ಭೋಪಾಲ್: ಬೀದಿ ನಾಯಿಗಳ ದಾಳಿಗೆ ಸಿಲುಕಿದ ಐದು ವರ್ಷದ ಮಗುವೊಂದು ಮೃತಪಟ್ಟ ಘಟನೆ ಮಧ್ಯ ಪ್ರದೇಶದ ಖರ್ಗೋನ್ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ. ಮೃತಪಟ್ಟ ಮಗುವನ್ನು ಸೋನಿಯಾ ಎಂದು ಗುರುತಿಸಲಾಗಿದೆ.
ಬೀದಿ ನಾಯಿಗಳ ದಾಳಿಯಿಂದ ಮಗುವಿನ ಕುತ್ತಿಗೆ ಸೇರಿದಂತೆ ದೇಹದ ಇತರ ಭಾಗಗಳಲ್ಲಿ ಗಂಭೀರ ಗಾಯವಾಗಿದೆ. ಅತಿಯಾದ ರಕ್ತಸ್ರಾವದಿಂದ ಬಾಲಕಿ ಸಾವನ್ನಪ್ಪಿದ್ದಾಳೆ.
ಬೆಡಿಯಾ ಪೊಲೀಸ್ ಠಾಣಾ ವ್ಯಾಪ್ತಿಯ ಬಕಾವಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಶುಕ್ರವಾರ ಮಧ್ಯಾಹ್ನ ಬಾಲಕಿ ಸಮೀಪದ ಅಂಗಡಿಗೆ ಹೋಗುತ್ತಿದ್ದಾಗ ರಸ್ತೆಯಲ್ಲಿ ಅರ್ಧ ಡಜನ್ ನಾಯಿಗಳು ದಾಳಿ ನಡೆಸಿವೆ. ಕೂಲಿ ಕೆಲಸ ಮಾಡುವ ಆಕೆಯ ತಂದೆ ಯಾವುದೋ ಕೆಲಸದ ನಿಮಿತ್ತ ಹೊರಗೆ ಹೋಗಿದ್ದ ವೇಳೆ ನಾಯಿಗಳು ಮಗಳ ಮೇಲೆ ದಾಳಿ ನಡೆಸಿವೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಜೆಹಾದ್ ಗೆ ಹೋಲಿಕೆ: ಶಿವರಾಜ್ ಪಾಟೀಲ್ ಹೇಳಿಕೆ ಒಪ್ಪಲು ಸಾಧ್ಯವಿಲ್ಲ: ಕಾಂಗ್ರೆಸ್
ಸೋನಿಯಾ ಅಳುವುದನ್ನು ಕೇಳಿದ ಸ್ಥಳೀಯರು ಆಕೆಗೆ ಸಹಾಯ ಮಾಡಲು ಧಾವಿಸಿದರು, ಅವರು ನಾಯಿಗಳನ್ನು ಓಡಿಸಿದರಾದರೂ ಐದು ವರ್ಷದ ಮಗುವಿನ ಕುತ್ತಿಗೆ ಮತ್ತು ದೇಹದ ಭಾಗಗಳಿಗೆ ಅನೇಕ ಗಾಯಗಳಾಗಿತ್ತು. ಕೂಡಲೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋದರೂ ಆಕೆ ಬದುಕಿ ಉಳಿಯಲಿಲ್ಲ.