Advertisement

ಟೆಕ್ಕಿ ಆಗಿ ಮಿಂಚಲು ರೈಟ್‌ ಕ್ಲಿಕ್‌, ಉದ್ಯೋಗ ಖಚಿತ 5 ತಂತ್ರಜ್ಞಾನಗಳು

10:16 AM May 23, 2017 | Harsha Rao |

ಟೆಕ್‌ ಲೋಕ ದೊಡ್ಡ ಸಾಗರ ಇದ್ದಂತೆ. ಇಲ್ಲಿ ಎಲ್ಲಿ ಜಿಗಿದರೆ ನೀವು ದಡ ಸೇರುತ್ತೀರಿ ಎನ್ನುವುದು ಒಂದು ಪ್ರಶ್ನೆ. ಸಾಫ್ಟ್ವೇರ್‌ ಪ್ರಪಂಚದಲ್ಲಿ ಸದ್ಯ ಚಾಲ್ತಿಯಲ್ಲಿರುವ 5 ತಂತ್ರಜ್ಞಾನಗಳು ಇಲ್ಲಿ ಬಹುಶಃ ಉತ್ತರವಾಗಬಹುದು… 

Advertisement

ಸ್ಟಾರ್ಟಪ್‌ ಕಂಪನಿಯೊಂದರ ಮಾಲೀಕ ಅಥವಾ ಒಬ್ಬ ಯಶಸ್ವಿ ಬಿಝಿನೆಸ್‌ ಲೀಡರ್‌ನನ್ನು ಮಾತಿಗೆಳೆಯಿರಿ. ಅವರೆಲ್ಲರೂ ಸಾಮಾನ್ಯವಾಗಿ ಹೇಳುವ ಸಾಲು “ನಾನು ಇನ್ನೂ ಕಲಿಯುತ್ತಲೇ ಇದ್ದೇನೆ. ಕಲಿಕೆ ಎಂದೂ ನಿಂತಿಲ್ಲ’. ಈ ಮನೋಭಾವವನ್ನು ಹೊಂದಿರುವವರು ಯಾವ ಕ್ಷೇತ್ರದಲ್ಲಿದ್ದರೂ ಅವಕಾಶಗಳು ಅವರನ್ನು ಕೈ ಬೀಸಿ ಕರೆಯುತ್ತವೆ. ಅಂಥವರು ಜೀವನಲ್ಲಿ ಉನ್ನತ ಸ್ಥಾನಗಳಿಗೆ ಹೋಗುವರು. ವಿದ್ಯಾರ್ಥಿ ಜೀವನದಲ್ಲಿದ್ದಾಗ ಸಿಗುವ ಬಿಡುವಿನ ವೇಳೆಯನ್ನು ಬರಿ ಮೋಜು ಮಸ್ತಿಗೆ ಮಾತ್ರ ಮೀಸಲಿಡದೆ ಅಧ್ಯಯನಕ್ಕೂ ಗಮನ ನೀಡಿದರೆ ಮುಂದಿನ ಉದ್ಯೋಗ ಜೀವನ ಸುಗಮವಾಗುವುದು. ಈ ಸಮಯದಲ್ಲಿ ಅನೇಕ ಬಗೆಯ ವೃತ್ತಿ ಕೌಶಲಗಳನ್ನು ಕಲಿತುಕೊಳ್ಳಬಹುದು. ಪ್ರಸ್ತುತ ಸನ್ನಿವೇಶದಲ್ಲಿ ಯಾವ ತಂತ್ರಜ್ಞಾನ, ಕಂಪನಿ ಮುಂಚೂಣಿಯಲ್ಲಿದೆ? ಏಕೆ? ಯಾವ ಕ್ಷೇತ್ರವನ್ನು ಆರಿಸಿಕೊಳ್ಳಬೇಕು ಮುಂತಾದ ವಿಚಾರಗಳತ್ತ ಗಮನ ಹರಿಸುವುದರಿಂದ ಸ್ವಂತ ದೃಷ್ಟಿಕೋನ ಬೆಳೆಸಿಕೊಳ್ಳುವುದು ಸಾಧ್ಯವಾಗುತ್ತದೆ. ಸಾಫ್ಟ್ವೇರ್‌ ಪ್ರಪಂಚದಲ್ಲಿ ಸದ್ಯ ಚಾಲ್ತಿಯಲ್ಲಿರುವ 5 ತಂತ್ರಜ್ಞಾನಗಳ ಪರಿಚಯ ಇಲ್ಲಿದೆ.

ಆ್ಯಂಡ್ರಾಯ್ಡ 
ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚುತ್ತಿರುವ ಈ ದಿನಗಳಲ್ಲಿ ಮೊಬೈಲ್‌ ಕಂಪನಿಗಳ ನಡುವೆ ಯಾರು ಹೆಚ್ಚಿನ ಸವಲತ್ತುಗಳನ್ನು ನೀಡುತ್ತಾರೆ ಎಂಬ ಸ್ಪರ್ಧೆ ಏರ್ಪಟ್ಟಿದೆ. ಇವೆಲ್ಲದರಿಂದಾಗಿ ಆಂಡ್ರಾಯ್ಡ ಆ್ಯಪ್‌ ಡೆವೆಲಪರ್‌ಗಳಿಗೆ ಬೇಡಿಕೆ ಹೆಚ್ಚಿದೆ. ನಮ್ಮಲ್ಲಿ ಒಂದು ಶತಕೋಟಿಗೂ ಅಧಿಕ ಆಂಡ್ರಾಯ್ಡ ಫೋನ್‌ ಬಳಕೆದಾರರಿದ್ದಾರೆ. ಹತ್ತಿರತ್ತಿರ ಇಪ್ಪತ್ತು ಲಕ್ಷ ಆಂಡ್ರಾಯ್ಡ ಆ್ಯಪ್‌ಗ್ಳಿವೆ. ಹಾಗಾಗಿ ಆಂಡ್ರಾಯ್ಡ ತಂತ್ರಜ್ಞಾನವನ್ನು ಕಲಿತುಕೊಳ್ಳುವುದರಿಂದ ಭವಿಷ್ಯ ಉಜ್ವಲವಾಗುವುದು.

ಇಂಟರ್‌ನೆಟ್‌ ಆಫ್ ಥಿಂಗ್ಸ್‌
ಸಾಫ್ಟ್ವೇರ್‌ ತಂತ್ರಜ್ಞಾನದಲ್ಲಿ ಕ್ರಾಂತಿಯೊಂದು ಆಗುತ್ತಿದ್ದರೆ ಅದು “ಇಂಟರ್‌ನೆಟ್‌ ಆಫ್ ಥಿಂಗ್ಸ್‌'(ಐಓಟಿ) ಕ್ಷೇತ್ರದಲ್ಲಿ. ಈ ಕ್ಷೇತ್ರದ ವಿಶೇಷತೆಯೆಂದರೆ ಯಾವುದೋ ಒಂದು ನಿರ್ದಿಷ್ಟ ಉಪಯೋಗಕ್ಕೆ ಅಥವಾ ಉಪಕರಣಗಳಿಗೆ ಅಪ್ಲಿಕೇಷನ್‌ ಬರೆಯುವುದು. ಉದಾಹರಣೆಗೆ ಹಾರ್ಟ್‌ ರೇಟ್‌ ಮಾನಿಟರ್‌, ಫೇಸ್‌ಬುಕ್‌ ಸ್ಟೇಟಸ್‌ ಅಪ್‌ಡೇಟ್‌ ಮಾಡಲು, ಸ್ವಯಂಚಾಲಿತ ಕಾರು ನಿರ್ವಹಣೆ, ಜಿಮ್‌ನಲ್ಲಿ ಪೇಮೆಂಟ್‌ ಸ್ವೀಕರಿಸುವ ಅಪ್ಲಿಕೇಷನ್‌… ಹೀಗೆ ಪಟ್ಟಿ ಮುಂದುವರಿಯುತ್ತದೆ. ಐಟಿ ಕ್ಷೇತ್ರದ ದಿಗ್ಗಜರೆಲ್ಲ ಈಗಾಗಲೇ ಐ.ಒ.ಟಿ ವಿಭಾಗದಲ್ಲಿ ದೊಡ್ಡ ಮೊತ್ತದ ಬಂಡವಾಳವನ್ನು ಹೂಡುತ್ತಿದ್ದಾರೆ. ಇದನ್ನು ಇಂಟರ್‌ನೆಟ್‌ನ ಭವಿಷ್ಯ ಎಂಬ ದೃಷ್ಟಿಯಿಂದ ನೋಡಲಾಗುತ್ತಿದೆ.

ವೆಬ್‌ ಡೆವೆಲಪ್‌ಮೆಂಟ್‌
2017ರ ಅಂತ್ಯದ ವೇಳೆಗೆ ಭಾರತದಲ್ಲಿ ಇಂಟರ್‌ನೆಟ್‌ ಬಳಕೆದಾರರ ಸಂಖ್ಯೆ 100ಕೋಟಿ ದಾಟಲಿದೆ ಎಂದು ಗೂಗಲ್‌ ಇಂಡಿಯಾ ಸಂಸ್ಥೆ ಹೇಳಿದೆ. ಇವೆಲ್ಲದರಿಂದಾಗಿ ಇ- ಕಾಮರ್ಸ್‌ ಉದ್ಯಮಕ್ಕೆ ಹೆಚ್ಚಿನ ಲಾಭವಾಗಲಿದೆ. ಅಂದರೆ ಆನ್‌ಲೈನ್‌ ವ್ಯವಹಾರ ನಡೆಸುವವರು ಹೆಚ್ಚಲಿದ್ದಾರೆ. ಹೀಗಾಗಿ ಆ ವೇಳೆಯ ಹೊತ್ತಿಗೆ ಪ್ರತಿಯೊಂದು ಕಂಪನಿ, ಉದ್ಯಮದವರು ಆನ್‌ಲೈನ್‌ ಮಾರುಕಟ್ಟೆಯಲ್ಲಿ ತಮ್ಮ ಸಾಮರ್ಥಯವನ್ನು  ಬಲಪಡಿಸುವತ್ತ ಗಮನವಿತ್ತಿದ್ದಾರೆ. ಹೀಗಾಗಿ ವೆಬ್‌ ಡೆವೆಲಪರ್‌ಗೆ ಎಲ್ಲಿಲ್ಲದ ಅವಕಾಶಗಳು ಹುಡುಕಿಕೊಂಡು ಬರತೊಡಗಿವೆ. ವೆಬ್‌ ಡೆವೆಲಪರ್‌ಗಳು ಫ್ರೀಲ್ಯಾನ್ಸರ್‌ ಆಗಿಯೂ ಕೆಲಸ ನಿರ್ವಹಿಸಬಹುದು. 

Advertisement

ಪೈಥಾನ್‌
ಇಂಟರ್‌ನೆಟ್‌ ಆಪ್‌ ಥಿಂಗ್ಸ್‌, ಅನಾಲಿಟಿಕ್ಸ್‌ ಮತ್ತು ಅತ್ಯಂತ ಸುಧಾರಿತ ವಿಡಿಯೋ ಗೇಮ್‌ಗಳನ್ನು ಅಭಿವೃದ್ಧಿಪಡಿಸುವುದರ ಹಿಂದೆ ಇರುವ ಮ್ಯಾಜಿಕ್‌ ಲ್ಯಾಂಗ್ವೇಜ್‌- ಪೈಥಾನ್‌. ಇದನ್ನು ಕಲಿಯುವುದರಿಂದ ಅನೇಕ ಬಗೆಯ ಉಪಯೋಗಗಳಿವೆ. ಕೋಡ್‌ ಬರೆಯುವ ಸಾಧಾರಣ ಕ್ರಿಯೆಯೂ ಮನರಂಜನೆ ಒದಗಿಸಬಲ್ಲದು ಎಂಬುದಕ್ಕೆ ಸಾಕ್ಷಿ ಈ ಪೈಥಾನ್‌ ಎನ್ನುವ ಪ್ರೋಗ್ರಾಮಿಂಗ್‌ ಲ್ಯಾಂಗ್ವೇಜ್‌. ದೈತ್ಯ ಕಂಪನಿಗಳಾದ ಗೂಗಲ್‌, ಯಾಹೂ ಮತ್ತು ಐಬಿಎಂನಲ್ಲಿ ಪೈಥಾನ್‌ ಪ್ರೋಗ್ರಾಮರ್‌ಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿದೆ.

ಸಿ/ ಸಿ++
ದಶಕಗಳೇ ಕಳೆದರೂ ಇನ್ನೂ ಸಿ ಮತ್ತು ಸಿ++ ಪ್ರೋಗ್ರಾಮಿಂಗ್‌ ಲ್ಯಾಂಗ್ವೇಜ್‌ಗೆ ಮುಪ್ಪಾಗಿಲ್ಲ. ಇನ್ನೂ ಅದು ಚಾಲ್ತಿಯಲ್ಲಿದೆ. ಮೆಡಿಕಲ್‌, ಬ್ಯಾಂಕಿಂಗ್‌, ಫೈನಾನ್ಸ್‌ ಮುಂತಾದ ಕಡೆಯಲ್ಲೆಲ್ಲಾ ಇದರ ಉಪಯೋಗ ಮತ್ತು ಬೇಡಿಕೆ ಹೆಚ್ಚು.

– ಹವನ

Advertisement

Udayavani is now on Telegram. Click here to join our channel and stay updated with the latest news.

Next