ಬೆಂಗಳೂರು: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೆಸರಿನಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ನಿವೃತ್ತ ಪೊಲೀಸ್ ಅಧಿಕಾರಿಗೆ 50 ಸಾವಿರ ರೂ. ವಂಚಿಸಿ ರುವ ಪ್ರಕರಣ ಬೆಳಕಿಗೆ ಬಂದಿದೆ. ಅರಕೆರೆ ನಿವಾಸಿ ನಿವೃತ್ತ ಪೊಲೀಸ್ ಅಧಿಕಾರಿ ಶ್ರೀಧರ್ ಹಣ ಕಳೆದುಕೊಂಡವರು. ಈ ಸಂಬಂಧ ಇನ್‌ಫ್ಯಾಂಟ್ರಿ ರಸ್ತೆಯ ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣಲ್ಲಿರುವ ಸಿಇಎನ್ ಪೊಲೀಸ್ ಠಾಣೆ (ಸೈಬರ್ ಕ್ರೈಂ ಠಾಣೆ)ಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
ಶ್ರೀಧರ್ ಅವರು ತಮ್ಮ ಮನೆಯಲ್ಲಿದ್ದ ಟ್ರೆಡ್ಮಿಲ್ ಅನ್ನು ಓಎಲ್‌ಎಕ್ಸ್‌ನಲ್ಲಿ ಮಾರಾ ಟಕ್ಕಿರಿಸಿ ಜಾಹೀರಾತು ನೀಡಿದ್ದರು. ಅದನ್ನು ಗಮನಿಸಿದ ಅಪರಿಚಿತ ವ್ಯಕ್ತಿಯೊಬ್ಬ ಶ್ರೀಧರ್‌ಗೆ ಕರೆ ಮಾಡಿ ಟ್ರೆಡ್ಮಿಲ್ ಖರೀದಿಸುವುದಾಗಿ ತನ್ನ ಮೊಬೈಲ್ ನಂಬರ್ ಕಳುಹಿಸಿದ್ದಾನೆ. ಅಲ್ಲದೆ, ತಾನು ನಗರದಲ್ಲಿ ಹಿರಿಯ ಪೊಲೀಸ್ ಅಧಿಕಾರಿಯಾಗಿದ್ದು, ತನ್ನೊಂದಿಗೆ ಗೌರವದಿಂದ ಮಾತನಾಡು ವಂತೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಸೂಚಿಸಿದ್ದಾನೆ.
ಗೂಗಲ್ ಪೇ ಮೂಲಕ ಹಣ ಕಳುಹಿಸುತ್ತೇನೆ ಎಂದಿದ್ದ ಆರೋಪಿ, ಗೂಗಲ್ ಪೇ ಲಿಂಕ್‌ನಲ್ಲಿ ಕ್ಯೂಆರ್ ಕೋಡ್ ಕಳುಹಿಸಿ, ಅದನ್ನು ಸ್ಕ್ಯಾನ್ ಮಾಡಿ ಹಣ ಬರುತ್ತದೆ ಎಂದಿದ್ದಾನೆ. ಅದನ್ನು ನಂಬಿದ ಶ್ರೀಧರ್ ಸ್ಕ್ಯಾನ್ ಮಾಡುತ್ತಿದ್ದಂತೆ ಮೊದಲಿಗೆ 9,500 ರೂ. ನಂತರ 19,500, ಮತ್ತೂಮ್ಮೆ 11 ಸಾವಿರ ಹೀಗೆ ನಾಲ್ಕೈದು ಬಾರಿ ಒಟ್ಟು 50 ಸಾವಿರ ರೂ. ಹಣ ಕಬಳಿಸಿದ್ದಾನೆ. ತಮ್ಮ ಖಾತೆಯಿಂದ ಏಕಾಏಕಿ 50 ಸಾವಿರ ರೂ. ವರ್ಗಾವಣೆ ಆಗಿರುವ ಕುರಿತು ಬ್ಯಾಂಕ್‌ನಿಂದ ಬಂದ ಸಂದೇಶ ಕಂಡು ಗಾಬರಿಗೊಂಡ ಶ್ರೀಧರ್, ಆರೋಪಿಗೆ ಕರೆ ಮಾಡಿದ್ದಾರೆ. ಅಷ್ಟರಲ್ಲಿ ಆತನ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದರು.
ಮತ್ತೂಬ್ಬ ಕರೆ ಮಾಡಿ ಕ್ಯೂಆರ್ ಕೋಡ್ ಕಳಿಸಿದ!: ಈ ಮಧ್ಯೆ ಕೆಲ ಹೊತ್ತಿನ ಬಳಿಕ ಮತ್ತೂಬ್ಬ ಅಪರಿಚಿತ ವ್ಯಕ್ತಿ ಶ್ರೀಧರ್ ಅವರಿಗೆ ಕರೆ ಮಾಡಿ, “ಕೆಲ ಕ್ಷಣಗಳ ಹಿಂದೆ ನಿಮಗೆ ಕರೆ ಮಾಡಿದ ವ್ಯಕ್ತಿ ಕಳ್ಳನಾಗಿದ್ದು, ಆತನನ್ನು ಬಂಧಿಸುತ್ತೇವೆ. ಹೀಗಾಗಿ ನಮ್ಮ ಖಾತೆಗೆ ಹಣ ವರ್ಗಾಹಿಸಬೇಕು ಎಂದು ಸೂಚಿಸಿ, ಆತನೂ ಕ್ಯೂಆರ್ ಕೋಡ್ ಕಳುಹಿಸಿದ್ದಾನೆ.
ಆಗ ಇದೊಂದು ಆನ್‌ಲೈನ್ ವಂಚನೆ ಜಾಲ ಎಂದು ತಿಳಿದ ನಿವೃತ್ತ ಅಧಿಕಾರಿ, ಆರೋಪಿ ಜತೆಗಿನ ಚಾಟಿಂಗ್ ಮತ್ತು ಕ್ಯೂಆರ್ ಕೊಡ್ ಸಮೇತ ಎಚ್‌ಎಸ್‌ಆರ್ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆನ್‌ಲೈನ್ ವಂಚನೆಯಾದರಿಂದ ನಗರ ಪೊಲೀಸ್ ಆಯುಕ್ತರ ಕಚೇರಿ ಆವರಣದಲ್ಲಿರುವ ಸಿಇಎನ್ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಲಾಗಿದೆ. ಪ್ರಾಥಮಿಕ ವಿಚಾರಣೆಯಲ್ಲಿ ಆರೋಪಿಯೂ ಹರಿಯಾಣದಿಂದ ಕರೆ ಮಾಡಿರುವುದು ಗೊತ್ತಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.
ಡಿಪಿಯಲ್ಲಿ ಭಾಸ್ಕರ್ ರಾವ್ ಫೋಟೋ: ಟ್ರೆಡ್ಮಿಲ್ ಖರೀದಿಸುವುದಾಗಿ ಕರೆ ಮಾಡಿದ ವ್ಯಕ್ತಿ ಟ್ರೂಕಾಲರ್‌ನಲ್ಲಿ ತನ್ನ ಹೆಸರನ್ನು “ಭಾಸ್ಕರ್ ರಾವ್ ಐಪಿಎಸ್’ ಎಂದು ಬರೆದುಕೊಂಡಿದ್ದ. ಅಲ್ಲದೆ, ತನ್ನ ವಾಟ್ಸ್‌ಆ್ಯಪ್ ಡಿಪಿಯಲ್ಲಿಯೂ ಭಾಸ್ಕರ್ ರಾವ್ ಅವರ ಭಾವಚಿತ್ರ ಹಾಕಿಕೊಂಡಿದ್ದ. ಹೀಗಾಗಿ ಶ್ರೀಧರ್ ಆರೋಪಿಯ ಜತೆ ವ್ಯವಹಾರ ನಡೆಸಿದ್ದರು. ನಂತರದ ಬೆಳವಣಿಗೆಗಳಿಂದ ವಂಚನೆಗೊಳಗಾಗಿರುವುದು ಗೊತ್ತಾಗಿ ದೂರು ನೀಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.