ಶಿರ್ವ: ತನ್ನ ವಿಶೇಷ ಜ್ಞಾ ಪಕ ಶಕ್ತಿಯ ಮೂಲಕ ಸುಮಾರು 50 ರಿಂದ 70 ದೇಶಗಳ ರಾಷ್ಟ್ರಧ್ವಜ,50ಕ್ಕೂ ಹೆಚ್ಚು ಪ್ರಾಡಕ್ಟ್/ಕಂಪೆನಿಯ ಲೋಗೋ ಗುರುತಿಸುವ ಮೂಲಕ ಶಿರ್ವದ 5 ವರ್ಷದ ಪೋರ ವಿಶಿಷ್ಟ ಸಾಧನೆ ಮಾಡುತ್ತಿದ್ದಾನೆ.
ದುಬೈಯಲ್ಲಿ ಹೆಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿ ಉದ್ಯೋಗದಲ್ಲಿರುವ ಶಿರ್ವದ ಪ್ರಶಾಂತ್ ಕುಂದರ್ ಮತ್ತು ದುಬೈಯ ಖಾಸಗಿ ಕಂಪೆನಿಯೊಂದರಲ್ಲಿ ಫೈನಾನ್ಸ್ ಮೆನೇಜರ್ ಆಗಿರುವ ಶ್ವೇತಾ ಕುಂದರ್ ಅವರ ಪುತ್ರ ವ್ಯೋಮ್‌ಕುಂದರ್ ಸಾಧನೆ ಮಾಡುತ್ತಿರುವ ಪುಟ್ಟ ಬಾಲಕ.
ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಟಿವಿ, ಮೊಬೈಲ್ ನೋಡಲು ಪ್ರಾರಂಭಿಸಿದ್ದ ಈತ ಯೂಟ್ಯೂಬ್ ಮೂಲಕ ವಿವಿಧ ದೇಶಗಳ ರಾಷ್ಟ್ರಧ್ವಜಗಳನ್ನು ಗುರುತಿಸಿ ಹೇಳುತ್ತಿದ್ದಾನೆ. ಎಲ್ಲಾ ಮಕ್ಕಳಂತೆ ಕಾರ್ಟೂನ್ ನೋಡುವ ಆಸಕ್ತಿ ಇಲ್ಲದೇ ಇದ್ದು, ಕ್ರಿಕೆಟ್,ಕ್ವಿಜ್,ವಿವಿಧ ವಾಹನಗಳು,ಕಲರ್ ಮತ್ತಿತರ ಆಸಕ್ತಿದಾಯಕ ವಿಷಯಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದಾನೆ. ತನ್ನ ಅದ್ಭುತ ನೆನಪಿನ ಶಕ್ತಿಯಿಂದ ಕಳೆದ 6 ತಿಂಗಳ ಹಿಂದಿನಿಂದ ಯಾರದೇ ಸಹಾಯವಿಲ್ಲದೆ ರಾಷ್ಟ್ರ ಧ್ವಜ ಗುರುತಿಸುವುದು,ವಾಹನಗಳು, ಕ್ರಿಕೆಟಿಗರು, ಯಾವುದೇ ಪ್ರಾಡಕ್ಟ್/ಕಂಪೆನಿಯ ಲೋಗೋ ತೋರಿಸಿದಲ್ಲಿ ಪಟಪಟನೆ ಹೇಳುವ ಚತುರತೆ ಇದೆ.
ಕ್ರಿಕೆಟ್ ಬಗ್ಗೆ ಆಸಕ್ತಿ ಇರುವ ಈತ ಐಪಿಎಲ್ ಟೀಂನ ಆಟಗಾರರನ್ನು ಗುರುತಿಸುತ್ತಾನೆ. ಅಲ್ಲದೆ ಪುಟ್‌ಬಾಲ್ ಮತ್ತು ಕ್ರಿಕೆಟ್‌ನ ಸ್ಟಾರ್ ಆಟಗಾರರ ಹೆಸರು ಮತ್ತು ಅವರ ದೇಶವನ್ನು ಹೇಳುತ್ತಾನೆ. ವಾಹನದಲ್ಲಿ ತೆರಳುವಾಗ ಸಿಗ್ನಲ್ ಬಗ್ಗೆ ಆಸಕ್ತಿ ಹೊಂದಿರುವ ಈತ ಯಾವುದರ ಸಿಗ್ನಲ್ ಎಂದು ನಿಖರವಾಗಿ ಹೇಳುತ್ತಾನೆ. ಯಾವುದೇ ವಿಷಯದ ಬಗ್ಗೆ ಪ್ರಶ್ನೆ ಮಾಡುವ ಅಭ್ಯಾಸ ಬೆಳೆಸಿಕೊಂಡ ಈತನಿಗೆ ವಿಷಯದ ಬಗ್ಗೆ ಸಂಪೂರ್ಣ ತಿಳಿಯುವ ಉತ್ಸಾಹವಿದೆ ಎಂದು ಆತನ ತಾಯಿ ಶ್ವೇತಾ ಕುಂದರ್ ಹೆಮ್ಮೆಯಿಂದ ಹೇಳುತ್ತಾರೆ.
ವ್ಯೋಮ್‌ಕುಂದರ್ ದುಬೈಯಲ್ಲಿ ಹುಟ್ಟಿ ಬೆಳೆದಿದ್ದು, ದುಬೈಯ ಜೆಎಸ್‌ಎಸ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಯು ಕೆಜಿಯಲ್ಲಿ ಕಲಿಯುತ್ತಿದ್ದಾನೆ.ಸಭಾ ಕಂಪನವಿಲ್ಲದೆ ಶಾಲೆಯ ಪ್ರತೀ ಚಟುವಟಿಕೆಯಲ್ಲಿಯೂ ಭಾಗವಹಿಸುವ ಈ ಪುಟ್ಟ ಬಾಲಕ ಶಾಲೆಯ ಶಿಕ್ಷಕಿಯರಿಗೂ ಅಚ್ಚುಮೆಚ್ಚು.
ಪಟಪಟನೆ ಇಂಗ್ಲಿಷ್ ಮಾತನಾಡುವ ಈತನಿಗೆ ತುಳು ಸರಿಯಾಗಿ ಬರುವುದಿಲ್ಲ. ರಜಾದಿನದಲ್ಲಿ ತುಳು ಕಲಿಯುವ ಸಲುವಾಗಿ ಊರಿಗೆ ಬಂದಿದ್ದು, ಅಜ್ಜ ಗೋವಿಂದ ಕುಂದರ್ ಮತ್ತು ಅಜ್ಜಿ ರಾಜೀವಿ ಕುಂದರ್ ಅವರೊಂದಿಗೆ ನ್ಯಾರ್ಮ ಸೊಸೈಟಿ ಬಳಿಯ ಮನೆಯಲ್ಲಿ ಇದ್ದಾರೆ.ಅಜ್ಜಿಯೊಂದಿಗೆ ತುಳು ಮಾತನಾಡಲು ಕಷ್ಟವಾಗುತ್ತಿದೆ.ಅಜ್ಜಿಯೇ ಇಂಗ್ಲಿಷ್ ಕಲಿಯಲಿ,ನಾನ್ಯಾಕೆ ತುಳು ಕಲಿಯಲಿ ಎಂದು ಮುಗ್ಧವಾಗಿ ಹೇಳುತ್ತಾನೆ.
ಮೊಬೈಲ್ ಗೀಳಿನಲ್ಲಿ ಮಕ್ಕಳು ಹಾದಿ ತಪ್ಪುತ್ತಿದ್ದಾರೆ ಎನ್ನುವ ಪ್ರಸ್ತುತ ಕಾಲಘಟ್ಟದಲ್ಲಿ ಮೊಬೈಲ್‌ನಲ್ಲಿಯೇ ಯೂಟ್ಯೂಬ್‌ನಲ್ಲಿ ವಿವಿಧ ವಿಷಯಗಳ ಬಗ್ಗೆ ಆಸಕ್ತಿ ಬೆಳೆಸಿಕೊಂಡಿರುವ ವ್ಯೋಮ್‌ಎಲ್ಲಾ ಮಕ್ಕಳಿಗೆ ಮಾದರಿಯಾಗಿದ್ದಾನೆ.
ವ್ಯೋಮ್ ತುಂಬಾ ಸ್ಮಾರ್ಟ್. ಮೆಮೊರಿ ಪವರ್ ತುಂಬಾ ಶಾರ್ಪ್ ಇದ್ದು ಸ್ವಲ್ಪ ಚಂಚಲ ಬುದ್ದಿ ಇದೆ. ಎಲ್ಲಾ ವಿಷಯಗಳಲ್ಲಿ ತುಂಬಾ ಆಸಕ್ತಿ ಇದ್ದು,ವಾಹನದಲ್ಲಿ ಚಲಿಸುವಾಗ ಸಿಗ್ನಲ್ ಬಗ್ಗೆ ನಮಗೇ ಹೇಳುತ್ತಾನೆ.ಮೊಬೈಲ್‌ನಲ್ಲಿಯೇ ನೋಡಿ ಕಲರ್, ಎಬಿಸಿಡಿ ಕಲಿತಿದ್ದಾನೆ.ನಾವೇನೂ ಹೇಳಿಕೊಡಲಿಲ್ಲ. ಆತನಿಗೆ ಇನ್ನೂ ಹೆಚ್ಚಿನ ಸಾಧನೆ ಮಾಡಲು ಆಸಕ್ತಿ ಇದ್ದು ದೇವರು ಆಶೀರ್ವದಿಸಲಿ.
-ಶ್ವೇತಾ ಕುಂದರ್, ವ್ಯೋಮ್‌ನ ತಾಯಿ.