Advertisement

5 ರಾಜ್ಯಗಳ ಚುನಾವಣೆ: ಯಾರ ಬಲ ಎಷ್ಟು?

03:45 AM Jan 05, 2017 | Team Udayavani |

ಬಹುನಿರೀಕ್ಷಿತ 5 ರಾಜ್ಯಗಳ ಚುನಾವಣೆಗೆ ದಿನಾಂಕ ಪ್ರಕಟವಾಗಿದೆ. ಇದರೊಂದಿಗೆ ರಾಜಕೀಯ ಪಕ್ಷಗಳ ಚುನಾವಣಾ ಚಟುವಟಿಕೆಗಳಿಗೂ ಚಾಲನೆ ಸಿಕ್ಕಿದೆ. ರಾಜಕೀಯವಾಗಿ ಅತ್ಯಂತ ಮಹತ್ವವಾಗಿರುವ, ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಹಲವು ಲೆಕ್ಕಾಚಾರಗಳಿಗೂ ಬಲ ತುಂಬಲಿರುವ ಈ 5 ರಾಜ್ಯಗಳಲ್ಲಿ ಹಾಲಿ ಯಾರ ಅಧಿಕಾರವಿದೆ, ಮುಂದಿನ ಜಿದ್ದಾಜಿದ್ದಿನ ಹಾದಿಯ ಕುರಿತ ವಿಶ್ಲೇಷಣೆ ಇಲ್ಲಿದೆ

Advertisement

ಉತ್ತರಪ್ರದೇಶ
ಐದು ವರ್ಷಗಳಿಂದ ಎಸ್‌ಪಿ ಅಧಿಕಾರದಲ್ಲಿದ್ದು, ಅಖೀಲೇಶ್‌ ಸಿಎಂ ಆಗಿದ್ದಾರೆ. ಇತ್ತೀಚೆಗೆ ಸಮಾಜವಾದಿ ಪಕ್ಷದಲ್ಲಿ ಆಂತರಿಕ ಕಚ್ಚಾಟ ಮಿತಿಮೀರಿರುವುದು ಋಣಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. 14 ವರ್ಷದ ಬಳಿಕ ಗದ್ದುಗೆಗೇರಲು ಬಿಜೆಪಿ ಪ್ರಯತ್ನಿಸುತ್ತಿದೆ. ಸಮಾಜ ವಾದಿಗಳ ಜಗಳದ ಸಹಾಯದಿಂದ ಮಾಯಾವತಿ ಅವರು ಮತ್ತೂಮ್ಮೆ ಅಧಿಕಾರ ಹಿಡಿಯಲು ಯತ್ನಿಸುತ್ತಿದ್ದಾರೆ. ಕಾಂಗ್ರೆಸ್‌ ಪಕ್ಷ ಮೈತ್ರಿಗಾಗಿ ಕಾಯುತ್ತಿದೆ. ಮೇಲ್ನೋಟಕ್ಕೆ ಬಿಜೆಪಿ- ಬಿಜೆಪಿ- ಎಸ್ಪಿ ನಡುವೆ ತ್ರಿಕೋನ ಸ್ಪರ್ಧೆ ಕಂಡುಬರುತ್ತಿದೆ.

ಪಂಜಾಬ್‌
ಹತ್ತು ವರ್ಷಗಳಿಂದ ಶಿರೋಮಣಿ ಅಕಾಲಿದಳ ಹಾಗೂ ಬಿಜೆಪಿ ಮೈತ್ರಿಕೂಟ ಅಧಿಕಾರದಲ್ಲಿದೆ. ಪ್ರಕಾಶ್‌ ಸಿಂಗ್‌ ಬಾದಲ್‌ ಸಿಎಂ, ಸರ್ಕಾರಕ್ಕೆ ಆಡಳಿತ ವಿರೋಧಿ ಅಲೆ ಕಾಡುತ್ತಿದೆ. ಅದರ ಲಾಭ ಯಾರಿಗೆ ಆಗುತ್ತದೆ ಎಂಬುದರ ಮೇಲೆ ಗೆಲುವು ನಿರ್ಧಾರವಾಗಲಿದೆ. ಅಮರೀಂದರ್‌ ಸಿಂಗ್‌ ಮುಂದಾಳತ್ವದಲ್ಲಿ ಕಾಂಗ್ರೆಸ್‌ ಹೋರಾಡುತ್ತಿದೆ. ಎರಡು ಪಕ್ಷಗಳ ಕೋಟೆಯಾಗಿದ್ದ ಪಂಜಾಬ್‌ನಲ್ಲಿ ಇದೇ ಮೊದಲ ಬಾರಿಗೆ ಆಮ್‌ ಆದ್ಮಿ ಪಕ್ಷ ಭಾರಿ ಸಂಚಲನ ಮೂಡಿಸಿದೆ. ಕಾಂಗ್ರೆಸ್‌- ಆಪ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.

ಉತ್ತರಾಖಂಡ
ಐದು ವರ್ಷದಿಂದ ಕಾಂಗ್ರೆಸ್‌ ಅಧಿಕಾರದಲ್ಲಿದೆ. ಮೊದಲು ವಿಜಯ್‌ ಬಹುಗುಣ, ಈಗ ಹರೀಶ್‌ ರಾವತ್‌ ಮುಖ್ಯಮಂತ್ರಿ. ಪದಚ್ಯುತಿ ಬಳಿಕ ಬಹುಗುಣ ಕಾಂಗ್ರೆಸ್ಸಿನ ವಿರುದ್ಧ ಬಂಡೆದ್ದು, 9 ಶಾಸಕರ ಜತೆ ಬಿಜೆಪಿ ಸೇರಿದ್ದಾರೆ. ಉತ್ತರಾಖಂಡದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿದ ಕೇಂದ್ರ ಸರ್ಕಾರದ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿ ರಾವತ್‌ ಇದ್ದಾರೆ. ಅವರನ್ನು ಕೆಳಗಿಳಿಸಿ ಅಧಿಕಾರಕ್ಕೇರಲು ಬಿಜೆಪಿ ಪ್ರಯತ್ನಿಸುತ್ತಿದೆ. ಈ ರಾಜ್ಯದಲ್ಲಿ ಎರಡೂ ಪಕ್ಷಗಳ ನಡುವೆ ಹಣಾಹಣಿ ಏರ್ಪಟ್ಟಿದೆ.

ಮಣಿಪುರ
15 ವರ್ಷಗಳಿಂದ ಕಾಂಗ್ರೆಸ್‌ ಅಧಿಕಾರದಲ್ಲಿದೆ. ಅಂದಿನಿಂದಲೂ ಓಕ್ರಮ್‌ ಇಬೋಬಿ ಸಿಂಗ್‌ ಮುಖ್ಯಮಂತ್ರಿ. ಅಸ್ಸಾಂ ಗೆಲುವಿನ ಖುಷಿಯಲ್ಲಿರುವ ಬಿಜೆಪಿ ಈ ರಾಜ್ಯದಲ್ಲೂ ಕಾಂಗ್ರೆಸ್ಸನ್ನು ಮಣಿಸಲು ಭರ್ಜರಿ ತಂತ್ರಗಳನ್ನು ರೂಪಿಸುತ್ತಿದೆ. ಮಣಿಪುರದವರೇ ಆಗಿರುವ ಬಾಕ್ಸರ್‌ ಮೇರಿ ಕೋಮ್‌ ಅವರನ್ನು ರಾಜ್ಯಸಭೆಗೆ ಕಳಿಸಿರುವ ಆ ಪಕ್ಷ, ಅವರನ್ನು ವಿಧಾನಸಭೆ ಚುನಾವಣೆಗೂ ಬಳಸಿಕೊಳ್ಳಲು ಮುಂದಾಗಿದೆ. ಅಧಿಕಾರ ಉಳಿಸಿಕೊಳ್ಳಲು ಕಾಂಗ್ರೆಸ್‌ ಕೂಡ ಶ್ರಮಿಸುತ್ತಿದೆ.

Advertisement

ಗೋವಾ
ಕಳೆದ ಐದು ವರ್ಷಗಳಿಂದ ಬಿಜೆಪಿ ಅಧಿಕಾರದಲ್ಲಿದೆ. ಆರಂಭದಲ್ಲಿ ಮನೋಹರ ಪರ್ರಿಕರ್‌ ಹಾಗೂ ಲಕ್ಷ್ಮೀಕಾಂತ ಪಾರ್ಸೆಕರ್‌ ಮುಖ್ಯಮಂತ್ರಿಯಾಗಿದ್ದಾರೆ. ಈ ರಾಜ್ಯದಲ್ಲಿ ಬಿಜೆಪಿ- ಕಾಂಗ್ರೆಸ್‌ ನಡುವೆ ಮೊದಲಿನಿಂದಲೂ ನೇರ ಹಣಾಹಣಿ ಇದೆ. ಆದರೆ ಈ ಬಾರಿ ಆಮ್‌ ಆದ್ಮಿ ಪಕ್ಷ ಕೂಡ ಅಖಾಡಕ್ಕೆ ಧುಮುಕಿ, ಅದೃಷ್ಟ ಪರೀಕ್ಷೆಗೆ ಇಳಿದಿದೆ. ಚುನಾವಣೆ ಘೋಷಣೆ ಬೆನ್ನಲ್ಲೇ, ಬಿಜೆಪಿ ಸರ್ಕಾರಕ್ಕೆ ನೀಡಿದ್ದ ಬೆಂಬಲವನ್ನು ಮಹಾರಾಷ್ಟ್ರ ಗೋಮಾಂತಕ್‌ ಪಾರ್ಟಿ ಹಿಂಪಡೆದು, ಕೊಂಚ ಶಾಕ್‌ ಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next