Advertisement

ಯಶಸ್ವಿ ಉದ್ಯೋಗಿಯಾಗಲು 5 ಮಂತ್ರ

02:36 PM Jul 30, 2018 | |

ಮಾಡುವ ಕೆಲಸವು ಎಷ್ಟೇ ಪರಿಪೂರ್ಣವಾದರೂ, ಅದರಲ್ಲಿ ಕೆಲವೊಂದು ಮಿತಿಗಳು ಇದ್ದೇ ಇರುತ್ತವೆ. ಅದಕ್ಕಾಗಿ ನಾವು ಕೆಲಸ ಗಿಟ್ಟಿಸಿಕೊಳ್ಳುವುದಿಲ್ಲ ಎಂಬ ಮಾತು ಒಪ್ಪಲಾಗದು. ಯಾವುದು ಕೂಡ ಅಂತಿಮವಲ್ಲ ಎಂಬ ಮಾತು ಉದ್ಯೋಗಕ್ಕೂ ಅನ್ವಯಿಸುತ್ತದೆ. ಉದ್ಯೋಗ ಎಂಬುದು ಕೊಡುವುದಲ್ಲ, ಪಡೆಯುವುದು ಎಂಬುದೂ ಸತ್ಯ. ಕೌಶಲ, ವಿಭಿನ್ನ ಪ್ರತಿಭೆ ಇದ್ದರೆ ನಾವು ಉದ್ಯೋಗ ಗಿಟ್ಟಿಸಿಕೊಳ್ಳುವುದು ಕಷ್ಟವಲ್ಲ. ಈ ಕಾರಣಕ್ಕಾಗಿ ನಮ್ಮಲ್ಲಿ ಕೆಲವೊಂದು ವ್ಯಕ್ತಿತ್ವ ವಿಕಸನದ ತಂತ್ರ, ಮಂತ್ರಗಳನ್ನು ಅಳವಡಿಸಿಕೊಂಡರೆ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಯಾವುದೂ ತಡೆಯಾಗುವುದಿಲ್ಲ.

Advertisement

· ಸಂವಹನ ಕೌಶಲ
ಉತ್ತಮ ವಿಷಯ ನಿರೂಪಣೆ ಹಾಗೂ ಸಂವಹನ ಕೌಶಲ ಇದ್ದರೆ ನಾವು ಸಿಇಒ ಹಾಗೂ ಎಚ್‌ಆರ್‌ ಕೆಲಸ ಪಡೆಯುವುದು ಸುಲಭ. ಸಂದರ್ಶನದಲ್ಲಿ ನಡೆಯುವ ಚರ್ಚೆಯಲ್ಲಿ ವಿಷಯ ಮಂಡನೆ ಮಾಡುವಾಗ ಬಳಸುವ ಭಾಷೆ, ವಿಚಾರ ಸ್ಪಷ್ಟತೆ, ಶುದ್ಧ ಉಚ್ಛಾರದಂಥ ಕೌಶಲಗಳಿದ್ದರೆ ನಾವು ಸುಲಭವಾಗಿ ಉದ್ಯೋಗ ಗಳಿಸಬಹುದು.

· ಸಾಮಾಜಿಕ ಜಾಲತಾಣಗಳ ಜ್ಞಾನ
ಸಮಕಾಲೀನ ದಿನಗಳಲ್ಲಿ ನವ ಮಾಧ್ಯಮ ತಂತ್ರಜ್ಞಾನದ ಬಳಕೆ ಮಾಡದ ವ್ಯಕ್ತಿಗಳನ್ನು ಅಧುನಿಕ ಅನಕ್ಷರಸ್ಥ ಎಂಬಂತೆ ಬಿಂಬಿಸಲಾಗುತ್ತಿದೆ. ಹೀಗಾಗಿ ಇಂದು ಯಾವುದೇ ಕ್ಷೇತ್ರದಲ್ಲಿ ಉದ್ಯೋಗ ಪಡೆಯಬೇಕಾದರೆ ಸಾಮಾಜಿಕ ಜಾಲತಾಣದ ಜ್ಞಾನವನ್ನೂ ಕೂಡ ಅರ್ಹತೆ ಎಂದು ಪರಿಗಣಿಸಲಾಗುತ್ತಿದೆ. ಏಕೆಂದರೆ ಸಾಂದರ್ಭಿಕ ಮಾರುಕಟ್ಟೆ ಹಾಗೂ ಗ್ರಾಹಕರ ಹಿತಾಸಕ್ತಿಗಳ ಬಗ್ಗೆ ತಿಳಿಯಲು ಸಾಮಾಜಿಕ ಜಾಲ ತಾಣದ ಜ್ಞಾನ ಆವಶ್ಯಕವಾಗಿದೆ.

· ಸಂಘಟನಾ ಶಕ್ತಿ
ಸಂಸ್ಥೆಗಳಲ್ಲಿ ಉದ್ಯೋಗ ನೀಡಬೇಕಾದರೆ ಇಂದು ಗಮನಿಸುತ್ತಿರುವ ಮುಖ್ಯಅರ್ಹತೆ ಎಂದರೆ ಸಂಘಟನ ಶಕ್ತಿ ಹಾಗೂ ನಾಯಕತ್ವ. ಒಂದು ಸಂಸ್ಥೆ ವ್ಯಾಪಕವಾಗಿ ಬೆಳೆಯಬೇಕಾದರೆ ಉದ್ಯೋಗಿಗಳ ಸಂಘಟಿತ ಪರಿಶ್ರಮ ಮುಖ್ಯ. ಮುಂದೆ ಎದುರಾಗುವ ಸಮಸ್ಯೆ, ಸವಾಲುಗಳನ್ನು ನಿರ್ವಹಿಸುವ ಸಾಮರ್ಥ್ಯ ಇದ್ದಾಗ ಮಾತ್ರ ನಾವು ಯಶಸ್ವಿಯಾಗಲು ಸಾಧ್ಯ. 

· ವೈಯಕ್ತಿಕ ಸಂಪರ್ಕ
 ಸ್ನೇಹ ಸಂಬಂಧಗಳಿಂದಾಗಿ ನಮ್ಮ ಬಾಂಧವ್ಯ ವೃದ್ಧಿಯಾಗುತ್ತದೆ. ಹಾಗೆಯೇ ನಮ್ಮ ಕೆಲಸದಲ್ಲೂ ಇದು ಪರಿಣಾಮಕಾರಿಯಾಗುತ್ತದೆ. ಸ್ನೇಹಿತರಲ್ಲಿರುವ ವಿಭಿನ್ನ ಆಲೋಚನೆಗಳನ್ನು ನಮ್ಮ ಮುಂದೆ ಹೇಳಿಕೊಂಡಾಗ ನಮ್ಮಲ್ಲಿ ಇನ್ನೊಂದು ಹೊಸ ಆಲೋಚನೆ ವೃದ್ಧಿಯಾಗುತ್ತದೆ. ಅಷ್ಟೇ ಅಲ್ಲದೇ ಎಷ್ಟೋ ಯೋಜನೆಗಳು ಹಾಗೂ ಅಸೈನ್ಮೆಂಟ್‌ಗಳಿಗೆ ಮುಖ್ಯ ಪಾತ್ರ ವಹಿಸುವುದರಿಂದಾಗಿ ವೈಯಕ್ತಿಕ ಬಾಹ್ಯ ಸ್ನೇಹ- ಸಂಬಂಧ ಸಂಪರ್ಕ ಉದ್ಯೋಗಿಯೊಬ್ಬನಿಗೆ ಅತೀ ಅವಶ್ಯಕ. 

Advertisement

ವಿಶೇಷ ಕೌಶಲ
ಉದ್ಯೋಗಿಯೊಬ್ಬನು ವಿಭಿನ್ನ ಮತ್ತು ವಿಶೇಷ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ ಮಾತ್ರ ತಾನು ಬೆಳೆಯುತ್ತಾನೆ, ತನ್ನ ಸಂಸ್ಥೆಯ ಬೆಳವಣಿಗೆಗೂ ಕಾರಣವಾಗುತ್ತಾನೆ. ಅದಕ್ಕಾಗಿಯೇ ಇಂದು ಸಂಸ್ಥೆಗಳು ಕೇವಲ ಒಂದು ಬಗೆಯ ಆಲೋಚನೆ, ಆಸಕ್ತಿ ಇರುವ ಅಭ್ಯರ್ಥಿಗಳನ್ನು ದೂರ ಮಾಡುತ್ತಿವೆ. ವಿಶೇಷ ಕೌಶಲಗಳನ್ನು ಹೊಂದಿರುವ ಅಭ್ಯರ್ಥಿಗಳಿಗೆ ಹೆಚ್ಚಿನ ಪ್ರಾಮುಖ್ಯ ನೀಡುತ್ತಿವೆ. 

 ಶಿವ ಸ್ಥಾವರಮಠ

Advertisement

Udayavani is now on Telegram. Click here to join our channel and stay updated with the latest news.

Next