ಹುಬ್ಬಳ್ಳಿ: ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನದಿಂದ ಹು-ಧಾ ಮಹಾನಗರ ಪಾಲಿಕೆಗೆ 5 ಸಾವಿರ ಮಾಸ್ಕ್ ಗಳನ್ನು ವಿತರಿಸಲಾಯಿತು. ಪ್ರತಿಷ್ಠಾನದ ಪ್ರಾದೇಶಿಕ ಮುಖ್ಯಸ್ಥೆ ಡಾ| ಬಬಿತಾ ಎಂ.ಪಿ. ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಕಳೆದ ಒಂದು ದಶಕದಿಂದ ಪ್ರತಿಷ್ಠಾನವು ಸೇವೆ ಸಲ್ಲಿಸುತ್ತಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಸಮಗ್ರ ಶಿಕ್ಷಣ ಅಭಿಯಾನ, ಮಹಾನಗರ ಪಾಲಿಕೆ, ಏಕಸ್ ಪ್ರತಿಷ್ಠಾನ ಹಾಗೂ ಇತರ ಸರ್ಕಾರೇತರ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದರು.
ದೇಶ ಹಾಗೂ ಜಗತ್ತನ್ನು ಕಾಡುತ್ತಿರುವ ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕಟ್ಟುನಿಟ್ಟಿನ ಕ್ರಮ ಜಾರಿ ಮಾಡಿದ್ದು ಶ್ಲಾಘನೀಯ ಕಾರ್ಯ ಎಂದು ಅವರು ಹೇಳಿದರು.
ಮಾಸ್ಕ್ ಸ್ವೀಕರಿಸಿ ಮಾತನಾಡಿದ ವಲಯ ಕಚೇರಿ 5ರ ಸಹಾಯಕ ಆಯುಕ್ತ ಆನಂದಕುಮಾರ ಝಳಕಿ, ಕಳೆದ ಕೆಲವು ವರ್ಷಗಳಿಂದ ಅಗಸ್ತ್ಯ ಅಂತಾರಾಷ್ಟ್ರೀಯ ಪ್ರತಿಷ್ಠಾನವು ವಿವಿಧ ಕಾರ್ಯ ನಡೆಸುತ್ತಿದ್ದು, ಪಾಲಿಕೆಯ ಅ ಧೀನಕ್ಕೆ ಒಳಪಡುವ ಶಾಲೆಗಳಿಗೆ ವಿಜ್ಞಾನದ ಪ್ರಯೋಗಗಳ ಮೂಲಕ ಮಕ್ಕಳಿಗೆ ಪ್ರಾಯೋಗಿಕ ಚಟುವಟಿಕೆಗಳ ಮೂಲಕ ಭೋಧನೆ ಮಾಡಲಾಗುತ್ತಿದೆ. ಇದೀಗ ಕೋವಿಡ್ 19 ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ 5 ಸಾವಿರ ಮಾಸ್ಕ್ ನೀಡಿದ್ದು, ಪ್ರತಿಷ್ಠಾನದ ಕಾರ್ಯ ಸ್ಮರಣೀಯವಾಗಿದೆ ಎಂದರು.
ಪ್ರತಿಷ್ಠಾನ ವಲಯ ಮುಖ್ಯಸ್ಥ ಶಿವಾನಂದ ಚಲವಾದಿ, ಶಿಕ್ಷಕ ಸುರೇಶ ಕೊಕಟನೂರ ಇನ್ನಿತರರಿದ್ದರು.