Advertisement

Twitter: ಟ್ವಿಟರ್‌ಗೆ 50 ಲಕ್ಷ ರೂ. ದಂಡ ವಿಧಿಸಿದ ಹೈಕೋರ್ಟ್‌

10:52 PM Jun 30, 2023 | Team Udayavani |

ಬೆಂಗಳೂರು: ಕೇಂದ್ರ ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಯು ವ್ಯಕ್ತಿಗತವಾಗಿ ಖಾತೆ ನಿಷೇಧಿಸುವಂತೆ ಸೂಚಿಸಿದ್ದ ನಿರ್ಬಂಧ ಆದೇಶವನ್ನು ಪ್ರಶ್ನಿಸಿ ಟ್ವಿಟರ್‌ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‌ನಲ್ಲಿ ವಜಾಗೊಂಡಿದ್ದು, ಟ್ವಿಟರ್‌ಗೆ 50 ಲಕ್ಷ ರೂ. ದಂಡ ವಿಧಿಸಿದೆ.

Advertisement

ನ್ಯಾ| ಕೃಷ್ಣ ಎಸ್‌.ದೀಕ್ಷಿತ್‌ ನೇತೃತ್ವದ ಏಕಸದಸ್ಯ ಪೀಠವು ಎ.21ರಂದು ಕಾದಿರಿಸಿದ್ದ ಮಹ ತ್ವದ ಆದೇಶವನ್ನು ಶುಕ್ರವಾರ ಪ್ರಕಟಿಸಿದೆ. ರಾಜ್ಯ ಕಾನೂನು ಸೇವಾ ಪ್ರಾಧಿಕಾರಕ್ಕೆ 45 ದಿನದೊಳಗೆ ಟ್ವಿಟರ್‌ 50 ಲಕ್ಷ ರೂ. ದಂಡ ಪಾವತಿಸಬೇಕು. ಒಂದು ವೇಳೆ ನಿರ್ದಿಷ್ಟ ಸಮಯದೊಳಗೆ ದಂಡ ಪಾವತಿಸಲು ವಿಫ‌ಲವಾದರೆ ಪ್ರತಿ ದಿನ ಹೆಚ್ಚುವರಿಯಾಗಿ 5 ಸಾವಿರ ರೂ. ಪಾವತಿಸಬೇಕಾಗುತ್ತದೆ ಎಂದು ನ್ಯಾಯಾಲಯವು ಸೂಚನೆ ನೀಡಿದೆ.

ಏಕಸದಸ್ಯ ಪೀಠ ಹೇಳಿದ್ದೇನು ?
ಆದೇಶ ಪಾಲಿಸಿರುವ ದಾಖಲೆಗಳನ್ನು ಟ್ವಿಟರ್‌ ನ್ಯಾಯಾಲಯಕ್ಕೆ ನೀಡಿಲ್ಲ. ಇಂಗ್ಲೆಂಡ್‌, ಅಮೆರಿಕದಲ್ಲಿನ ಕಾನೂನು ಗಳನ್ನು ಹೋಲಿಕೆ ಮಾಡಲಾಗಿದೆ. ಸರಕಾರದ ಆದೇಶ ಪಾಲಿಸದೇ ಅದನ್ನು ಪ್ರಶ್ನಿಸಿ ಟ್ವಿಟರ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದೆ. ಟ್ವಿಟರ್‌ ಶ್ರೀಮಂತ ಕಂಪೆನಿಯಾಗಿದ್ದು, ರೈತರು, ಕಾರ್ಮಿಕರಂತಲ್ಲ. ಹೀಗಾಗಿ ಟ್ವಿಟರ್‌ಗೆ 50 ಲಕ್ಷ ರೂ. ದಂಡ ವಿಧಿಸಿ ಅರ್ಜಿಯನ್ನು ವಜಾ ಮಾಡಲಾಗಿದೆ. ಅರ್ಜಿದಾರರ ನಡತೆ ಕುರಿತು ಆದೇಶದಲ್ಲಿ ಚರ್ಚಿಸಲಾಗಿದೆ. ಒಟ್ಟು 8 ಪ್ರಶ್ನೆಗಳಿಗೆ ಉತ್ತರಿಸಲಾಗಿದೆ ಎಂದು ಪೀಠವು ಮೌಖೀಕವಾಗಿ ತಿಳಿಸಿದೆ.

ಏನಿದು ಪ್ರಕರಣ?
2021ರ ಫೆಬ್ರವರಿಯಿಂದ 2022ರ ಫೆಬ್ರವರಿಯ ನಡುವೆ 39 ಯುಆರ್‌ಎಲ್‌ಗ‌ಳನ್ನು ತೆಗೆದು ಹಾಕಲು ಕೇಂದ್ರ ಸರಕಾರ ಟ್ವಿಟರ್‌ಗೆ ಸೂಚಿಸಿತ್ತು. 1,474 ಖಾತೆಗಳು, 175 ಟ್ವೀಟ್‌ಗಳಲ್ಲಿ ಕೇವಲ 39 ಯುಆರ್‌ಎಲ್‌ಗ‌ಳನ್ನು ನಿರ್ಬಂಧಿಸಿರುವ ಆದೇಶವನ್ನು ಟ್ವಿಟರ್‌ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು.

ಟ್ವಿಟರ್‌ ಅರ್ಜಿಗೆ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರ ಸರಕಾರದ ಪರ ವಕೀಲರು ಟ್ವಿಟರ್‌ ತನ್ನ ಬಳಕೆದಾರರ ಪರವಾಗಿ ಸಮರ್ಥಿಸುವ ಹಕ್ಕನ್ನು ಪಡೆದಿಲ್ಲ. ಇದಕ್ಕೆ ಶಾಸನದ ಅನುಮತಿ ಬೇಕು. ಟ್ವಿಟರ್‌ ಹಾಗೂ ಅದರ ಬಳಕೆದಾರರ ನಡುವೆ ಯಾವುದೇ ಸದಸ್ಯತ್ವದ ಮಾತು ಉದ್ಭವಿಸುವುದಿಲ್ಲ ಎಂದು ವಾದ ಮಂಡಿಸಿದ್ದರು. ಕೇಂದ್ರ ಸರಕಾರ ಸ್ವೇಚ್ಛೆಯಿಂದ ನಡೆದುಕೊಂಡರೆ ಸಂವಿಧಾನದ 14ನೇ ವಿಧಿಯಡಿ ಹಕ್ಕು ಉಲ್ಲಂಘನೆ ಪ್ರಶ್ನಿಸಿ ಟ್ವಿಟರ್‌ ನ್ಯಾಯಾಲಯದ ಮೊರೆ ಹೋಗಬಹುದು ಎಂದು ವಾದಿಸಿದ್ದರು.
ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣಗಳು ಸುಳ್ಳು ಸುದ್ದಿ ಮತ್ತು ಉದ್ದೇಶಪೂರ್ವಕ ಅಸಂಬದ್ಧ ಮಾಹಿತಿ ಹಂಚಿಕೆ ನಿಯಂತ್ರಿಸುತ್ತಿಲ್ಲ. ಇದರಿಂದ ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ತಪ್ಪು ಮಾಹಿತಿಯು ಹೆಚ್ಚಳವಾಗುತ್ತಿದೆ ಎಂದು ಸರಕಾರದ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದಿದ್ದರು.

Advertisement

ಟ್ವಿಟರ್‌ ಪರ ವಕೀಲರು ಪ್ರತಿವಾದ ಮಂಡಿಸಿ, ಟ್ವಿಟರ್‌ನಲ್ಲಿ ಹೊಂದಿರುವ ಸಾವಿರಾರು ಖಾತೆಗಳನ್ನು ನಿರ್ಬಂಧಿಸುವಂತೆ ಕೇಂದ್ರ ಸರಕಾರ ಆದೇಶಿಸಿದೆ. ಇದಕ್ಕೆ ಸೂಕ್ತ ಕಾರಣ ನೀಡಲಿಲ್ಲ. ಟ್ವಿಟರ್‌ ನಿರ್ಬಂಧಿಸುವ ಸಂಬಂಧ ಬಳಕೆದಾರರಿಗೆ ಯಾವುದೇ ಆಶ್ರಯ ಇರುವುದಿಲ್ಲ. ಇದು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ವಾದ ಮಂಡಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next