ಹೊಸದಿಲ್ಲಿ:ದೇಶದ ಕುಸಿಯುತ್ತಿರುವ ಆರ್ಥಿಕತೆಗೆ ಚೇತರಿಕೆ ನೀಡುವುದು ಹಾಗೂ ದೇಶವನ್ನು 35 ಸಾವಿರ ಕೋಟಿ ರೂ. ಆರ್ಥಿಕತೆಯನ್ನಾಗಿ ರೂಪಿಸುವುದು ಕೇಂದ್ರ ಸರಕಾರದ ಪ್ರಮುಖ ಆದ್ಯತೆಯಾಗಿದ್ದು, ಇದಕ್ಕಾಗಿ ಕಳೆದ 50 ದಿನಗಳಲ್ಲಿ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ. ಇದರ ಹೊರತಾಗಿಯೂ ಸಮಗ್ರ ಬದಲಾವಣೆಯ ಅಗತ್ಯವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಎರಡನೇ ಅವಧಿಗೆ ಅಧಿಕಾರಕ್ಕೇರಿದ ನರೇಂದ್ರ ಮೋದಿ, ಮೊದಲನೇ ದಿನದಿಂದಲೇ ಆರ್ಥಿಕತೆ ಉತ್ತೇಜನಕ್ಕೆ ಪಣತೊಟ್ಟಿದ್ದಾರೆ.
ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ, ಎಲ್ಲ ರೈತರಿಗೆ ಪಿಎಂ ಕಿಸಾನ ಯೋಜನೆಯನ್ನು ವಿಸ್ತರಿಸುವುದು ಹಾಗೂ ಜಲ ಶಕ್ತಿ ಸಚಿವಾಲಯವನ್ನು ಸ್ಥಾಪಿಸುವ ಮಹತ್ವದ ಕ್ರಮಗಳನ್ನೂ ಸರಕಾರ ಕೈಗೊಂಡಿದೆ. ಜು.30ಕ್ಕೆ ಮೋದಿ ನೇತೃತ್ವದ ಎನ್‌ಡಿಎ ಸರಕಾರ 2 ನೇ ಬಾರಿಗೆ ಅಧಿಕಾರಕ್ಕೆ ಏರಿ 2 ತಿಂಗಳು ಪೂರ್ತಿಯಾಗಲಿವೆ.
ಬಜೆಟ್‌ನಲ್ಲಿ ದೇಶವನ್ನು 35 ಸಾವಿರ ಕೋಟಿ ರೂ. ಆರ್ಥಿಕತೆಯನ್ನಾಗಿ ರೂಪಿಸುವ ಗುರಿಯನ್ನೂ ಪ್ರಕಟಿಸಿದೆ. ಪ್ರಸ್ತುತ ವಿತ್ತ ವರ್ಷದಲ್ಲಿ ಭಾರತದ ಆರ್ಥಿಕತೆಯು ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದಾರೆ.
ಕಳೆದ 50 ದಿನಗಳಲ್ಲಿ ಸರಕಾರ ಹಲವು ಮಹತ್ವದ ಕ್ರಮಗಳನ್ನು ಕೈಗೊಂಡಿದೆ. ಎಲೆಕ್ಟ್ರಿಕ್ ವಾಹನಗಳು, ವಿದ್ಯುತ್ ಮತ್ತು ಅಡುಗೆ ಅನಿಲವನ್ನು ಪ್ರತಿ ಮನೆಗೂ ಒದಗಿಸುವುದು ಹಾಗೂ ತೆರಿಗೆ ವ್ಯವಸ್ಥೆಯ ಸುಧಾರಣೆಯ ಬಗ್ಗೆ ಬಜೆಟ್‌ನಲ್ಲಿ ಉಲ್ಲೇಖೀಸಲಾಗಿದೆ. ನಗರಾಭಿವೃದ್ಧಿ ಹಾಗೂ ಗ್ರಾಮ ಸಡಕ್ ಯೋಜನೆಯ ಬಗ್ಗೆಯೂ ಬಜೆಟ್‌ನಲ್ಲಿ ಉಲ್ಲೇಖೀಸಲಾಗಿದೆ.
ಕಾರ್ಮಿಕ ಕಲ್ಯಾಣ, ಬಡವರನ್ನು ಮೋಸ ಮಾಡದಂತೆ ತಡೆಯುವ ಕಾನೂನುಗಳು ಮತ್ತು ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸುವವರಿಗೆ ಕಠಿಣ ಶಿಕ್ಷೆ, ಮುಂಗಾರು ಬೆಳೆಗಳಿಗೆ ಅಧಿಕ ಬೆಂಬಲ ಬೆಲೆ ಸೇರಿದಂತೆ ಹಲವು ಮಹತ್ವದ ಕ್ರಮಗಳನ್ನು ಕಳೆದ 50 ದಿನಗಳಲ್ಲಿ ಸರಕಾರ ಕೈಗೊಂಡಿದೆ. ಕೇವಲ ದೇಶಿ ನೀತಿಗಳಲ್ಲಷ್ಟೇ ಅಲ್ಲ, ವಿದೇಶಿ ನೀತಿಯಲ್ಲೂ ಕಳೆದ ಐವತ್ತು ದಿನಗಳಲ್ಲಿ ಮಹತ್ವದ ಪ್ರಗತಿಯಾಗಿದೆ. ಬಿಮ್‌ಸ್ಟೆಕ್ ಶೃಂಗದಲ್ಲಿ ಮೋದಿ ಭಾಗವಹಿಸಿ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೇರಿದಂತೆ ಹಲವು ಗಣ್ಯರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಕುರಿತು ಚರ್ಚೆ ನಡೆಸಿದ್ದಾರೆ.