Advertisement

ನಿಷೇಧಾಜ್ಞೆಗೆ 50 ದಿನ; ದ.ಕ. ಇತಿಹಾಸದಲ್ಲೇ ಮೊದಲು

11:24 AM Jul 15, 2017 | |

ಮಂಗಳೂರು: ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದರಲ್ಲಿಯೂ ಬಂಟ್ವಾಳ ತಾಲೂಕಿನಲ್ಲಿ ಸೆಕ್ಷನ್‌ 144ರನ್ವಯ ನಿಷೇಧಾಜ್ಞೆ ಜಾರಿ ಮಾಡಿ ಇಂದಿಗೆ 50 ದಿನಗಳಾಗಿವೆ. ವಿಶೇಷವೆಂದರೆ ಜಿಲ್ಲೆಯ ಇತಿಹಾಸದಲ್ಲಿಯೇ ಇಷ್ಟೊಂದು ಸುದೀರ್ಘ‌ ದಿನಗಳ ನಿಷೇಧಾಜ್ಞೆ ವಿಧಿಸಿರುವುದು ಇದೇ ಮೊದಲು.

Advertisement

ಕಲ್ಲಡ್ಕದಲ್ಲಿ ಮೇ 26ರಂದು ನಡೆದ  ಇರಿತ ಪ್ರಕರಣದ ಬಳಿಕ ಉಂಟಾದ ಕೆಲವು ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಬಂಟ್ವಾಳ ತಾಲೂಕಿನಾ ದ್ಯಂತ ಮೇ 27ರಿಂದ ನಿಷೇಧಾಜ್ಞೆ ಜಾರಿಗೊಳಿಸಲಾಯಿತು. ಬಳಿಕ ಮಂಗಳೂರು ಕಮಿಷನರೆಟ್‌ ವ್ಯಾಪ್ತಿ ಹೊರತು ಪಡಿಸಿ ಜಿಲ್ಲೆಯಾದ್ಯಂತ ಸೆಕ್ಷನ್‌ ಹಾಕಲಾಯಿತು. ಕಳೆದ ಒಂದೂವರೆ ತಿಂಗಳಲ್ಲಿ ಒಟ್ಟು ಸುಮಾರು 4 ಬಾರಿ ನಿಷೇಧಾಜ್ಞೆ ವಿಸ್ತರಣೆಯಾಗಿದೆ. ಇದೀಗ ಮತ್ತೆ ಜು. 21ರ ವರೆಗೂ ಸೆಕ್ಷನ್‌ ಮುಂದುವರಿದಿದೆ.

ಸಾಮಾನ್ಯವಾಗಿ ಸೆಕ್ಷನ್‌ ವಿಧಿಸಿದ ಮೇಲೆ ಯಾವುದೇ ಸಭೆ ಸಮಾರಂಭಗಳು, ಪ್ರತಿಭಟನೆ ನಡೆಸುವಂತಿಲ್ಲ, ಜನ ಗುಂಪು ಕಟ್ಟಿಕೊಂಡು ಮಾತನಾಡುವಂತಿಲ್ಲ. ಅಹಿತಕರ ಘಟನೆಗಳಿಗೆ ಕಾರಣವಾಗುವ ಯಾವುದೇ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವಂತಿಲ್ಲ. ಆದರೆ ಸೆಕ್ಷನ್‌ ಇದ್ದರೂ ಜಿಲ್ಲೆಯ ಜನರಿಗಂತೂ ಅದರ ಅನುಭವ ಮಾತ್ರ ಆಗುತ್ತಿಲ್ಲ. ಎಲ್ಲವೂ ಸಹಜವಾಗಿಯೇ ನಡೆಯುತ್ತಿದೆ. ಜನರೂ
ಕೂಡ ತಮ್ಮ ದೈನಂದಿನ ಕೆಲಸಗಳಲ್ಲಿ ತೊಡಗಿಸಿ ಕೊಂಡಿದ್ದಾರೆ. ಹೀಗಾಗಿ ಎಲ್ಲೆಡೆ ಶಾಂತಿ-ಅಶಾಂತಿ ಎಂದು ಬೊಬ್ಬೆ ಹೊಡೆಯುವವರಿಗಷ್ಟೇ 144 ಸೆಕ್ಷನ್‌ ದೊಡ್ಡ ವಿಷಯವಾಗಿ ಕಾಣಿಸುತ್ತಿದೆ. 

ಸಾಮಾಜಿಕ ತಾಣಗಳಲ್ಲಷ್ಟೇ  ಉರಿಯುತ್ತಿದೆ ಮಂಗಳೂರು!
ಸಾಮಾಜಿಕ ತಾಣಗಳ ಬರಹಗಾರರೂ ಜನರನ್ನು ಕೆರಳಿಸುವಂತಹ ಬರಹಗಳನ್ನು ಬರೆದುಬಿಟ್ಟರು. ಜಿಲ್ಲೆಗೆ ಸಂಬಂಧಪಡದ, ದೂರದೂರಿನಲ್ಲಿರುವ ಫೇಸುºಕ್‌ ಬರಹಗಾರರು ವಸ್ತುಸ್ಥಿತಿಯನ್ನು ಅರಿಯದೇ ಬೇಕಾಬಿಟ್ಟಿ ಬರೆದರು. ಕೆಲವು ಫೇಸುºಕ್‌ ಪೇಜ್‌ಗಳೂ ದ್ವೇಷದ ಬರಹಗಳೊಂದಿಗೆ ಜನರನ್ನು ಎತ್ತಿ ಕಟ್ಟುವ ಕೆಲಸ ಮಾಡಿದವೇ ಹೊರತು ಅಹಿತಕರ ಘಟನೆಗಳು ನಡೆದಾಗ ಅವುಗಳನ್ನು ತಡೆಯಲು ಮತ್ತು ಜಿಲ್ಲೆಯಲ್ಲಿ ಶಾಂತಿ ಸಾಮರಸ್ಯ ನೆಲೆಗೊಳ್ಳಲು ತಾವೇನು ಮಾಡಬಹುದು ಎಂಬುದನ್ನು ಯೋಚಿಸಲಿಲ್ಲ. 

ಜಿಲ್ಲೆಗೆ ಕೆಟ್ಟ ಹೆಸರು
ದ.ಕ. ಶೈಕ್ಷಣಿಕ ಮತ್ತು ಪ್ರವಾಸೋದ್ಯಮ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದಲ್ಲೇ ಗುರುತಿಸಿಕೊಂಡ ಜಿಲ್ಲೆ. ಆದರೆ ಇದೀಗ ಜಿಲ್ಲೆಯಲ್ಲಿ ಪದೇಪದೇ ಘಟಿಸುತ್ತಿರುವ ಅಹಿತಕರ ಘಟನೆಗಳು, ಸುದೀರ್ಘ‌ ದಿನಗಳ ಕಾಲ ನಿಷೇಧಾಜ್ಞೆ ಜಾರಿಯಿಂದಾಗಿ ರಾಷ್ಟ್ರ ಮಟ್ಟದಲ್ಲಿ ಜಿಲ್ಲೆಯ ಘನತೆಗೂ ಧಕ್ಕೆಯಾಗುತ್ತಿದೆ.

Advertisement

ರಾಜಕೀಯ ಕೆಸರೆರಚಾಟ
ಈ ನಡುವೆ ಕಳೆದ 50 ದಿನಗಳಿಂದ ರಾಜಕೀಯ ಮುಖಂಡರ ನಡುವೆ ಕೆಸರೆರಚಾಟಗಳೂ ನಡೆಯುತ್ತಿವೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ಹಿಡಿದು, ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಸಂಸದೆ ಶೋಭಾ ಕರಂದ್ಲಾಜೆ, ಗೃಹ ಸಚಿವರಾದಿಯಾಗಿ ಘಟಾನುಘಟಿ ನಾಯಕರು ರಾಜಕೀಯ ಕೆಸರೆರಚಾಟಕ್ಕೆಂದೇ ಬಂದು ಹೋಗಿದ್ದಾರೆ. ಈ ನಡುವೆ ಡಿಜಿಪಿ ಆರ್‌.ಕೆ. ದತ್ತಾ, ಈ ಹಿಂದೆ ಕರಾವಳಿಯಲ್ಲಿ ಕೆಲಸ ಮಾಡಿದ ಉನ್ನತ ಪೊಲೀಸ್‌ ಅಧಿಕಾರಿಗಳಾದ ಅಣ್ಣಾಮಲೈ, ಡಾ| ಶರಣಪ್ಪ, ಚಂದ್ರಶೇಖರ್‌ ಕೂಡ ಜಿಲ್ಲೆಗೆ ಬಂದಿದ್ದು ವಿಶೇಷ. ಅದರಲ್ಲೂ ರಾಜ್ಯ ಕಾನೂನು ಸುವ್ಯವಸ್ಥೆ ಡಿಜಿಪಿ ಅಲೋಕ್‌ ಮೋಹನ್‌ ಈಗಾಗಲೇ ಮೂರು ಬಾರಿ ಜಿಲ್ಲೆಗೆ ಬಂದು ಹೋಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next