ಬಾಗಲಕೋಟೆ: ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಜಿಲ್ಲೆಯ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ ಎರಡು ತಿಂಗಳಿನ ಪಡಿತರ ಧಾನ್ಯ ಮೇ 1ರಿಂದ ವಿತರಿಸಲಾಗುತ್ತಿದ್ದು, ಈಗಾಗಲೇ ಶೇ. 50 ವಿತರಿಸಲಾಗಿದೆ ಎಂದು ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 11 ಸಗಟು ಮಳಿಗೆಗಳು ಹಾಗೂ 700 ನ್ಯಾಯಬೆಲೆ ಅಂಗಡಿಗಳ ಮೂಲಕ ಎರಡು ತಿಂಗಳ ಪಡಿತರ ಧಾನ್ಯ ವಿತರಿಸಲಾಗುತ್ತಿದೆ. ಇದಕ್ಕಾಗಿ ಜಿಲ್ಲೆಗೆ 142690 ಕ್ವಿಂಟಲ್ ಅಕ್ಕಿ, 4127.24 ಕ್ವಿಂಟಲ್ ತೊಗರಿಬೇಳೆ ಬಿಡುಗಡೆಯಾಗಿದೆ. ಮೇ 1ರಿಂದ ಪಡಿತರ ವಿತರಣೆಯನ್ನು ಓಟಿಪಿ ಮೂಲಕ ಪ್ರಾರಂಭಿಸಲಾಗಿದೆ. ಆದ್ಯತೇತರ ಪಡಿತರ ಚೀಟಿ ಹೊಂದಿರುವವರಿಗೂ ಪ್ರತಿ ಕೆಜಿ ಅಕ್ಕಿಗೆ 15 ರೂ.ಗಳಂತೆ ಹಂಚಿಕೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಪ್ರಧಾನಮಂತ್ರಿ ಉಜ್ವಲ ಯೋಜನೆಯಡಿ ಜಿಲ್ಲೆಯಲ್ಲಿ 1,32,834 ಫಲಾನುಭವಿಗಳಿದ್ದು, ಈ ಯೋಜನೆಯಡಿ 3 ತಿಂಗಳು ಉಚಿತ ಗ್ಯಾಸ್ ಸಂಪರ್ಕವನ್ನು ಡಿ.ಬಿ.ಟಿ ಮೂಲಕ 1,19,164 ಗ್ರಾಹಕರಿಗೆ ಸಹಾಯಧನ ಮೊತ್ತ ಜಮೆ ಮಾಡಲಾಗಿದೆ. ಈ ಪೈಕಿ ಸಿಲಿಂಡರ್ ಬುಕ್ಕಿಂಗ್ ಮಾಡಿದ ಫಲಾನುಭವಿಗಳಿಗೆ ಇಲ್ಲಿಯವರೆಗೆ 74,945 ಗ್ರಾಹಕರಿಗೆ ಉಚಿತ ಗ್ಯಾಸ್ ನೀಡಲಾಗಿದೆ ತಿಳಿಸಿದ್ದಾರೆ.
ಪಡಿತರ ಧಾನ್ಯ ವಿತರಣೆ ಪ್ರಮಾಣ: ಜಿಲ್ಲೆಯ ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿದಾರರಿಗೆ ಪ್ರತಿ ಯೂನಿಟ್‌ಗೆ 10 ಕೆಜಿ ಅಕ್ಕಿ ಹಾಗೂ ಪ್ರತಿ ಪಡಿತರ ಚೀಟಿಗೆ 1 ಕೆಜಿ ತೊಗರಿಬೇಳೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಎಪಿಎಲ್ ಕಾರ್ಡ್‌ದಾರರಿಗೆ ಏಕ ಸದಸ್ಯತ್ವಕ್ಕೆ 5 ಕೆಜಿ ಅಕ್ಕಿ, 2 ಮತ್ತು ಹೆಚ್ಚಿನ ಸದಸ್ಯರಿಗೆ 10 ಕೆಜಿ ಅಕ್ಕಿಯನ್ನು ಪ್ರತಿ ಕೆಜಿಗೆ 15 ರೂ.ಗಳ ದರದಲ್ಲಿ ನೀಡಲಾಗುತ್ತಿದೆ.
ಹೊಸದಾಗಿ ಬಿಪಿಎಲ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಪ್ರತಿ ಅರ್ಜಿಗೆ 10 ಕೆಜಿ ಅಕ್ಕಿಯನ್ನು ಉಚಿತವಾಗಿ ಹಾಗೂ ಎಪಿಎಲ್ ಕಾರ್ಡಗಾಗಿ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಪ್ರತಿ ಅರ್ಜಿಗೆ 10 ಕೆಜಿ ಅಕ್ಕಿಯನ್ನು 15 ರೂ.ಗಳ ದರದಲ್ಲಿ ನೀಡಲಾಗುತ್ತಿದೆ. ಅಂತರರಾಜ್ಯದ ಪಡಿತರ ಚೀಟಿಗೆ ಪಡಿತರ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸೋಂಕು ದೃಢಪಟ್ಟ ಕಂಟೈನ್‌ಮೆಂಟ್ ಝೋನ್‌ಗಳಾದ ಹಳೆ ಬಾಗಲಕೋಟೆ ವಾರ್ಡ್ ನಂ.7 ಮತ್ತು 14ರಲ್ಲಿನ 3500, ಮುಧೋಳನ ಸಾನಿ ನಗರದ 168, ಜಮಖಂಡಿ ನಗರದ ಬಾಪಟಗಲ್ಲಿ, ಅವಟಿಗಲ್ಲಿಯ 1800 ಸೇರಿ ಒಟ್ಟು 5503 ಹಾಗೂ ಮುಗಳಖೋಡ ಗ್ರಾಮದಲ್ಲಿ ಬಿಪಿಎಲ್ ಕಾರ್ಡ್‌ದಾರರಿಗೆ ಪಡಿತರಧಾನ್ಯಗಳ ಕಿಟ್‌ಮಾಡಿ ನೇರವಾಗಿ ಅವರವರ ಮನೆಗಳಿಗೆ ತಲುಪಿಸಲಾಗುತ್ತಿದೆ. ಇದಕ್ಕಾಗಿ ಆಹಾರ ಇಲಾಖೆಯ ಸಿಬ್ಬಂದಿಗಳು ಈ ಕಾರ್ಯದಲ್ಲಿ ತೊಡಗಿದ್ದು, ವಿತರಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ.
-ಶ್ರೀಶೈಲ ಕಂಕಣವಾಡಿ, ಉಪ ನಿರ್ದೇಶಕ, ಆಹಾರ ಇಲಾಖೆ