ನಾರ್ವೆ: ಬಿಲ್ಲು, ಬಾಣಗಳಿಂದ ಐದು ಮಂದಿಯನ್ನು ವ್ಯಕ್ತಿಯೊಬ್ಬ ಹತ್ಯೆಗೈದಿರುವ ಘಟನೆ ಆಗ್ನೇಯ ನಾರ್ವೆಯಲ್ಲಿ ನಡೆದಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಶಂಕಿತ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ವರದಿ ಹೇಳಿದೆ.
ಇದನ್ನೂ ಓದಿ:ಸಿದ್ದಾಪುರ: ಅಡುಗೆ ವಿಚಾರದಲ್ಲಿ ತಾಯಿ, ತಂಗಿಯನ್ನೇ ಗುಂಡಿಟ್ಟು ಕೊಂದ!
ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಕಾಂಗ್ಸ್ ಬರ್ಗ್ ನ ನಗರ ಪ್ರದೇಶದ ವಿವಿಧೆಡೆ ಈ ದಾಳಿ ನಡೆದಿದ್ದು, ದಾಳಿಯ ಉದ್ದೇಶ ಏನೆಂಬುದು ತಿಳಿದು ಬಂದಿಲ್ಲ. ಆದರೆ ಇದೊಂದು ಭಯೋತ್ಪಾದಕ ಕೃತ್ಯ ಅಲ್ಲ ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಲ್ಲು, ಬಾಣದ ದಾಳಿಗೆ ಐವರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಅವರನ್ನು ತುರ್ತು ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಓಯ್ ವಿಂಡ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಗಾಯಗೊಂಡವರಲ್ಲಿ ರಜೆಯಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಸೇರಿದ್ದಾರೆ. ಘಟನೆಗೆ ಕಾರಣಕರ್ತನಾದ ವ್ಯಕ್ತಿಯನ್ನು ಬಂಧಿಸಿದ್ದೇವೆ. ಘಟನೆಗೆ ಕಾರಣ ಏನು ಎಂಬುದನ್ನು ತನಿಖೆಯ ನಂತರ ಬಹಿರಂಗಪಡಿಸಲಾಗುವುದು ಎಂದು ತಿಳಿಸಿದ್ದಾರೆ.