ಆಳಂದ: ಇನ್ನೇನು ಮಳೆ ಬಂದರೆ ವಾರದಲ್ಲಿ ಸಂಪೂರ್ಣ ಮುಂಗಾರು ಬಿತ್ತನೆ ಕೈಗೊಳ್ಳಬೇಕು ಎಂದುಕೊಂಡ ಶೇ.50 ರೈತ ಸಮುದಾಯಕ್ಕೆ ಇನ್ನು ರಸಗೊಬ್ಬರವೇ ದೊರೆಯದೇ ನಿತ್ಯ ಅಲೆದಾಡುವಂತೆ ಮಾಡಿದೆ.
ಕೃಷಿಯನ್ನೇ ನಂಬಿರುವ ರೈತ ಸಮುದಾಯಕ್ಕೆ ಸಕಾಲಕ್ಕೆ ಬೀಜ, ಗೊಬ್ಬರ ದೊರೆಯದೇ ಇದ್ದಲ್ಲಿ ಕೃಷಿ ಉತ್ಪಾದನೆ ಮೇಲೆ ಪ್ರತಿಕೂಲ ಪರಿಣಾಮ ಬೀಳುವ ಸಾಧ್ಯತೆಯಿದೆ. ಪಟ್ಟಣ ಸೇರಿದಂತೆ ಗ್ರಾಮೀಣ ಭಾಗದ ಹತ್ತಾರು ಖಾಸಗಿ ರಸಗೊಬ್ಬರ ಅಂಗಡಿಗಳಲ್ಲಿ ರೈತರಿಗೆ ಬೇಕಾದ ಗೊಬ್ಬರ ಕೇಳಲು ಹೋದ ರೈತರಿಗೆ ಇನ್ನೂ ಬಂದಿಲ್ಲ ಎನ್ನುವ ಸಿದ್ಧ ಉತ್ತರ ಕೇಳಿ ಸುಸ್ತಾಗಿ ಹೋಗಿದೆ.
ರವಿವಾರ (ಜೂ.12) ಪಟ್ಟಣಕ್ಕೆ ಆಗಮಿಸಲಿರುವ ರಸಗೊಬ್ಬರ ಖಾತೆ ಕೇಂದ್ರ ಸಚಿವ ಭಗವಂತ ಖೂಬಾ ಇಲ್ಲಿನ ರೈತರ ರಸಗೊಬ್ಬರ ಬೇಡಿಕೆಯನ್ನು ನೀಗಿಸುವರೇ ಎಂದು ಕಾಯ್ದು ನೋಡಬೇಕಿದೆ. ರಸಗೊಬ್ಬರ ಕೊರತೆ ಇಲ್ಲ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡುತ್ತಲೇ ಇದ್ದಾರೆ. ಆದರೆ ವಾಸ್ತವದಲ್ಲಿ ರೈತರಿಗೆ ಬೇಡಿಕೆಯಾದ ಡಿಎಪಿ ರಸಗೊಬ್ಬರ ಇಲ್ಲಿನ ಮಾರುಕಟ್ಟೆಯಲ್ಲಿ ದಾಸ್ತಾನಿಲ್ಲ. ಅಲ್ಲದೇ ಅಂಗಡಿಗಳ ಬೇಡಿಕೆಯಂತೆ ಮೇಲಿನಿಂದಲೇ ಪೂರೈಕೆ ಆಗುತ್ತಿಲ್ಲ. ಹೀಗಾಗಿ ಗೊಬ್ಬರಕ್ಕಾಗಿ ಪರದಾಡುವಂತೆ ಆಗಿದೆ.
ಕಳೆದ ಸಾಲಿನಲ್ಲಿ ಗೊಬ್ಬರ ಸಂಖ್ಯೆ 20:20:13 ಬೆಲೆ 1180 ಬದಲು 1470 ಮತ್ತು 12:32:16 ಗೊಬ್ಬರ ಬೆಲೆ 1250ರ ಬದಲು 1470ರೂ. ಹೆಚ್ಚಾಗಿದೆ. ಅತಿ ಹೆಚ್ಚು ಬೇಡಿಕೆ ಮತ್ತು ಅಭಾವ ಸೃಷ್ಟಿಯಾದ ಡಿಎಪಿ ಗೊಬ್ಬರ ಬೆಲೆ 1250ರ ಬದಲು 1350ರೂ. 10:26:26 ಗೊಬ್ಬರ ಸ್ಥಳೀಯ ಮಾರುಕಟ್ಟೆಗೆ ಇನ್ನೂ ಬಂದೇ ಇಲ್ಲವಂತೆ, ಯೂರಿಯಾ 266ರ ಬದಲು 350ರೂ.ಗಳಲ್ಲಿ ರೈತರು ಖರೀದಿಸುವಂತಾಗಿದೆ. ಇದಕ್ಕೆ ಹೊರತಲ್ಲ ಎನ್ನುವಂತೆ ರೈತ ಸಂಪರ್ಕ ಕೇಂದ್ರಗಳಲ್ಲಿನ ರಿಯಾಯ್ತಿ ಬೀಜ ಮತ್ತು ಆಗ್ರೋ ಕೇಂದ್ರಗಳಲ್ಲಿನ ವಿವಿಧ ರೀತಿಯ ಬೀಜಗಳ ಬೆಲೆಯ 200ರಿಂದ 500ರೂ.ಗಳಿಗೆ ಹೆಚ್ಚಿನ ಬೆಲೆಯಲ್ಲಿ ದೊರೆಯುತ್ತಿದ್ದು, ಇದರಿಂದ ರೈತರ ಜೇಬಿಗೆ ಕತ್ತರಿ ಬೀಳುತ್ತಿದೆ.
ದೊರೆಯದ ಸ್ಪಿಂಕ್ಲರ್: ಮಳೆ ಮುಂದೂಡತೊಡಗಿದೆ. ಇಂಥ ವೇಳೆ ರಿಯಾಯ್ತಿ ದರದಲ್ಲಿ ದೊರೆಯುವ ಸ್ಪಿಂಕ್ಲರ್ ಪೈಪ್‌ನಿಂದಾದರೂ ನೀರುಣಿಸಿ ಬಿತ್ತನೆ ಮಾಡಬೇಕೆಂದ ರೈತರಿಗೆ ಸಕಾಲಕ್ಕೆ ಪೈಪ್‌ಗ್ಳು ದೊರೆಯುತ್ತಿಲ್ಲ. ಇದಕ್ಕಾಗಿ ಅರ್ಜಿ ಸಲ್ಲಿಸಿ ವರ್ಷ ಎರಡು ವರ್ಷವಾದರೂ ಸರಣಿಯಂತೆ ಪೈಪ್‌ಗ್ಳು ದೊರೆಯದೇ ಕೃಷಿಗೆ ಹಿನ್ನಡೆಯಾಗಿದೆ.
ಕಳೆನಾಶ ಕೊರತೆ: ಬಿತ್ತನೆ ಪೂರ್ವ ಮತ್ತು ಬಿತ್ತನೆಯಾದ ಬಳಿಕ ರೈತರಿಗೆ ಬೇಕಾದ ಕಳೆನಾಶಕ ಔಷಧಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ಮುಗಿದಿವೆ. ಬರುವುದಿದೆ ಎಂದು ಹೇಳುತ್ತಲೇ ದಿನದೂಡಲಾಗುತ್ತಿದೆ. ಖಾಸಗಿ ಅಂಗಡಿಗಳಲ್ಲಿ ಕಳೆನಾಶಕ ಖರೀದಿಗೆ ಮುಂದಾದರೆ ಬೆಲೆ ದುಪ್ಪಾಟ್ಟಾಗಿದೆ. ಬೀಜ, ಕಳೆನಾಶಕ ಮತ್ತು ಕೃಷಿ ಪರಿಕರ ದರ ಇಳಿಕೆ ಮಾಡಿ ರೈತರಿಗೆ ವಿತರಿಸುವ ಕೆಲಸವಾಗಬೇಕು ಎಂದು ರೈತ ಮುಖಂಡರು ಒತ್ತಾಯಿಸುತ್ತಲೇ ಬಂದಿದ್ದಾರೆ. ಈ ಕುರಿತು ಶಾಸಕರು, ಸಚಿವರು ಗಂಭೀರವಾಗಿ ಪರಿಗಣಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕಿದೆ.
ಗೊಬ್ಬರ ಬೇಡಿಕೆಯ ಪಟ್ಟಿ ಆಧರಿಸಿ ಫೆಡರೇಷನ್ ಮತ್ತು ಕೆಎಸಎಸಿ ಮೂಲಕ ಮಾರಾಟ ಅಂಗಡಿಗಳಿಗೆ ಗೊಬ್ಬರ ಪೂರೈಕೆ ಆಗುತ್ತಿದೆ. 21 ಅಂಗಡಿಗಳಿಗೆ ಎರಡು ದಿನಗಳಲ್ಲಿ ಗೊಬ್ಬರ ಪೂರೈಕೆ ಆಗಲಿದೆ. ಈ ಹಿಂದೆಯೂ ಗೊಬ್ಬರ ದಾಸ್ತಾನು ಆದಂತೆ ರೈತರು ಖರೀದಿಸಿದ್ದಾರೆ. ಗೊಬ್ಬರ ಬೇಡಿಕೆಯಿಟ್ಟು ಹಣ ಕಟ್ಟಿದ ಅಂಗಡಿಯವರಿಗೆ ನೇರವಾಗಿ ಗೊಬ್ಬರ ಪೂರೈಕೆಯಾಗುತ್ತದೆ. ಕಿಪ್ಕೋ ಮತ್ತು ಐಪಿಎಲ್ ಗೊಬ್ಬರ ಮಾರಾಟ ನಡೆಯಲಿದೆ. ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ.
–ಶರಣಗೌಡ ಪಾಟೀಲ, ಸಹಾಯಕ ಕೃಷಿ ನಿರ್ದೇಶಕರು, ಆಳಂದ