Advertisement
ಮಲಪ್ರಭಾ ಜಲಾಶಯ ಭರ್ತಿಯಾಗಿದೆ. ಅಷ್ಟೇ ಅಲ್ಲ ಸುಮಾರು 40 ವರ್ಷಗಳಲ್ಲಿ ಇದೇ ಮೊದಲ ಬಾರಿ ಎನ್ನುವಂತೆ ದಾಖಲೆ ಪ್ರಮಾಣದ ನೀರನ್ನು ಜಲಾಶಯದಿಂದ ಹೊರಹಾಕಲಾಗಿದೆ. 2-3 ವರ್ಷಗಳಿಂದ ಬರಿದಾಗಿದ್ದ ನೀರಸಾಗರ ಜಲಾಶಯ ಮೈದುಂಬಿದೆ. ಸಗಟು ನೀರಿನ ಕೊರತೆ ನೆಪ ಇಲ್ಲವಾದರೂ ಹು-ಧಾ ಜನತೆ ಮಾತ್ರ ಐದು ದಿನಕ್ಕೊಮ್ಮೆ ನೀರು ಪಡೆಯಲು ಸಾಧ್ಯವಾಗುತ್ತಿಲ್ಲ.
Related Articles
Advertisement
ಕಾಸು ಖರ್ಚಾಗಿದ್ದಷ್ಟೇ,ನಳ ಬರೋದು ವಿಳಂಬ : ಅವಳಿನಗರದಲ್ಲಿ ಕುಡಿಯುವ ನೀರಿನ ಯೋಜನೆಗಾಗಿ ವಿಶ್ವಬ್ಯಾಂಕ್ ನೆರವು, 13 ಮತ್ತು 14ನೇ ಹಣಕಾಸು ಆಯೋಗದಿಂದ ಬಂದ ಹಣವನ್ನು ಹೊರತು ಪಡಿಸಿ, ಬಿ.ಎಸ್. ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಸುಮಾರು 500 ಕೋಟಿ ರೂ. ಅನುದಾನ ನೀಡಿದ್ದರು. ಇಷ್ಟೊಂದು ದೊಡ್ಡ ಮೊತ್ತದ ಹಣ ವೆಚ್ಚವಾಗಿದ್ದು, ಜನತೆಗೆ ಕನಿಷ್ಠ ಮೂರು ದಿನಕ್ಕೊಮ್ಮೆಯಾದರೂ ನೀರು ನೀಡಬೇಕಾಗಿತ್ತು. ಹೋಗಲಿ ನಾಲ್ಕು, ಐದು ದಿನಕ್ಕೊಮ್ಮೆಯಾದರೂ ನೀರು ನೀಡಬೇಕಾಗಿತ್ತು. ಅದರ ಬದಲು ಎಂಟು, ಹತ್ತು, ಹನ್ನೆರಡು ದಿನಕ್ಕೊಮ್ಮೆ ನೀರು ಪಡೆಯುವ ಸ್ಥಿತಿ ನಿರ್ಮಾಣವಾಗಿದೆ.
ಪಾಲಿಕೆಗಿನ್ನೂ ಬಿರುಬೇಸಿಗೆ ಮುಗಿದಿಲ್ವೆ? : ಹಳೇ ಹುಬ್ಬಳ್ಳಿ ಭಾಗಕ್ಕೆ ನೀರು ಪೂರೈಕೆ ಆಸರೆಯಾಗಿದ್ದ ನೀರಸಾಗರ ಜಲಾಶಯ ಮಳೆ ಕೊರತೆಯಿಂದ 2-3 ವರ್ಷಗಳಿಂದ ಬರಿದಾಗಿತ್ತು. ಅಲ್ಲಿನ ನೀರಿನ ಕೊರತೆ ನೀಗಿಸಲೆಂದು ಮಲಪ್ರಭಾದಿಂದ ಪಡೆಯುವ ನೀರಿನಲ್ಲಿಯೇ ಹಳೇ ಹುಬ್ಬಳ್ಳಿ ಭಾಗಕ್ಕೆ ನೀರು ಪೂರೈಕೆ ಹಿನ್ನೆಲೆಯಲ್ಲಿ, ನೀರು ಪೂರೈಕೆಯನ್ನು ಎಂಟು-ಹತ್ತು ದಿನಗಳಿಗೆ ಜಾರಿಗೊಳಿಸಲಾಗಿತ್ತು. ಬೇಸಿಗೆಯಲ್ಲಿ ಇದು 10-12 ದಿನಕ್ಕೆ ಹೋಗಿತ್ತು. ಇದೀಗ ಉತ್ತಮ ಮಳೆಯಾಗಿದೆ, ನೀರಸಾಗರ ಜಲಾಶಯ ತುಂಬಿದೆ. ಜನತೆಗೆ ನೀರು ಪೂರೈಕೆಯನ್ನು ಕನಿಷ್ಠ ಐದು ದಿನಕ್ಕಾದರೂ ನೀಡಬೇಕೆಂಬ ಸೂಚನೆ ನೀಡಿ ಒಂದೂವರೆ ತಿಂಗಳು ಕಳೆಯುತ್ತಿದ್ದರೂ, ಇಂದಿಗೂ ಎಂಟು ದಿನಕ್ಕೊಮ್ಮೆ ನೀರು ಪೂರೈಕೆ ನಿಂತಿಲ್ಲ.
ವಿಪರ್ಯಾಸ ಅಂದ್ರೆ ಇದೇ ನೋಡಿ! : ಹು-ಧಾ ಮಹಾನಗರ ಪ್ರಾಯೋಗಿಕ 24/7 ನೀರು ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ ಎಂಬ ಹೆಗ್ಗಳಿಕೆಯೊಂದಿಗೆ ದೇಶದ ಅನೇಕ ರಾಜ್ಯಗಳ ನಿಯೋಗ ಅವಳಿನಗರಕ್ಕೆ ಆಗಮಿಸಿ ಯೋಜನೆ ವೀಕ್ಷಿಸಿ ಹೋಗಿವೆ. ಆದರೆ, ಇದೇ ಅವಳಿನಗರದಲ್ಲಿ ಇಂದಿಗೂ ಹೆಚ್ಚಿನ ಸಂಖ್ಯೆಯ ವಾರ್ಡ್‌ಗಳು ಎಂಟು ದಿನಕ್ಕೊಮ್ಮೆ ನೀರಿಗೆ ಪರದಾಡುವಂತಾಗಿದೆ
ನೀರಸಾಗರ ತುಂಬಿದೆ, ಮಲಪ್ರಭಾದಿಂದ ಅಗತ್ಯವಿದ್ದಷ್ಟು ನೀರು ಪಡೆಯಬಹುದಾಗಿದೆ. ನೀರು ಪೂರೈಕೆ ಜಾಲವೂ ಇದೆ ಇಷ್ಟಾದರೂ ಐದು ದಿನಕ್ಕೊಮೆ ನೀರು ಪೂರೈಕೆ ಯಾಕೆ ಸಾಧ್ಯವಾಗುತ್ತಿಲ್ಲವೋ ತಿಳಿಯದಾಗಿದೆ. ಉತ್ತಮ ಮಳೆ, ಜಲಾಶಯಗಳಲ್ಲಿ ಸಾಕಷ್ಟು ನೀರಿದ್ದರೂ ಎಂಟು-ಹತ್ತು ದಿನಕ್ಕೊಮ್ಮೆ ನೀರು ಪೂರೈಕೆ ಯಾಕೆ ಎಂದು ವಾರ್ಡ್ ಜನತೆ ನಮ್ಮನ್ನು ಕೇಳುತ್ತಾರೆ. ಪಾಲಿಕೆ ಆಡಳಿತ ಮಂಡಳಿಯೂ ಅಸ್ತಿತ್ವದಲ್ಲಿ ಇಲ್ಲ. ನಾವು ಪಾಲಿಕೆ ಮಾಜಿ ಸದಸ್ಯರಾಗಿದ್ದೇವೆ. ಜನರ ಭಾವನೆ ಅಧಿಕಾರಿಗಳಿಗೆ ತಿಳಿಸಿದರೂ ಅವರಿಗೆ ಅದು ಅರ್ಥವಾಗಿಲ್ಲ ಅಥವಾ ನಮ್ಮ ಅನಿಸಿಕೆಗಳನ್ನು ಅವರು ಲಘುವಾಗಿ ಪರಿಗಣಿಸಿದಂತಿದೆ. ನನ್ನ ಪ್ರಕಾರ ಮೂರು ದಿನಕ್ಕೊಮ್ಮೆ ನೀರು ನೀಡಲು ಯಾವುದೇ ತೊಂದರೆಯಂತೂ ಇಲ್ಲವೇ ಇಲ್ಲ. -ಡಾ| ಪಾಂಡುರಂಗ ಪಾಟೀಲ, ಮಾಜಿ ಮಹಾಪೌರ
-ಅಮರೇಗೌಡ ಗೋನವಾರ