ಹುಬ್ಬಳ್ಳಿ: ಮಹಾನಗರ ಪಾಲಿಕೆ ವಾಪ್ತಿಯ ಆಸ್ತಿಕರ ಪಾವತಿಗೆ ಶೇ. 5 ರಿಯಾಯಿತಿ ಅವಕಾಶವನ್ನು ಜುಲೈ ಅಂತ್ಯದವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಹಾಗೂ ಲಾಕ್‌ಡೌನ್ ಸ್ಥಿತಿಯಲ್ಲಿ ಈ ವರ್ಷ ಆಸ್ತಿಕರ ಹೆಚ್ಚಳ ಅನುಷ್ಠಾನ ಬೇಡ ಎಂಬುದು ವೈಯಕ್ತಿಕ ಅಭಿಪ್ರಾಯವಾಗಿತ್ತು. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲೂ ಪ್ರಸ್ತಾಪಿಸಿದ್ದೆ, ಮುಖ್ಯಮಂತ್ರಿಯವರ ಗಮನಕ್ಕೂ ತಂದಿದ್ದೆ. ಆದರೆ, ಕೇಂದ್ರ ಸರಕಾರದ ಸೂಚನೆಯಂತೆ ವಿವಿಧ ಅನುದಾನ ಪಡೆಯಲು ಆಸ್ತಿಕರ ಪರಿಷ್ಕರಣೆ ಜಾರಿ, ಒಂದು ದೇಶ ಒಂದು ಪಡಿತರ, ನಗರ ಬಳಕೆದಾರರ ಸುಧಾರಣೆ, ವಿದ್ಯುತ್ ಸುಧಾರಣೆ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ನಗರಾಭಿವೃದ್ಧಿ ಸಚಿವರು ಆಸ್ತಿಕರ ಪರಿಷ್ಕರಣೆ ಜಾರಿ ಅನಿವಾರ್ಯ ಎಂದಿದ್ದರಿಂದ ಅದರ ಅನುಷ್ಠಾನಕ್ಕೆ ಮುಂದಾಗಬೇಕಾಯಿತು ಎಂದರು.
ಆಸ್ತಿಕರವನ್ನು ಶೇ.20-30 ಇದ್ದದ್ದನ್ನು ಶೇ.15-25ಕ್ಕೆ ಇಳಿಸಲಾಗಿದೆ. ಅದೇ ರೀತಿ ಆಸ್ತಿಕರ ಪಾವತಿಯನ್ನು ಏಪ್ರಿಲ್ ಅಂತ್ಯದೊಳಗೆ ಪಾವತಿಸಿದರೆ ಶೇ.5 ರಿಯಾಯಿತಿ ನೀಡಲಾಗುತ್ತಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಆಸ್ತಿಕರ ಹೆಚ್ಚಳ ಬೇಡ ಎಂಬುದು ಹಾಗೂ ಜಾರಿಯಾದರೆ ರಿಯಾಯಿತಿ ವಿಸ್ತರಣೆ ಬೇಡಿಕೆ ಇತ್ತು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವರ ಗಮನಕ್ಕೆ ತಂದಿದ್ದರಿಂದ ಇದೀಗ ರಿಯಾಯಿತಿ ಅವಕಾಶವನ್ನು ಜುಲೈ ಅಂತ್ಯದವರೆಗೆ ವಿಸ್ತರಿಸಿ ಸರಕಾರ ಮೇ 22ರಂದು ಆದೇಶ ಹೊರಡಿಸಿದೆ ಎಂದರು.
ಕಳಸಾ-ಬಂಡೂರಿ ನಾಲಾ ಯೋಜನೆಗೆ ರಾಜ್ಯ ಸರಕಾರ ಈಗಾಗಲೇ 500 ಕೋಟಿ ರೂ. ನಿಗದಿ ಪಡಿಸಿದ್ದು, ಹೊಸ ಡಿಪಿಆರ್ ಸಿದ್ಧತೆ ನಡೆಯುತ್ತಿದೆ. ಇದಕ್ಕೆ ಗೋವಾದಿಂದ ಎಷ್ಟೇ ಆಕ್ಷೇಪ ವ್ಯಕ್ತವಾದರೂ ಯೋಜನೆ ಜಾರಿಗೆ ಎಲ್ಲ ರೀತಿಯ ಯತ್ನ ಕೈಗೊಳ್ಳಲಾಗುವುದು. ಅದೇ ರೀತಿ ಬೆಣ್ಣೆಹಳ್ಳದ ಅಭಿವೃದ್ಧಿಗೂ ಈಗಾಗಲೇ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ರೈತರಿಗೆ ಬೆಳೆ ವಿಮೆ ಪರಿಹಾರ ಕುರಿತಾಗಿ ವಿಳಂಬವಾಗಿದ್ದರೆ ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದರು. ಶಾಸಕರಾದ ಶಂಕರ ಪಾಟೀಲ ಮುನೇನಕೊಪ್ಪ, ಅಮೃತ ದೇಸಾಯಿ, ಎಸ್.ವಿ. ಸಂಕನೂರು, ಪ್ರದೀಪ ಶೆಟ್ಟರ, ಬಿಜೆಪಿ ಮುಖಂಡರಾದ ಮಹೇಶ ಟೆಂಗಿನಕಾಯಿ, ಲಿಂಗರಾಜ ಪಾಟೀಲ, ನಾಗೇಶ ಕಲಬುರ್ಗಿ, ಮಲ್ಲಿಕಾರ್ಜುನ ಸಾವಕಾರ, ಸಂತೋಷ ಚವ್ಹಾಣ ಇನ್ನಿತರರು ಇದ್ದರು.