ನವದೆಹಲಿ: ದೇಶದಲ್ಲಿನ ಶೇ.50ರಷ್ಟು ಜನರು ಈವಾಗಲೂ ಮಾಸ್ಕ್ ಧರಿಸುತ್ತಿಲ್ಲ. ಆದರೆ ಶೇ.64ರಷ್ಟು ಮಂದಿ ಮಾಸ್ಕ್ ಧರಿಸುತ್ತಿರುವವರು ತಮ್ಮ ಮೂಗಿನ ಕೆಳಕ್ಕೆ ಇಳಿಸಿಕೊಂಡಿರುವುದಾಗಿ ಅಧ್ಯಯನ ವರದಿ ತಿಳಿಸಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ(ಮೇ 20) ತಿಳಿಸಿದೆ.
ಇದನ್ನೂ ಓದಿ:ನಮಗೆ ಸಭೆ ಮಾಡಲು ಅನುಮತಿ ಕೊಡಲ್ಲ, ಸರ್ಕಾರ ಏನ್ನನ್ನೋ ಮುಚ್ಚಿಡುತ್ತಿದೆ: ರಾಮಲಿಂಗಾರೆಡ್ಡಿ
ಮಾಸ್ಕ್ ಧರಿಸುವ ಶೇ.64ರಷ್ಟು ಮಂದಿ ಮೂಗನ್ನು ಬಿಟ್ಟು, ಬಾಯಿಯನ್ನು ಮಾತ್ರ ಮುಚ್ಚಿಕೊಂಡಿರುತ್ತಾರೆ, ಶೇ.20ರಷ್ಟು ಮಂದಿ ಮಾಸ್ಕ್ ಅನ್ನು ಗಲ್ಲದ ಮೇಲೆ ಬಿಟ್ಟುಕೊಂಡಿರುತ್ತಾರೆ. ಶೇ,2ರಷ್ಟು ಮಂದಿ ಕುತ್ತಿಗೆಯಲ್ಲಿ ನೇತಾಡಿಸಿಕೊಂಡಿರುತ್ತಾರೆ. ಕೇವಲ ಶೇ.14ರಷ್ಟು ಮಂದಿ ಮಾತ್ರ ಮೂಗು, ಬಾಯಿ, ಗಲ್ಲವನ್ನು ಸಂಪೂರ್ಣವಾಗಿ ಮಾಸ್ಕ್ ನಿಂದ ಮುಚ್ಚಿಕೊಂಡಿರುತ್ತಾರೆ ಎಂದು ವಿವರಿಸಿದೆ.
ಗುರುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್ವಾಲ್, ದೇಶದ ಎಂಟು ರಾಜ್ಯಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ. 9 ರಾಜ್ಯಗಳಲ್ಲಿ 50 ಸಾವಿರದಿಂದ 1 ಲಕ್ಷ ಸಕ್ರಿಯ ಪ್ರಕರಣಗಳಿವೆ ಮತ್ತು 19 ರಾಜ್ಯಗಳಲ್ಲಿ 50ಸಾವಿರಕ್ಕಿಂತ ಕಡಿಮೆ ಸಕ್ರಿಯ ಪ್ರಕರಣಗಳಿವೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಮತ್ತು ಪಶ್ಚಿಮಬಂಗಾಳದಂತಹ ಕೆಲವು ರಾಜ್ಯಗಳು ಶೇ.25ಕ್ಕಿಂತ ಹೆಚ್ಚು ಸಕ್ರಿಯ ಪ್ರಕರಣಗಳಿದ್ದು, ಇದು ಕಳವಳಕಾರಿಯಾಗಿದೆ ಎಂದು ಅಗರ್ವಾಲ್ ತಿಳಿಸಿದ್ದಾರೆ.
ಕಳೆದ ಹತ್ತು ವಾರಗಳಿಂದ ದೇಶದಲ್ಲಿ ನಿರಂತರವಾಗಿ ಕೋವಿಡ್ 19 ಪ್ರಕರಣ ಹೆಚ್ಚಳವಾಗುತ್ತಿದ್ದು, ಇದೀಗ ಕಳೆದ ಎರಡು ವಾರಗಳಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿದೆ.