ಕೋವಿಡ್ ಒಂದನೇ ಮತ್ತು ಎರಡನೇ ಅಲೆಗೆ ದೇಶದಲ್ಲಿನ ಜನರು ತತ್ತರಿಸಿ ಹೋಗಿದ್ದು, ಎರಡನೇ ಅಲೆಯಲ್ಲಿ ಮಧ್ಯವಯಸ್ಕರು, ಯುವಕರು ಸಾವಿಗೀಡಾಗುತ್ತಿರುವುದು ಮತ್ತಷ್ಟು ಗಾಬರಿಗೆ ಕಾರಣವಾಗಿದೆ. ಈ ಮಾರಣಾಂತಿಕ ಕೋವಿಡ್ ಸೋಂಕು ಜನಸಾಮಾನ್ಯರಷ್ಟೇ ವೈದ್ಯರನ್ನು ಕಂಗೆಡಿಸಿದೆ ಎಂಬುದಕ್ಕೆ ಈ ವರದಿ ಸಾಕ್ಷಿ.
ದೆಹಲಿಯ ಗುರು ತೇಜ್ ಬಹದ್ದೂರ್ ಆಸ್ಪತ್ರೆಯ ಕಿರಿಯ ರೆಸಿಡೆಂಟ್ ಡಾಕ್ಟರ್ ಅನಾಸ್ ಮುಜಾಹಿದ್(26ವರ್ಷ) ಕೋವಿಡ್ ನಿರ್ವಹಣೆಯ ತಜ್ಞರಾಗಿದ್ದರು. ಆದರೆ ಕೋವಿಡ್ ಪಾಸಿಟಿವ್ ಬಂದ ಗಂಟೆಯೊಳಗೆ ಡಾ.ಅನಾಸ್ ಕೊನೆಯುಸಿರೆಳೆದಿದ್ದರು. ಈ ವರ್ಷದ ಎರಡನೇ ಕೋವಿಡ್ ಅಲೆಯಲ್ಲಿ ನಿಧನರಾದ 244 ವೈದ್ಯರಲ್ಲಿ ಅನಾಸ್ ಅತೀ ಕಿರಿಯ ವೈದ್ಯರಾಗಿದ್ದಾರೆ ಎಂದು ವರದಿ ತಿಳಿಸಿದೆ.
ಕಳೆದ ವರ್ಷದ ಕೋವಿಡ್ ಮೊದಲ ಅಲೆಗೆ 736 ವೈದ್ಯರು ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದು, ಈವರೆಗೆ ದೇಶದಲ್ಲಿ ಮಾರಣಾಂತಿಕ ಕೋವಿಡ್ ಗೆ 1,000 ವೈದ್ಯರು ಕೊನೆಯುಸಿರೆಳೆದಿರುವುದಾಗಿ ವಿವರಿಸಿದೆ. ಕಳೆದ ಒಂದು ವಾರದಿಂದ ಸ್ನೇಹಿತ, ಸಹೋದ್ಯೋಗಿ ವೈದ್ಯ ಡಾ.ಅಮೀರ್ ಸೊಹೈಲ್ ಅವರು ಮುಜಾಹಿದ್ ಅವರ ಸಾವಿನ ಆಘಾತದಿಂದ ಹೊರಬರಲು ಹೆಣಗಾಡುತ್ತಿರುವುದಾಗಿ ವರದಿ ತಿಳಿಸಿದೆ.
ಮುಜಾಹಿದ್ ಅವರಿಗೆ ಗಂಟಲು ನೋವಿನ ಸಣ್ಣ ರೋಗಲಕ್ಷಣ ಇದ್ದಿದ್ದು, ಆಸ್ಪತ್ರೆಯಲ್ಲಿ ಆ್ಯಂಟಿಜೆನ್ ಪರೀಕ್ಷೆಯಲ್ಲಿ ಕೋವಿಡ್ ಪಾಸಿಟಿವ್ ಎಂದು ಬಂದಿತ್ತು. ಆಗ ದಿಢೀರನೆ ಮುಜಾಹಿದ್ ಕುಸಿದು ಬಿದ್ದಿದ್ದರು. ನಂತರ ಅವರು ಇಂಟ್ರಾಕ್ರೇನಿಯಲ್ ರಕ್ತಸ್ರಾವದಿಂದ ಸಾವನ್ನಪ್ಪಿದ್ದರು. ಮುಜಾಹಿದ್ ಅವರು ಕೋವಿಡ್ ಲಸಿಕೆಯನ್ನು ಪಡೆದಿರಲಿಲ್ಲವಾಗಿತ್ತು ಎಂದು ವರದಿ ಹೇಳಿದೆ.
“ಇದೊಂದು ಆಘಾತಕಾರಿ ವಿಷಯ, ಮುಜಾಹಿದ್ ಗೆ ಯಾವುದೇ ರೋಗ ಇಲ್ಲ. ತನ್ನ ಮಗ ಯಾವತ್ತೂ ಯಾವುದೇ ಅನಾರೋಗ್ಯಕ್ಕೆ ಒಳಗಾದವನಲ್ಲ ಎಂದು ಪೋಷಕರು ತಿಳಿಸಿರುವುದಾಗಿ ಹೇಳಿರುವ ಡಾ.ಅಮೀರ್, ಇದು ಹೇಗೆ ಸಂಭವಿಸಿತು ಎಂಬುದು ನಮಗೂ ತಿಳಿಯುತ್ತಿಲ್ಲ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.
ಡಾ.ಮುಜಾಹಿದ್ ಅವರು ಕೋವಿಡ್ ಲಸಿಕೆ ತೆಗೆದುಕೊಂಡಿರಲಿಲ್ಲವಾಗಿತ್ತು. ನಾನು ಸೇರಿದಂತೆ ಇಲ್ಲಿ ಅನೇಕ ಸಹೋದ್ಯೋಗಿಗಳು ಲಸಿಕೆ ತೆಗೆದುಕೊಂಡಿಲ್ಲ. ಕೋವಿಡ್ ಕರ್ತವ್ಯದಲ್ಲಿರುವಾಗ ಲಸಿಕೆ ಪಡೆಯುವ ನಮ್ಮ ಪ್ರಕ್ರಿಯೆ ದೀರ್ಘವಾಗಿರುತ್ತದೆ. ಲಸಿಕೆ ಪಡೆಯಲು ನಾವು ಮೇಲಾಧಿಕಾರಿಗಳಿಗೆ ತಿಳಿಸಬೇಕು ಮತ್ತು ಅವರ ಸಹಿ ಪಡೆಯಬೇಕು. ಹೀಗಾಗಿ ಮುಂದಿನ ಕೆಲವು ದಿನಗಳಲ್ಲಿ ಲಸಿಕೆ ಪಡೆಯಲು ಮುಜಾಹಿದ್ ನಿರ್ಧರಿಸಿದ್ದರು.
ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ನೀಡಿರುವ ಅಂಕಿಅಂಶದ ಪ್ರಕಾರ, ಕೋವಿಡ್ ಎರಡನೇ ಅಲೆಗೆ 244 ವೈದ್ಯರು ವಿಧಿವಶರಾಗಿದ್ದಾರೆ. ಇದರಲ್ಲಿ ಭಾನುವಾರ ಒಂದೇ ದಿನ ದಾಖಲೆಯ 50 ಮಂದಿ ವೈದ್ಯರು ಕೊನೆಯುಸಿರೆಳೆದಿದ್ದರು. ಅತೀ ಹೆಚ್ಚು ಮಂದಿ ವೈದ್ಯರ ಸಾವು ಸಂಭವಿಸಿದ್ದು ಬಿಹಾರ(69), ಉತ್ತರಪ್ರದೇಶ (34) ಮತ್ತು ದೆಹಲಿ (27). ಇಡೀ ದೇಶಾದ್ಯಂತ ಕೇವಲ ಶೇ.3ರಷ್ಟು ವೈದ್ಯರಿಗೆ ಮಾತ್ರ ಲಸಿಕೆ ನೀಡಲಾಗಿದೆ.
ಭಾರತದಲ್ಲಿ ಕೋವಿಡ್ ಲಸಿಕೆ ಅಭಿಯಾನ ಆರಂಭವಾಗಿ ಐದು ತಿಂಗಳಾಗಿದೆ. ದೇಶದಲ್ಲಿನ ಶೇ.66ರಷ್ಟು ಆರೋಗ್ಯ ಸಿಬಂದಿಗಳಿಗೆ ಲಸಿಕೆ ನೀಡಲಾಗಿದೆ. ವೈದ್ಯರು ಕೂಡಾ ಲಸಿಕೆ ತೆಗೆದುಕೊಳ್ಳಲು ಎಲ್ಲಾ ರೀತಿಯ ಶ್ರಮವಹಿಸುವುದಾಗಿ ಐಎಂಎ ಹೇಳಿದೆ. ದೇಶದಲ್ಲಿ ಸಾವಿರಾರು ವೈದ್ಯರು ಲಸಿಕೆ ಪಡೆದುಕೊಂಡಿಲ್ಲ ಎಂಬುದು ಪತ್ತೆಹಚ್ಚಲಾಗಿದೆ ಎಂದು ಐಎಂಎ ಹೇಳಿದೆ. ಫ್ರಂಟ್ ಲೈನ್ ವಾರಿಯರ್ಸ್ ಎಲ್ಲಾ ವೈದ್ಯರು ಲಸಿಕೆ ಪಡೆದುಕೊಳ್ಳಬೇಕು ಎಂದು ತಿಳಿಸಿದೆ.
ವೈದ್ಯರ ಸಂಖ್ಯೆ ಕಡಿಮೆ ಇದ್ದು, ಅತೀ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಕೆಲವೊಮ್ಮೆ ಯಾವುದೇ ವಿಶ್ರಾಂತಿ ಇಲ್ಲದೇ 48ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದ ವೈರಲ್ ಗೆ ತುತ್ತಾಗಿ ಕೊನೆಗೆ ಸಾವನ್ನಪ್ಪುವ ಸ್ಥಿತಿ ಬಂದಿದೆ. ಆರೋಗ್ಯ ಉದ್ಯೋಗಿಗಳನ್ನು ಹೆಚ್ಚಳ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸೂಕ್ತ ಕ್ರಮತೆಗೆದುಕೊಳ್ಳುವ ಅಗತ್ಯವಿದೆ ಎಂದು ಐಎಂಎ ಹೇಳಿದೆ.