Advertisement

Covid: ನಾಳೆಯಿಂದ ದಿನಕ್ಕೆ 5 ಸಾವಿರ ಕೋವಿಡ್‌ ಪರೀಕ್ಷೆ

10:51 PM Dec 21, 2023 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್‌ ಸೋಂಕು ಪ್ರಮಾಣ ಏರುಗತಿಯಾಗುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೋವಿಡ್‌ ಪರೀಕ್ಷಾ ಪ್ರಮಾಣವನ್ನೂ ಹೆಚ್ಚಿಸುವಂತೆ ಸೂಚಿಸಿದ್ದಾರೆ.

Advertisement

ಶನಿವಾರದಿಂದ ನಿತ್ಯ 3,500 ಆರ್‌ಟಿಪಿಸಿಆರ್‌ ಮತ್ತು 1,500 ರ್ಯಾಪಿಡ್‌ ಆಂಟಿಜನ್‌ ಟೆಸ್ಟ್‌ (ರ್ಯಾಟ್‌) ಸಹಿತ ಒಟ್ಟು 5,000 ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಇದಕ್ಕಾಗಿ ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಮಾಹಿತಿ ನೀಡಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಕೋವಿಡ್‌ ನಿರ್ವಹಣೆ ಸಂಬಂಧ ತಾಂತ್ರಿಕ ಸಲಹಾ ಸಮಿತಿ ನೀಡುವ ಮಾರ್ಗಸೂಚಿಗಳನ್ನು ಪಾಲಿಸುವುದು ಹಾಗೂ ಪ್ರಮುಖ ಶಿಫಾರಸು ಮಾಡುವ ಸಂಬಂಧ ಆರೋಗ್ಯ ಸಚಿವ ದಿನೇಶ್‌ ಗುಂಡೂ ರಾವ್‌, ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ್‌ ಪಾಟೀಲ್‌ ಅವರನ್ನೊಳಗೊಂಡ ಸಚಿವ ಸಂಪುಟ ಉಪಸಮಿತಿ ರಚಿಸಲಾಗುವುದು ಎಂದು ಹೇಳಿದರು.

ಅನಪೇಕ್ಷಿತ ಘಟನೆಗೆ ಅವಕಾಶ ಬೇಡ
ಹಿಂದಿನ ವರ್ಷಗಳಲ್ಲಿ ನಡೆದಂತೆ ಈ ಬಾರಿ ಕೋವಿಡ್‌ ಪರಿಸ್ಥಿತಿ ಕೈಮೀರಿದರೆ ಯಾವುದೇ ಅಹಿತಕರ ಘಟನೆಗಳು ನಡೆಯಲೇಬಾರದು. ಯಾವುದಕ್ಕೂ ಹಣದ ಕೊರತೆಯಿಲ್ಲ. ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಚಿಕಿತ್ಸೆಗಾಗಿ ಪ್ರತ್ಯೇಕ ಹಾಸಿಗೆಗಳನ್ನು ಮೀಸಲಿಡಿ. ಅಗತ್ಯವಿರುವ ಪಿಪಿಇ ಕಿಟ್‌, ಮಾಸ್ಕ್, ವೆಂಟಿಲೇಟರ್‌, ಆಕ್ಸಿಜನ್‌ ಸಹಿತಎಲ್ಲವನ್ನೂ ಸಿದ್ಧವಿಟ್ಟುಕೊಳ್ಳಿ. ಯಾವುದೇಸಬೂಬು ಹೇಳಬೇಡಿ ಎಂದು ಅಧಿಕಾರಿಗಳಿಗೆ ಕಟ್ಟಪ್ಪಣೆ ಮಾಡಿದರು.

ಮೂರು ಸಾವು
ಸೋಂಕಿನಿಂದಾಗಿ ಇತ್ತೀಚೆಗೆ ಒಟ್ಟು ಮೂರು ಸಾವು ಸಂಭವಿಸಿದೆ. ಮೂವರು ಸೋಂಕಿತರಲ್ಲಿ ಕೋವಿಡ್‌ಗೂ ಮೊದಲು ಇತರ ಸಹವರ್ತಿ ಕಾಯಿಲೆಗಳೂ ಇದ್ದವು. ಜೆಎನ್‌.1 ರೂಪಾಂತರಿ ಸಾವು ತರುವಷ್ಟು ಅಪಾಯಕಾರಿಯಲ್ಲ. ಸಾರ್ವಜನಿಕರು ಹೆದರುವ ಅಗತ್ಯವಿಲ್ಲ. ಆದರೆ ಮುನ್ನೆಚ್ಚರಿಕೆ ವಹಿಸಬೇಕು ಎಂದರು.

Advertisement

ಸರಕಾರವೂ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. 60 ವರ್ಷ ಮೇಲ್ಪಟ್ಟವರು, ಇತರ ಸಹವರ್ತಿ ಕಾಯಿಲೆಗಳು ಇರುವವರು, ಉಸಿರಾಟದ ಸಮಸ್ಯೆ, ಜ್ವರ, ಕೆಮ್ಮು, ಶೀತ ಇರುವವರು, ಗರ್ಭಿಣಿ, ಬಾಣಂತಿ, ಚಿಕ್ಕ ಮಕ್ಕಳು ಹೆಚ್ಚಿಗೆ ಕಾಳಜಿ ವಹಿಸಬೇಕು, ಜನಸಂದಣಿ ಇರುವಲ್ಲಿ ಮಾಸ್ಕ್ ಧರಿಸುವುದನ್ನು ಅಭ್ಯಾಸ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next