ತಿರುವನಂತಪುರ: ಭಾರತಕ್ಕೆ ಅಕ್ರಮವಾಗಿ ನುಸುಳಿರುವ ಐವರು ಸದಸ್ಯರುಳ್ಳ ರೊಹಿಂಗ್ಯಾ ಮುಸ್ಲಿಮರ ಕುಟುಂಬವೊಂದನ್ನು ತಿರುವನಂತಪುರದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮಂಗಳವಾರ ಬೆಳಗ್ಗೆ ಹೈದರಾಬಾದ್‌ನಿಂದ ವಿಝಿಂಜಮ್‌ಗೆ ರೈಲಿನಲ್ಲಿ ಬಂದಿಳಿದ ಈ ಕುಟುಂಬವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು, ಸಾಯುಬ್ (36), ಆತನ ಪತ್ನಿ ಸಾಫಿಯಾ ಕಾಥುಮ್ (29), ಸಾಯುಬ್ ಸಹೋದರ ಇರ್ಷಾದ್ (27), ಸಾಫಿಯಾಳ ಸಹೋದರ ಅನ್ವರ್ ಶಾ (11) ಎಂದು ಗುರುತಿಸಲಾಗಿದ್ದು, ಇವರೊಂದಿಗೆ ಸಾಫಿಯಾಳ ಆರು ತಿಂಗಳ ಮಗು ಸಹ ಇದೆ. ಇವರು ತಮ್ಮೊಂದಿಗೆ ತಮ್ಮ ಹೆಸರಿನಲ್ಲಿರುವ ವಿಶ್ವಸಂಸ್ಥೆಯ ನಿರಾಶ್ರಿತರ ಗುರುತಿನ ಚೀಟಿಗಳನ್ನೂ ಹೊಂದಿದ್ದಾರೆಂದು ಹೇಳಲಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಇವರು ಮೊದಲು ದಿಲ್ಲಿಗೆ ಆಗಮಿಸಿ, ಅಲ್ಲಿಂದ ಹೈದರಾಬಾದ್‌ಗೆ ಆನಂತರ ತಿರುವಂತಪುರಕ್ಕೆ ಆಗಮಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅವರನ್ನು ಗುಪ್ತಚರ ಸಂಸ್ಥೆ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ ಎಂದು ಆ ಅಧಿಕಾರಿ ತಿಳಿಸಿದ್ದಾರೆ.
ರೊಹಿಂಗ್ಯಾ ಮುಸ್ಲಿಮರು ಕೇರಳಕ್ಕೆ ಕಾಲಿಡುತ್ತಿದ್ದಾರೆಂದು ಕಳೆದ ವಾರವೇ ರೈಲ್ವೇ ಭದ್ರತಾ ಪಡೆ (ಆರ್‌ಪಿಎಫ್) ಒಂದು ಗುಪ್ತ ಸಂದೇಶವನ್ನು ಕೇರಳ ಸರಕಾರಕ್ಕೆ ರವಾನಿಸಿದ್ದು, ಆ ಕಾರಣದಿಂದಾಗಿ ಕೇರಳದ ಎಲ್ಲೆಡೆ ರೊಹಿಂಗ್ಯಾಗಳ ಆಗಮನದ ಬಗ್ಗೆ ವಿಶೇಷ ಗಮನ ಇಡಲಾಗಿತ್ತೆಂದು ಪೊಲೀಸರು ತಿಳಿಸಿದ್ದಾರೆ. ಹೊಸದಾಗಿ ಲಭ್ಯವಾಗಿರುವ ಮಾಹಿತಿಯ ಪ್ರಕಾರ, ಭಾರತದೊಳಕ್ಕೆ ಈಗಾಗಲೇ ಅಕ್ರಮವಾಗಿ ನುಸುಳಿರುವ ರೊಹಿಂಗ್ಯಾಗಳು ರೈಲುಗಳ ಮೂಲಕ ಕೇರಳ ಮತ್ತು ತಮಿಳುನಾಡು ಕಡೆಗೆ ಬರುತ್ತಿದ್ದಾರೆಂದು ಹೇಳಲಾಗಿದೆ.