ಹುಮನಾಬಾದ: ನಿರಂತರ ಸುರಿದ ಮಳೆಯಿಂದ ಕ್ಷೇತ್ರದ ರೈತರು ಕಂಗಾಲು ಆಗಿದ್ದು, ಕೂಡಲೇ ಸರ್ಕಾರ ಪ್ರತಿ ಹೇಕ್ಟರ್‌ಗೆ 50 ಸಾವಿರ ರೂ. ಪರಿಹಾರ ನೀಡುವ ಮೂಲಕ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.
ತಾಲೂಕು ಆಡಳಿತ ವತಿಯಿಂದ ಏರ್ಪಡಿಸಿದ್ದ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ನಿರಂತರ ಸುರಿಯುತ್ತಿರುವ ಮಳೆಯಿಂದ ಬೆಳೆಹಾನಿ ಸಂಭವಿಸಿದೆ. ಅಧಿಕಾರಿಗಳು ಸರ್ವೇ ಕಾರ್ಯ ನಡೆಸುತ್ತಿದ್ದಾರೆ. ಕಬ್ಬು ಬೆಳೆಸಿ ಕಾರ್ಖಾನೆಗಳಿಗೆ ಪೂರೈಕೆ ಮಾಡಿದ ರೈತರಿಗೆ ಇಂದಿಗೂ ಕಬ್ಬಿನ ಬಾಕಿ ಹಣ ಪಾವತಿ ಉಳಿದುಕೊಂಡಿದ್ದು, ಸರ್ಕಾರ ಕಬ್ಬು ಬೆಳೆಗಾರ ಸಮಸ್ಯೆಗೆ ಸ್ಪಂದಿಸಬೇಕು ಎಂದರು.
ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ದೇಶದ ಎಲ್ಲ ರಾಜ್ಯಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣಗೊಂಡಿದ್ದು, ಪ್ರತಿಯೊಬ್ಬರಲ್ಲಿ ದೇಶ ಭಕ್ತಿ, ದೇಶ ಪ್ರೇಮ ಎದ್ದು ಕಾಣುತ್ತಿದೆ. ಇದೇ ರೀತಿ ದೇಶದ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಬೆಳೆಸಿಕೊಂಡು ದೇಶದ ಸ್ವಾತಂತ್ರ್ಯಕ್ಕೆ ಹೋರಾಡಿದ ವೀರನ್ನು ಗೌರವಿಸುವ ಕಾರ್ಯ ಮಾಡಬೇಕು. ದೇಶದ ಹೆಸರು ಮುಗಿಲೆತ್ತರಕೆ ಬೆಳೆಸುವ ಸಂಕಲ್ಪ ಮಾಡಬೇಕು ಎಂದರು.
ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ಮೂರು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ನೀಡಿ ಸನ್ಮಾನಿಸಲಾಯಿತು. ಅಲ್ಲದೆ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ವಿವಿಧ ಶಾಲಾ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ತಹಶೀಲ್ದಾರ್ ಪ್ರದೀಪಕುಮಾರ ಧ್ವಜಾರೋಹಣ ಮಾಡಿದರು.
ವಿಧಾನ ಪರಿಷತ್ ಸದಸ್ಯ ಡಾ| ಚಂದ್ರಶೇಖರ ಪಾಟೀಲ, ಭೀಮರಾವ ಪಾಟೀಲ, ಪುರಸಭೆ ಅಧ್ಯಕ್ಷೆ ನೀತು ಶರ್ಮಾ, ಉಪಾಧ್ಯಕ್ಷೆ ಸತ್ಯವತಿ ಮಠಪತಿ, ಕಾಶಿನಾಥ ರೆಡ್ಡಿ, ತಾಪಂ ಇಒ ಮುರಗೆಪ್ಪ, ಸಿಪಿಐ ಶರಣಬಸಪ್ಪ ಕೋಡ್ಲಾ, ಪಿಎಸ್‌ಐ ಮಂಜನಗೌಡ್ ಪಾಟೀಲ, ಸಿದ್ದಲಿಂಗ ನಿರ್ಣಾ, ಮಲ್ಲಿಕಾರ್ಜುನ ಮಾಶೆಟ್ಟಿ, ಶಿಕ್ಷಣಾಧಿಕಾರಿ ವೆಂಕಟೇಶ ಇದ್ದರು.