ಬಾಗಲಕೋಟೆ : ತಾಲೂಕಿನ ಕಿರಸೂರ ಗ್ರಾಮದಲ್ಲಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಮೃತಪಟ್ಟವರಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದೆಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ ಮನೆಯ ಮೇಲ್ಛಾವಣಿ ಕುಸಿದ ಪರಿಣಾಮ ಮನೆಯಲಿದ್ದ ಒಂದೇ ಕುಟುಂಬದ ಈರಪ್ಪ ಪಕೀರಪ್ಪ ಹಡಪದ (60), ಗೌರವ್ವ ಈರಪ್ಪ ಹಡಪದ (55) ಹಾಗೂ ನಿಂಗಪ್ಪ ಈರಪ್ಪ ಹಡಪದ (32) ಮೃತಪಟ್ಟಿದ್ದಾರೆ.
ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರದ ನೀಡುವದರ ಜೊತೆಗೆ ಶವ ಸಂಸ್ಕಾರಕ್ಕೂ ತಕ್ಷಣ ಹಣ ನೀಡಲು ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ತಿಳಿಸಲಾಗಿದೆ. ಮನೆ ಕಟ್ಟಿಕೊಡಲು ಕ್ರಮಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಭಾರಿ ಮಳೆ ಆಗುತ್ತಿರುವ ಹಿನ್ನಲೆಯಲ್ಲಿ ಮಣ್ಣಿನ ಮುದ್ದೆಯ ಮೇಲ್ಛಾವಣೆ ಇರುವ ಮನೆಗಳಲ್ಲಿ ವಾಸಿಸುತ್ತಿರುವವರು ಸುರಕ್ಷಿತ ಹಾಗೂ ಕಾಳಜಿ ವಹಿಸುವ ಅಗತ್ಯವಿದೆ. ಈ ಕುರಿತು ಎಲ್ಲ ಗ್ರಾಮಗಳಲ್ಲಿ ಡಂಗೂರ ಸಾರಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಸ್ಥಳೀಯ ಶಾಸಕ ಡಾ.ವೀರಣ್ಣ ಚರಂತಿಮಠ, ಕಿರಸೂರ ಗ್ರಾಮಕ್ಕೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.