ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ “ಕುರುಕ್ಷೇತ್ರ’ ಅದ್ಧೂರಿಯಾಗಿ ತೆರೆಕಂಡು, ಈಗ 50 ದಿನಗಳ ಪ್ರದರ್ಶನವನ್ನು ಯಶಸ್ವಿಯಾಗಿ ಪೂರೈಸಿದೆ. ಒಂದೆಡೆ ಚಿತ್ರತಂಡ ಮತ್ತು ಅಭಿಮಾನಿಗಳು ಈ ಸಂಭ್ರಮವನ್ನು ಭರ್ಜರಿಯಾಗಿ ಆಚರಿಸುತ್ತಿದೆ. ಇದೇ ವೇಳೆ ಚಿತ್ರದ ಯಶಸ್ಸಿಗೆ ಕಾರಣರಾದವರನ್ನು ನೆನೆದಿರುವ ನಟ ದರ್ಶನ್, ಚಿತ್ರದ ಅಭಿಮಾನಿಗಳಿಗೆ ಮತ್ತು “ಕುರುಕ್ಷೇತ್ರ’ ಚಿತ್ರವನ್ನ ಯಶಸ್ವಿಗೊಳಿಸಿದ ಎಲ್ಲರಿಗೂ ಹೃದಯ ಪೂರ್ವಕ ಧನ್ಯವಾದ ತಿಳಿಸಿದ್ದಾರೆ.
ಈ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿರುವ ದರ್ಶನ್, “ಕುರುಕ್ಷೇತ್ರ’ ಚಿತ್ರಕ್ಕೆ 50 ದಿನಗಳ ಸಂಭ್ರಮ. ಈಗಿನ ಕಾಲದಲ್ಲಿ ಪೌರಾಣಿಕ ಚಿತ್ರಗಳನ್ನು ಮಾಡಬೇಕೆಂದು ಪಣ ತೊಟ್ಟ ನಿರ್ಮಾಪಕರಿಗೆ, ಅವರ ಆಸೆಗೆ ಬೆನ್ನೆಲುಬಾಗಿ ನಿಂತ ಇಡೀ ಚಿತ್ರತಂಡಕ್ಕೆ, ಕೊನೆಯದಾಗಿ ಪ್ರೀತಿಯಿಂದ ಚಿತ್ರಮಂದಿರಗಳತ್ತ ಧಾವಿಸಿ ಆಶೀರ್ವದಿಸಿದ ಅಭಿಮಾನಿಗಳು ಕರ್ನಾಟಕ ಜನತೆಗೆ ನನ್ನ ಹೃದಯಪೂರ್ವಕ ವಂದನೆಗಳು’ ಎಂದಿದ್ದಾರೆ.
ಆ. 9 ರಂದು ಬಿಡುಗಡೆಯಾಗಿದ್ದ “ಕುರುಕ್ಷೇತ್ರ’ ಚಿತ್ರವನ್ನು ನಿರ್ಮಾಪಕ ಮುನಿರತ್ನ “ವೃಷಭಾದ್ರಿ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ಬಹುಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದರು. ಚಿತ್ರದಲ್ಲಿ ದುರ್ಯೋಧನನ ಪಾತ್ರದಲ್ಲಿ ದರ್ಶನ್, ಭೀಷ್ಮನ ಪಾತ್ರದಲ್ಲಿ ಅಂಬರೀಶ್, ಕೃಷ್ಣನ ಪಾತ್ರದಲ್ಲಿ ರವಿಚಂದ್ರನ್, ಅರ್ಜುನನ ಪಾತ್ರದಲ್ಲಿ ಅರ್ಜುನ್ ಸರ್ಜಾ, ಅಭಿಮನ್ಯು ಪಾತ್ರದಲ್ಲಿ ನಿಖೀಲ್ ಕುಮಾರ್ ತೆರೆಮೇಲೆ ಕಾಣಿಸಿಕೊಂಡಿದ್ದರು.
ಹಿರಿಯ ನಟ ಶ್ರೀನಿವಾಸ ಮೂರ್ತಿ, ಶಶಿಕುಮಾರ್, ಭಾರತಿ ವಿಷ್ಣುವರ್ಧನ್, ಮೇಘನಾ ರಾಜ್, ಹರಿಪ್ರಿಯಾ ಮೊದಲಾದ ಕಲಾವಿದರು ಚಿತ್ರದ ಇತರ ಪ್ರಮುಖ ಪಾತ್ರಗಳಿಗೆ ಬಣ್ಣ ಹಚ್ಚಿದ್ದರು. ಚಿತ್ರಕ್ಕೆ ನಿರ್ದೇಶಕ ನಾಗಣ್ಣ ಆ್ಯಕ್ಷನ್-ಕಟ್ ಹೇಳಿದ್ದರು. ನಾಲ್ಕು ಭಾಷೆಯಲ್ಲಿ ಬಿಡುಗಡೆಯಾಗಿದ್ದ “ಕುರುಕ್ಷೇತ್ರ’ ಒಟ್ಟಾರೆ ನೂರು ಕೋಟಿ ಗಳಿಕೆ ಕಂಡಿದೆ ಎಂದು ಹೇಳಲಾಗುತ್ತಿದ್ದರೂ, ಚಿತ್ರತಂಡ ಮಾತ್ರ ಅಧಿಕೃತವಾಗಿ ಇಲ್ಲಿಯವರೆಗಿನ ಗಳಿಕೆಯ ಗುಟ್ಟು ಬಿಟ್ಟುಕೊಟ್ಟಿಲ್ಲ.