ತೀರ್ಥಹಳ್ಳಿ: ಮಳೆಯಿಂದ ಮನೆ ಗೋಡೆ ಕುಸಿದು ಐದು ವರ್ಷದ ಮಗುವೊಂದು ಮೃತಪಟ್ಟ ಘಟನೆ ತಾಲೂಕಿನ ಕೋಣಂದೂರಿನಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಕೋಣಂದೂರಿನ ಕೆಇಬಿ ರಸ್ತೆ ನಿವಾಸಿ ಕೂಲಿ ಕಾರ್ಮಿಕ ಆಯುಬ್ ಎಂಬುವರ ಪುತ್ರ ಮಸೂದ್ (5) ಮೃತಪಟ್ಟ ಮಗು. ಅಡುಗೆ ಮನೆಯಲ್ಲಿ ತಾಯಿಯೊಂದಿಗೆ ತಿಂಡಿ ತಿನ್ನುತ್ತಿರುವ ಸಂದರ್ಭದಲ್ಲಿ ಹಠಾತ್ತನೆ ಗೋಡೆ ಕುಸಿದು ಈ ದುರ್ಘಟನೆ ಸಂಭವಿಸಿದೆ. ಮಗುವನ್ನು ತಕ್ಷಣವೇ ಆಸ್ಪತ್ರೆಗೆ ಕೊಂಡೊಯ್ದರಾದರೂ ಮಗು ಮಾರ್ಗ ಮಧ್ಯೆ ಮೃತಪಟ್ಟಿದೆ. ಘಟನಾ ಸ್ಥಳಕ್ಕೆ ಕೋಣಂದೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.
5 ಲಕ್ಷ ಪರಿಹಾರ ಧನ: ಕೋಣಂದೂರಿನ ಮೃತಪಟ್ಟ ಮಗುವಿನ ಮನೆಗೆ ಜಿಲ್ಲಾಧಿಕಾರಿ ದಯಾನಂದ್ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಅವರ ಶಿಫಾರಸ್ಸಿನಂತೆ ಸರ್ಕಾರದ ವತಿಯಿಂದ ಮೃತಪಟ್ಟ ಮಗುವಿನ ತಂದೆಗೆ 5ಲಕ್ಷ ರೂ. ಪರಿಹಾರ ಧನ ಚೆಕ್ ವಿತರಿಸಲಾಯಿತು. ಸಾಂತ್ವನ: ಕ್ಷೇತ್ರದ ಶಾಸಕ ಆರಗ ಜ್ಞಾನೇಂದ್ರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.
ತೀರ್ಥಹಳ್ಳಿ ತಾಲೂಕಲ್ಲಿ ತಗ್ಗಿದ ಮಳೆ ಅಬ್ಬರ
ತೀರ್ಥಹಳ್ಳಿ: ತಾಲೂಕಿನಾದ್ಯಂತ ಮಳೆಯ ಅಬ್ಬರ ತಗ್ಗಿದ್ದು, ಮಾಲತಿ ನದಿ ವ್ಯಾಪ್ತಿಯ ಆಗುಂಬೆ ಭಾಗದಲ್ಲಿ ಮಾತ್ರ ಮಳೆಯ ಪ್ರಮಾಣ ನಿರಂತರವಾಗಿದೆ. ತುಂಗಾ ನದಿಯಲ್ಲಿ ನೀರಿನ ಪ್ರಮಾಣ 83 ಅಡಿ ತಲುಪಿದೆ. ಕಳೆದ 24 ಗಂಟೆಗಳಲ್ಲಿ ತೀರ್ಥಹಳ್ಳಿಯಲ್ಲಿ
28.8 ಮಿ.ಮೀ., ಆಗುಂಬೆಯಲ್ಲಿ 245 ಮಿ.ಮೀ. ಮಳೆಯಾಗಿದೆ. ಕಳೆದ 2 ದಿನಗಳಿಂದ ಭಾರೀ ಮಳೆಗೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು.
ಇಂದು ಎಂದಿನಂತೆ ಆರಂಭಗೊಂಡಿವೆ. ತಾಲೂಕಿನ ನದಿ, ಹಳ್ಳ ಕೊಳ್ಳಗಳ ನೀರು ಗದ್ದೆ ಹಾಗೂ ತೋಟಗಳಿಗೆ ಆವರಿಸಿದೆ. ತೀರ್ಥಹಳ್ಳಿ ಉಡುಪಿ ಮುಖ್ಯ ಹೆದ್ದಾರಿಯ ಅಣ್ಣುವಳ್ಳಿ ಸೇತುವೆ ಹಾಗೂ ಕೈಮರದ ಪ್ರದೇಶಗಳಲ್ಲಿ ಬುಧವಾರ ನೀರಿನ ಪ್ರಮಾಣ ಹೆಚ್ಚಿದ ಹಿನ್ನೆಲೆಯಲ್ಲಿ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಬಸ್ ಹಾಗೂ ವಾಹನ ಸಂಚಾರ ಇಂದು ಎಂದಿನಂತೆ ಮುಂದುವರಿದಿದೆ.
352.09 ಮಿಮೀ ಮಳೆ ದಾಖಲು ಶಿವಮೊಗ್ಗ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 230.60 ಮಿಮೀ ಮಳೆಯಾಗಿದ್ದು, ಸರಾಸರಿ 32.94 ಮಿಮೀ ಮಳೆ ದಾಖಲಾಗಿದೆ. ಆಗಸ್ಟ್ ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 417.87 ಮಿಮೀ ಇದ್ದು, ಇದುವರೆಗೆ ಸರಾಸರಿ 352.09 ಮಿಮೀ ಮಳೆ ದಾಖಲಾಗಿದೆ. ಶಿವಮೊಗ್ಗ 09.20 ಮಿಮೀ, ಭದ್ರಾವತಿ 10.00 ಮಿಮೀ, ತೀರ್ಥಹಳ್ಳಿ
28.80 ಮಿಮೀ, ಸಾಗರ 47.00 ಮಿಮೀ, ಶಿಕಾರಿಪುರ 06.20 ಮಿಮೀ, ಸೊರಬ 16.00 ಮಿಮೀ ಹಾಗೂ ಹೊಸನಗರ 113.40 ಮಿಮೀ ಮಳೆಯಾಗಿದೆ.