ದೆ 10 ಮಂಜೂರಾಗಿದ್ದು ಐವರಷ್ಟೇ ಇದ್ದಾರೆ. ದ್ವಿತೀಯ ದರ್ಜೆ ಸಹಾಯಕರ ಹುದ್ದೆ 15 ಮಂಜೂರಾಗಿದ್ದರೂ ಇರುವುದು 7 ಮಂದಿ ಮಾತ್ರ. ಅರ್ಧಕ್ಕರ್ಧ ಹುದ್ದೆಗಳಲ್ಲಿ ಜನ ಇಲ್ಲ. ಗ್ರಾಮ ಕರಣಿಕರ ಹುದ್ದೆ 57 ಮಂಜೂರಾಗಿದ್ದು 10 ಹುದ್ದೆಗಳು ಖಾಲಿಯಿವೆ. ಗ್ರೂಪ್ ಡಿ ನೌಕರರ ಹುದ್ದೆ 11 ಮಂಜೂರಾಗಿದ್ದರೂ ಖಾಲಿ 6 ಹುದ್ದೆಗಳಿವೆ.
Related Articles
ಕಂದಾಯ ಇಲಾಖೆಯಲ್ಲಿ ಅರ್ಜಿಗಳ ವಿಲೇವಾರಿ ವಿಳಂಬವಾಗಿ ನಡೆಯುತ್ತಿದೆ. ಸರ್ವೇ ಇಲಾಖೆಯಲ್ಲೂ ಸಿಬಂದಿ ಕೊರತೆ ಇರುವ ಕಾರಣ ಸರ್ವೇ ಕಾರ್ಯಗಳು ಸಕಾಲಿಕವಾಗಿ ನಡೆಯುತ್ತಿಲ್ಲ. ಭೂ ಪರಿವರ್ತನೆ ತಡವಾಗುತ್ತಿದೆ. ಇದರಿಂದಾಗಿ ಮನೆ ಕಟ್ಟುವವರಿಗೂ ಸಮಸ್ಯೆಯಾಗುತ್ತಿದೆ.
Advertisement
ನೇಮಕಾತಿ ಇಲ್ಲಈ ಪ್ರಮಾಣದಲ್ಲಿ ಹುದ್ದೆ ಖಾಲಿ ಇರಲು ನೇಮಕಾತಿ ನಡೆಯದಿರುವುದೇ ಸಮಸ್ಯೆ ಎನ್ನಲಾಗಿದೆ. ಎಸ್‌ಡಿಎ, ಎಫ್ಡಿಎ ಇತ್ಯಾದಿ ನೇಮಕ ಕೆಪಿಎಸ್‌ಸಿ ಮೂಲಕ ನಡೆಯ ಬೇಕಿದ್ದು ಈ ಸಂಸ್ಥೆ ಕೆಲ ಸಮಯದಿಂದ ನೇಮಕಾತಿ ಪ್ರಕ್ರಿಯೆ ನಡೆಸಿಲ್ಲ. ವಿಎ ಹುದ್ದೆಗಳಿಗೆ ಜಿಲ್ಲಾ ಮಟ್ಟದಲ್ಲಿ ಸಂದರ್ಶನಕ್ಕೆ ಕರೆದು ಆಯ್ಕೆ ಮಾಡಲು ಅವಕಾಶ ಇದೆ. ಆದರೆ ಇದಕ್ಕೂ ಸರಕಾರ ಒಪ್ಪಿಗೆ ನೀಡಬೇಕು. ಹೀಗಾಗಿ ಹುದ್ದೆಗಳು ಭರ್ತಿಯಾಗದೇ ಖಾಲಿಯಾಗಿವೆ. ಎಸ್‌ಡಿಎ, ವಿಎ ಹುದ್ದೆಗಳು ತುಂಬಿದರೂ ಸಾರ್ವ ಜನಿಕರಿಗೆ ತೊಂದರೆಯಾಗದಂತೆ, ತಕ್ಕಮಟ್ಟಿಗೆ ಸುಧಾರಿಸಿಕೊಂಡು ಹೋಗುವಷ್ಟು ಕಂದಾಯ ಇಲಾಖೆ ಸೇವೆಗಳು ನಡೆಯಲು ಸಾಧ್ಯತೆಯಿದೆ. ದೂರದೂರುಗಳಿಂದ, ಗ್ರಾಮಾಂತರ ದಿಂದ ಬರುವ ಸಾರ್ವಜನಿಕರು ಪೆಚ್ಚುಮೋರೆ ಹಾಕಿ ಹೋಗುವ ಸನ್ನಿವೇಶ ತಪ್ಪಬೇಕಿದೆ. ಬದಲಿ ನೇಮಕ
ಗ್ರಾಮಕರಣಿಕರು ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಸಮಾನ ವೇತನಶ್ರೇಣಿಯಾಗಿದ್ದು ದ್ವಿತೀಯ ದರ್ಜೆ ಸಹಾಯಕರ ಹುದ್ದೆ ಖಾಲಿ ಇರುವಲ್ಲಿಗೆಲ್ಲ ಗ್ರಾಮ ಕರಣಿಕರನ್ನು ಬದಲಿಯಾಗಿ ತಂದು ನೇಮಿಸಲಾಗಿದೆ. ಇದರಿಂದಾಗಿ 10 ಮಂದಿ ಗ್ರಾಮಕರಣಿಕರು ಎಸ್‌ಡಿಎ ಕೆಲಸ ಮಾಡುತ್ತಿದ್ದಾರೆ. ಪರಿಣಾಮವಾಗಿ ಈಗ ಇರುವ ಗ್ರಾಮ ಕರಣಿಕರಿಗೆ 3ರಷ್ಟು ಗ್ರಾ.ಪಂ.ಗಳ ಜವಾಬ್ದಾರಿ ದೊರೆಯುತ್ತಿದೆ. ಇದು ನಿಭಾಯಿಸಲಾಗದಷ್ಟು ಹೊರೆಯಾಗಿ ಪರಿಣಮಿಸಿದೆ. ಮೊದಲೇ 10 ವಿಎ ಹುದ್ದೆ ಖಾಲಿ ಇದ್ದು ಎಸ್‌ಡಿಎ ಖಾಲಿ ಇರುವ 7 ಹುದ್ದೆಗೂ ಇವರನ್ನೇ ನಿಯೋಜಿಸಿದರೆ 17 ವಿಎ ಹುದ್ದೆ ಖಾಲಿ ಉಳಿದಂತಾಗುತ್ತದೆ. ಜಿಲ್ಲೆಯಲ್ಲಿ 40ರಷ್ಟು ವಿಎ ಹುದ್ದೆಗಳು, 30ರಷ್ಟು ಡಿ ದರ್ಜೆ ಹುದ್ದೆಗಳು ಖಾಲಿಯಿವೆ ಎನ್ನಲಾಗಿದೆ. ನಿರ್ವಹಿಸಿಕೊಂಡು ಹೋಗಲಾಗುತ್ತಿದೆ
ಸಿಬಂದಿ ಕೊರತೆ ಇದ್ದರೂ ಬೇರೆ ಬೇರೆ ವಿಭಾಗದಿಂದ ನಿಯೋಜಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ನಿರ್ವಹಿಸಿಕೊಂಡು ಹೋಗಲಾಗುತ್ತಿದೆ.
-ಆನಂದಪ್ಪ ನಾಯ್ಕ ತಹಶೀಲ್ದಾರ್, ಕುಂದಾಪುರ ಕೆಲಸವೇ ನಡೆಯುತ್ತಿಲ್ಲ
ತಾಲೂಕು ಕಚೇರಿಯಲ್ಲಿ ಸಿಬಂದಿ ಕೊರತೆ ಎಂದು ಕಾರಣ ನೀಡಿ ಸಾರ್ವಜನಿಕರ ಕೆಲಸಗಳೇ ನಡೆಯುತ್ತಿಲ್ಲ. ವಿಳಂಬವಾಗುತ್ತಿದೆ. ಒಂದು ಕೆಲಸಕ್ಕಾಗಿ ಎಷ್ಟು ಬಾರಿ ಭೇಟಿ ನೀಡಲು ಸಾಧ್ಯ?.
-ಸತೀಶ್ಚಂದ್ರ ಶೆಟ್ಟಿ, ವಕ್ವಾಡಿ