ವಿಧಾನಸಭೆ: ಪ್ರಶ್ನೆಪತ್ರಿಕೆ ಸೋರಿಕೆ ತಡೆಗಟ್ಟುವುದು ಹಾಗೂ ಪರೀಕ್ಷೆ ಮತ್ತು ಮೌಲ್ಯಮಾಪನದ ವೇಳೆ ನಡೆಯುವ
ಅಕ್ರಮಗಳನ್ನು ತಡೆಗಟ್ಟಲು ಇರುವ ಕಾನೂನನ್ನು ಇನ್ನಷ್ಟು ಬಲಿಷ್ಠಗೊಳಿಸಲು ಸರ್ಕಾರ ತೀರ್ಮಾನಿಸಿದೆ.
ಪರೀಕ್ಷೆಯಲ್ಲಿ ಅಕ್ರಮ ಎಸಗಿದವರಿಗೆ 5 ವರ್ಷದವರೆಗೆ ವಿಸ್ತರಿಸಬಹುದಾದ ಸೆರೆವಾಸ ಅಥವಾ ಐದು ಲಕ್ಷ ರೂ. ದಂಡ
ಅಥವಾ ಎರಡೂ ಶಿಕ್ಷೆ ವಿಧಿಸಲು ಮುಂದಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಶಿಕ್ಷಣ (ತಿದ್ದುಪಡಿ) ವಿಧೇಯಕ-2017ನ್ನು
ಗುರುವಾರ ವಿಧಾನಸಭೆಯಲ್ಲಿ ಮಂಡಿಸಲಾಗಿದ್ದು, ಪರೀಕ್ಷೆ ಸಂದರ್ಭದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ನಿಲ್ಲಿಸುವ ಹಾಗೂ ಪರೀಕ್ಷೆ ಮತ್ತು ಮೌಲ್ಯಮಾಪನ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಇತರರು ಮಾಡುವ ಅಕ್ರಮಗಳನ್ನು ತೊಡೆದು ಹಾಕುವ ಉದ್ದೇಶದಿಂದ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯ ಸಮಿತಿಯ ಶಿಫಾರಸುಗಳನ್ನು
ಜಾರಿಗೊಳಿಸಲು ಈ ತಿದ್ದುಪಡಿಯಲ್ಲಿ ಪ್ರಸ್ತಾಪಿಸಲಾಗಿದೆ.
ಅದರಂತೆ ಪರೀಕ್ಷೆ ಮತ್ತು ಮೌಲ್ಯಮಾಪನ ಸಂದರ್ಭದಲ್ಲಿ ದುರಾಚರಣೆ ಎಂಬ ಪದದ ವ್ಯಾಖ್ಯಾನವನ್ನು ವಿಸ್ತರಿಸಲಾಗಿದ್ದು, ಬರೆದ, ಧ್ವನಿಮುದ್ರಿತ, ಬೆರಳಚ್ಚು ಮಾಡಿದ, ಛಾಯಾಚಿತ್ರ ತೆಗೆದ ಅಥವಾ ಮುದ್ರಿಸಿದ, ಬೇರೆ ಯಾವುದೇ ವ್ಯಕ್ತಿ ರವಾನೆ ಮಾಡಿದ ಅಥವಾ ಯಾವುದೇ ಸಾಮಗ್ರಿ, ವ್ಯಕ್ತಿಯಿಂದ ಸಹಾಯ ತೆಗೆದುಕೊಳ್ಳಲು ಯತ್ನಿಸುವುದು, ಅರ್ಹತೆ ಇಲ್ಲದ ಅಂಕ ಅಥವಾ ಶ್ರೇಣಿ ಪಡೆಯಲು ನ್ಯಾಯಯುತವಲ್ಲದ ಮಾರ್ಗದಲ್ಲಿ ಅನುಕೂಲ ಪಡೆಯಲು ಅಭ್ಯರ್ಥಿಗಳಿಗೆ ಅವಕಾಶ ಕಲ್ಪಿಸುವುದು, ಪರೀಕ್ಷಾ ಅವಧಿಗಿಂತ ಮುಂಚೆ, ಪರೀಕ್ಷಾ ಸಮಯದಲ್ಲಿ ಯಾರೇ ಆದರೂ ಕಾನೂನು ಮೀರಿದರೆ ಅದನ್ನು ಅಕ್ರಮ ಎದು ಪರಿಗಣಿಸಲಾಗುತ್ತದೆ. ಪ್ರಶ್ನೆಪತ್ರಿಕೆ ಎಂಬುದು ಸಕ್ಷಮ ಪ್ರಾಧಿಕಾರದ ಸ್ವತ್ತಾಗಿರತಕ್ಕದ್ದು. ಪರೀಕ್ಷೆಗೆ ಮೊದಲು ಅಥವಾ ಪರೀಕ್ಷೆ ಸಮಯದಲ್ಲಿ ಅದನ್ನು ಕೊಳ್ಳುವುದು, ಮಾರುವುದು, ಸಂಗ್ರಹಿಸುವುದು ಅಥವಾ ಹಾಗೆ ಮಾಡಲು ಪ್ರಯತ್ನಿಸುವುದು, ಅವುಗಳನ್ನು ಬೇರೆಯವರಿಗೆ ಕೊಡುವಂತೆ ಪ್ರೇರೇಪಿಸುವುದು, ಅವುಗಳನ್ನು ಮುದ್ರಿಸುವುದು, ಫೋಟೋ ಅಥವಾ ಛಾಯಾಪ್ರತಿ ತೆಗೆಯುವುದು. ಕೈಬರಹ ಅಥವಾ ಬ್ರೇಲ್ ನಮೂನೆಯಲ್ಲಿ ತಿಳಿಸುವುದು, ಕಳುಹಿಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ.