ಬೈಂದೂರು: ರಾಷ್ಟ್ರೀಯ ಹೆದ್ದಾರಿಯ ರಸ್ತೆ ಬದಿ ಲಾರಿ ನಿಲ್ಲಿಸಿ ಇಬ್ಬರು ಮಲಗಿದ್ದ ವೇಳೆ ಸಮಯ ಸಾಧಿಸಿ ಕಳ್ಳರು ಐದು ಚಕ್ರಗಳನ್ನು ಕಳವು ಮಾಡಿದ ಘಟನೆ ನಡೆದಿದೆ.
ಮಾಲೀಕ ಅಂಕೋಲಾದ ಹಾರವಾಡ ಗ್ರಾಮದ ಸೀಬರ್ಡ್ ಕಾಲೋನಿಯ ಪುರುಷೋತ್ತಮ ತಾಂಡೇಲ್ ಅವರು ಲಾರಿಯನ್ನು ಸೆ. 14 ರಾತ್ರಿ 9ಗಂಟೆಗೆ ಮನೆಯಿಂದ ಮಗ ಸಾಹಿಲ್ ಜತೆಯಲ್ಲಿ ಚಲಾಯಿಸಿಕೊಂಡು ಬಂದಿದ್ದಾರೆ. ರಾ. ಹೆ. 66 ರಲ್ಲಿ ರಾತ್ರಿ 11.30 ರ ವೇಳೆಗೆ ಶಿರೂರು ಟೋಲ್ ಗೇಟ್ ನಿಂದ ಸ್ವಲ್ಪ ಹಿಂದೆ ತಲುಪಿದಾಗ ನಿದ್ದೆ ಮಂಪರು ಬಂದ ಕಾರಣ ಲಾರಿ ನಿಲ್ಲಿಸಿ ಒಳಗೆ ಇಬ್ಬರೂ ಮಲಗಿದ್ದಾರೆ.
ಮೊಬೈಲ್ ನಲ್ಲಿ ಬೆಳಗ್ಗೆ 4 ಗಂಟೆಗೆ ಅಲರಾಂ ಇಟ್ಟುಕೊಂಡು ಗುರುವಾರ ಬೆಳಗ್ಗೆ ಎದ್ದು,ಹೊರಡಲು ಲಾರಿಯನ್ನು ಸ್ಟಾರ್ಟ್ ಮಾಡಿ ಗೇರ್ ಹಾಕಿ ಮುಂದಕ್ಕೆ ಚಲಾಯಿಸಲು ಯತ್ನಿಸಿದಾಗ ಲಾರಿಯು ಎಡಭಾಗಕ್ಕೆ ವಾಲಿಕೊಂಡಿದೆ.
ಕೂಡಲೇ ಲಾರಿಯ ಇಂಜಿನ್ ನನ್ನು ಆಫ್ ಮಾಡಿ ಕೆಳಗಿಳಿದು ನೋಡಿದಾಗ ಲಾರಿಯ ಎಡಬದಿಯ ಹಿಂದಿನ 4 ಚಕ್ರಗಳು ಇಲ್ಲದೇ ಇದ್ದು, ಹಿಂಬದಿಯಲ್ಲಿದ್ದ ಸ್ಟೆಪ್ನಿ ಚಕ್ರ ಕೂಡಾ ಇಲ್ಲವಾಗಿತ್ತು. ಕಳ್ಳರು ರಾತ್ರಿ 5 ಚಕ್ರಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಅವುಗಳ ಮೌಲ್ಯ 1,85,000 ರೂ. ಆಗಿರುತ್ತದೆ. ಈ ಕುರಿತು ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈಗಾಗಲೆ ಹಲವು ಬಾರಿ ಅನಧಿಕೃತ ಅಂಗಡಿಗಳನ್ನು ಹತ್ತು ಗಂಟೆಯ ಬಳಿಕ ಬಾಗಿಲು ತೆರೆಯಬಾರದೆಂದು ತಿಳಿಸಲಾಗಿದೆ.ಇವುಗಳಲ್ಲಿ ಅನಧಿಕೃತ ಚಟುವಟಿಕೆ ನಡೆಯುವ ಕುರಿತು ದೂರುಗಳು ಕೇಳಿಬಂದಿದೆ.ಇಲಾಖೆ ಕೂಡ ಗಂಭೀರವಾಗಿ ಪರಿಗಣಿಸಿದೆ.ಹಲವು ಗಾಂಜಾ ವ್ಯಸನಿಗಳನ್ನು ಶಿರೂರು ಟೋಲ್ ಗೇಟ್ ಹಾಗೂ ಸುತ್ತಮುತ್ತ ವಶಕ್ಕೆ ಪಡೆದು ಪ್ರಕರಣ ದಾಖಲಿಸಲಾಗಿದೆ.ಸಣ್ಣಪುಟ್ಟ ಸರಣಿ ಕಳ್ಳತನ ನಡೆಸುವವರು ಮತ್ತು ಪೊಲೀಸ್ ಚಲನವಲನ ಮಾಹಿತಿದಾರರು ಈ ಅಂಗಡಿಗಳನ್ನು ಅವಲಂಬಿಸುವ ಮಾಹಿತಿ ಇದೆ.ಇವುಗಳ ಕುರಿತು ಇಲಾಖೆ ಸಮರ್ಪಕ ಕ್ರಮ ಕೈಗೊಳ್ಳಲಿದೆ.ಲಾರಿ ಟಯರ್ ಕಳ್ಳತನ ಪ್ರಕರಣ ಬೇಧಿಸಲು ಪೊಲೀಸ್ ತಂಡ ಕಾರ್ಯಪ್ರವತ್ತರಾಗಿದೆ.ಕಾನೂನು ಬಾಹಿರ ಚಟುವಟಿಕೆಗೆ ನಿರ್ಧಾಕ್ಷಿಣ್ಯವಾಗಿ ಕಡಿವಾಣ ಹಾಕಲಾಗುವುದು ಎಂದು ಬೈಂದೂರು ಠಾಣೆಯ .ವೃತ್ತ ನಿರೀಕ್ಷಕ ಸಂತೋಷ ಕಾಯ್ಕಿಣಿ ತಿಳಿಸಿದ್ದಾರೆ.