ಶ್ರೀನಗರ: ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯ ಹೆದ್ದಾರಿ ಮತ್ತು ಸೇನಾ ಶಿಬಿರದ ಬಳಿ ಭದ್ರತಾ ಪಡೆಗಳು ಶನಿವಾರ ಸುಧಾರಿತ ಸ್ಫೋಟಕ ಸಾಧನ (IED) ಪತ್ತೆ ಮಾಡಿದೆ. ಐದು ಕಿಲೋ ತೂಕದ ಐಇಡಿ ಅನ್ನು ಸೇನೆಯು ಪತ್ತೆ ಮಾಡಿ ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿದೆ.
“ಭದ್ರತಾ ಪಡೆಗಳು ರಜೌರಿ ಗುರ್ದನ್ ರಸ್ತೆಯಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು ವಶಪಡಿಸಿಕೊಳ್ಳುವ ಮೂಲಕ ಭಯೋತ್ಪಾದನೆಯ ಸಂಚನ್ನು ವಿಫಲಗೊಳಿಸಿದವು, ನಂತರ ಅದನ್ನು ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗಿ ನಾಶಪಡಿಸಲಾಯಿತು” ಎಂದು ರಜೌರಿ ಜಿಲ್ಲಾ ಪೊಲೀಸ್ ಹೇಳಿಕೆ ತಿಳಿಸಿದೆ.
ಇದನ್ನೂ ಓದಿ:ವಿಶ್ವಯುದ್ಧಕ್ಕೆ ಮಾಸ್ಕೊವಾ ನಾಂದಿ? ಯುದ್ಧನೌಕೆಯ ಮುಳುಗಡೆಯಿಂದ ರಷ್ಯಾ ಸರಕಾರ ಕೆಂಡಾಮಂಡಲ
ಜಮ್ಮು ಮತ್ತು ಕಾಶ್ಮೀರ ಪೊಲೀಸರ ಪ್ರಕಾರ, ರಜೌರಿ ಗುರ್ದನ್ ರಸ್ತೆಯಲ್ಲಿರುವ ಗುರ್ದನ್ ಚಾವಾ ಗ್ರಾಮದಲ್ಲಿ ಕೆಲವು ಅನುಮಾನಾಸ್ಪದ ಚಲನವಲನಗಳು ನಡೆದಿವೆ ಎಂದು ಅವರು ನಂಬಲರ್ಹ ಮಾಹಿತಿ ಪಡೆದರು. ಅದರ ನಂತರ, ಸೇನೆ ಮತ್ತು ವಿಶೇಷ ಕಾರ್ಯಾಚರಣೆಗಳ ಗುಂಪಿನ ತಂಡಗಳು ಶನಿವಾರ ಮುಂಜಾನೆ ಪ್ರದೇಶದಲ್ಲಿ ಜಂಟಿಯಾಗಿ ಸುತ್ತುವರಿದು ಶೋಧ ಕಾರ್ಯಾಚರಣೆ ಪ್ರಾರಂಭಿಸಿದವು.
ಕಾರ್ಯಾಚರಣೆ ವೇಳೆ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತುವೊಂದು ಪತ್ತೆಯಾಗಿದ್ದು, ಅದು ಐಇಡಿ ಎಂದು ತಿಳಿದುಬಂದಿದೆ. ನಂತರ ನಿಯಂತ್ರಿತ ಸ್ಫೋಟದ ಮೂಲಕ ಸುರಕ್ಷಿತ ಸ್ಥಳದಲ್ಲಿ ಐಇಡಿಯನ್ನು ನಾಶಪಡಿಸಲಾಯಿತು.