ಮೈಸೂರು: ನಿಂತಿದ್ದ ಲಾರಿಗೆ ಮದುವೆಯ ಆರತಕ್ಷತೆ ಮುಗಿಸಿ ಬರುತಿದ್ದ ಬಸ್ಸು ಡಿಕ್ಕಿ ಹೊಡೆದು ಮೂವರು ಸಾವನ್ನಪ್ಪಿದ್ದು ಐದು ಮಂದಿ ಗಂಭೀರ ಗಾಯಗೊಂಡ ಘಟನೆ ಮೈಸೂರು – ತಿ. ನರಸೀಪುರ ರಸ್ತೆಯಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದೆ.
ಆರತಕ್ಷತೆ ಮುಗಿಸಿ ಜನರನ್ನು ಹೊತ್ತು ತರುತ್ತಿದ್ದ ಖಾಸಗಿ ಬಸ್ಸು ಮೈಸೂರು – ತಿ.ನರಸೀಪುರ ರಸ್ತೆಯ ಇಂಡವಾಳು ಗ್ರಾಮದ ಬಳಿ ಕೆಟ್ಟು ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಮೃತಪಟ್ಟ ಯುವಕರ ಬಗ್ಗೆ ಯಾವುದೇ ಮಾಹಿತಿ ದೊರೆಕಿಲ್ಲ.
ಮೈಸೂರು ತಾಲೂಕಿನ ಚೋರನಹಳ್ಳಿ ರಘು ಮತ್ತು ತಿ.ನರಸೀಪುರ ತಾಲೂಕಿನ ಅಂಕನಹಳ್ಳಿಯ ವಧುವಿನೊಂದಿಗೆ ಬುಧವಾರ ಮದುವೆ ನಿಗದಿಯಾಗಿದ್ದು, ಮಂಗಳವಾರ ರಾತ್ರಿ ತಿ.ನರಸೀಪುರದಲ್ಲಿ ಹಮ್ಮಿಕೊಂಡಿದ್ದ ಆರತಕ್ಷತೆ ಮುಗಿಸಿಕೊಂಡು ಬರುತ್ತಿದ್ದ ವರನ ಕಡೆಯವರ ಖಾಸಗಿ ಬಸ್ಸು ಇಂಡವಾಳು ಬಳಿ ಕೆಟ್ಟು ನಿಂತಿದ್ದ ಲಾರಿಗೆ ಹಿಂದಿನಿಂದ ಬಂದು ಗುದ್ದಿದ್ದೆ. ಆದರೂ, ಚಾಲಕ ಬಸ್ಸನ್ನು ನಿಲ್ಲಿಸದೆ. ಗಾಬರಿಗೊಂಡು ಸ್ವಲ್ಪ ಹಿಂದೆ ಬಂದು ಮತ್ತೆ ಬಸ್ಸನ್ನು ಚಲಾಯಿಸಿದ್ದಾರೆ. ಈ ವೇಳೆ ಬಸ್ಸು ಲಾರಿಯ ಬಲಭಾಗವನ್ನು ತೀವ್ರವಾಗಿ ಉಜ್ಜಿಕೊಂಡು ಹೋದ ಪರಿಣಾಮ ಬಸ್ಸಿನ ಮುಂಭಾಗದಲ್ಲಿ ಕುಳಿತಿದ್ದ ಇಬ್ಬರು ಯುವಕರು ಕೆಳಗೆ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.
ಮೃತರ ಮುಖಕ್ಕೆ ತೀವ್ರವಾದ ಗಾಯಗಳಾಗಿರುವುದರಿಂದ ಅವರ ಗುರುತು ಇನ್ನು ಪತ್ತೆಯಾಗಿಲ್ಲ.
ಗಂಭೀರವಾಗಿ ಗಾಯಗೊಂಡ ಐವರನ್ನು ತಿ.ನರಸೀಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ಸಿನಲ್ಲಿ ಸುಮಾರು 30 ರಿಂದ 35 ಮಂದಿ ಇದ್ದರು ಎಂದು ಹೇಳಳಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಸ್ಸಿನ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಭೇಟಿ ನೀಡಿದ ತಿ.ನರಸೀಪುರ ಪೊಲೀಸರು ಸ್ಥಳ ಪರಿಶೀಲಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.