Advertisement
ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ಪತ್ರಿಕಾಗೋಷ್ಠಿಯಲ್ಲೇ ಜಿಎಸ್‌ಟಿ ಹೊರತು ಪಡಿಸಿ ಉಳಿದ ಮೂಲಗಳಿಂದ ಬಿಗಿಯಾಗಿ ತೆರಿಗೆ ವಸೂಲಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ಪೆಟ್ರೋಲ್-ಡೀಸೆಲ್ ಮೇಲಿನ ವ್ಯಾಟ್ ಹೆಚ್ಚಳ, ಅಬಕಾರಿ ತೆರಿಗೆ, ನೋಂದಣಿ ಮತ್ತು ಮುದ್ರಾಂಕ ಹಾಗೂ ಮೋಟಾರು ವಾಹನ ತೆರಿಗೆ ಪ್ರಮಾಣ ಹೆಚ್ಚಳದ ಬಗ್ಗೆ ವಿತ್ತ ಇಲಾಖೆಯಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ. ಆಯವ್ಯಯದ ಗಾತ್ರವನ್ನು ಶೇ.10 ರಷ್ಟು ಹಿಗ್ಗಿಸಿಕೊಂಡರೂ ಖರ್ಚು ಅಷ್ಟೇ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ. ಹೀಗಾಗಿ ಕೆಲವು ಕ್ಷೇತ್ರಗಳ ಮೇಲೆ ಕರಭಾರ ಹೇರುವುದು ಅನಿವಾರ್ಯ ಎಂದು ವಿತ್ತ ಇಲಾಖೆ ಸಲಹೆ ನೀಡಿದೆ. ಆದರೆ ಪೆಟ್ರೋಲ್ ಮೇಲಿನ ವ್ಯಾಟ್ ಹೆಚ್ಚಳ ಎಲ್ಲ ಉದ್ಯಮದ ಮೇಲೂ ಪರಿಣಾಮ ಬೀರುವುದರಿಂದ ಸಂಪನ್ಮೂಲ ಕ್ರೋಡೀಕರಣವು ಸಿದ್ದರಾಮಯ್ಯ ಸರಕಾರಕ್ಕೆ ಹಗ್ಗದ ಮೇಲಿನ ನಡಿಗೆಯಂತಾಗಿದೆ.
ಇನ್ನು ಬಜೆಟ್ ಗಾತ್ರವನ್ನು ಶೇ. 10ರಷ್ಟು ಹೆಚ್ಚಿಸಿಕೊಳ್ಳುವ ಬಗ್ಗೆ ಸಿಎಂ ಚಿಂತನೆ ನಡೆಸಿದ್ದಾರೆ. ಒಂದೊಮ್ಮೆ ಆ ಮಾರ್ಗವನ್ನು ಅನುಸರಿಸಿದರೂ ಹೆಚ್ಚಳದಿಂದ ಲಭಿಸುವ ಆದಾಯ ವನ್ನು ಬೇರೆ ಯೋಜನೆಗಳಿಗೆ ಬಳಸುವುದು ಕಷ್ಟ. 2023-24ನೇ ಸಾಲಿನ ಬಜೆಟ್ ಕಳೆದ ಬಾರಿಗಿಂತ ಗಾತ್ರದಲ್ಲಿ ಶೇ.9ರಷ್ಟು ದೊಡ್ಡದಾಗಿದೆ. ಆದರೆ ಬೊಮ್ಮಾಯಿ ಮಂಡಿಸಿದ ಕೊನೆಯ ಬಜೆಟ್‌ನಲ್ಲಿ ಯಾವುದೇ ತೆರಿಗೆ ಹೆಚ್ಚಳ ಇಲ್ಲದಿದ್ದರೂ ಜಿಎಸ್‌ಟಿ ಹೊರತುಪಡಿಸಿದ ವಾಣಿಜ್ಯ ತೆರಿಗೆ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ, ಮೋಟಾರು ವಾಹನ ತೆರಿಗೆ ಸಂಗ್ರಹದಲ್ಲಿ ಗುರಿ ಮೀರಿ ಸಾಧನೆ ಮಾಡಲಾಗಿತ್ತು. ಆದಾಯ ಹೆಚ್ಚಳದ ನಿಖರ ಗುರಿ ಯೊಂದಿಗೆ ಸಿದ್ದರಾಮಯ್ಯ ಅಖಾಡಕ್ಕೆ ಇಳಿಯಬೇಕಿದೆ. ಹೀಗಾಗಿ ಪೆಟ್ರೋಲ್, ಡೀಸೆಲ್ ಹಾಗೂ ಅಬಕಾರಿ ತೆರಿಗೆ ಹೆಚ್ಚಳ ಅನಿವಾರ್ಯವಾಗಲಿದೆ ಎನ್ನುತ್ತವೆ ಹಣಕಾಸು ಇಲಾಖೆ.
Related Articles
ಕಳೆದ ಬಜೆಟ್‌ನಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಅಬಕಾರಿ ತೆರಿಗೆ ಹೆಚ್ಚಿಸಿರ ಲಿಲ್ಲ. ಆದರೆ 2023-24ನೇ ಹಣಕಾಸು ವರ್ಷಕ್ಕೆ 35,000 ಕೋಟಿ ರೂ. ಆದಾಯ ಸಂಗ್ರಹಣೆ ಗುರಿ ನೀಡಲಾಗಿತ್ತು. ವಿಶೇಷವೆಂದರೆ 2022-23ನೇ ಸಾಲಿನಲ್ಲಿ ಅಬಕಾರಿ ಇಲಾಖೆ ಗುರಿ ಮೀರಿ ಆದಾಯ ಸಂಗ್ರಹಿಸಲಾಗಿತ್ತು. ಕೋವಿಡ್ ಬಳಿಕ ಚೇತರಿಕೆ ಕಂಡ ಸರಕಾರದ ಅತಿ ಶ್ರೀಮಂತ ಆದಾಯದ ಮೂಲ ಅಬಕಾರಿಯಾಗಿತ್ತು. 29,000 ಕೋಟಿ ರೂ.ಗುರಿಯನ್ನು ಮೀರಿ 32,000 ಕೋಟಿ ರೂ. ಸಂಗ್ರಹವಾಗಿತ್ತು.
Advertisement
ಸಾರಿಗೆ ಇಲಾಖೆಯಲ್ಲೂ ಗುರಿ ಮೀರಿದ ಸಾಧನೆಸಾರಿಗೆ ಇಲಾಖೆಯಲ್ಲಿ ಮೋಟಾರು ವಾಹನ ತೆರಿಗೆ ಸಂಗ್ರಹ ಗುರಿಯಲ್ಲೂ ಹೆಚ್ಚಳವಾಗಿತ್ತು. 8,007 ಕೋಟಿ ರೂ. ಗುರಿ ಮೀರಿ 9,007 ಕೋ. ರೂ. ಆದಾಯ ಸಂಗ್ರಹಿಸಲಾಗಿತ್ತು. 2023-24ನೇ ಸಾಲಿಗೆ 10,500 ಕೋಟಿ ರೂ. ಗುರಿ ವಿಧಿಸಲಾಗಿತ್ತು. ಗಣಿ ಮತ್ತು ಭೂ ವಿಜ್ಞಾನ
ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಪ್ರಸಕ್ತ ಸಾಲಿನಲ್ಲಿ 7,500 ಕೋ. ರೂ. ತೆರಿಗೆ ಸಂಗ್ರಹ ಗುರಿ ವಿಧಿಸಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಅತಿ ಕಡಿಮೆ ರಾಜಸ್ವ ಸಂಗ್ರಹವಾದ ಇಲಾಖೆ ಇದು. ವಾಣಿಜ್ಯ ತೆರಿಗೆ
ಜಿಎಸ್‌ಟಿ ಪರಿಹಾರ ಹೊರತುಪಡಿಸಿ 2023-24ನೇ ಸಾಲಿಗೆ 92,000 ಕೋಟಿ ರೂ. ವಾಣಿಜ್ಯ ತೆರಿಗೆ ಸಂಗ್ರಹ ಗುರಿ ನಿಗದಿಯಾಗಿದ್ದು, ಕಳೆದ ಬಾರಿ ಆಯವ್ಯಯದ ಅಂದಾಜಿಗಿಂತ ಶೇ. 15ರಷ್ಟು ಹೆಚ್ಚಳವಾಗಿದೆ. ತೈಲದ ಮೇಲೆ ಶೇ.5ರಿಂದ 7 ಸೆಸ್ ಹೆಚ್ಚಳ ?
ಹಣಕಾಸು ಇಲಾಖೆ ಮೂಲಗಳ ಪ್ರಕಾರ, ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ರಾಜ್ಯ ಸರಕಾರ ಶೇ.5ರಿಂದ ಶೇ.7ರ ವರೆಗೂ ಸೆಸ್ ಹೆಚ್ಚಿಸುವ ಸಾಧ್ಯತೆ ಇದೆ. 2021ರಲ್ಲಿ ಕೇಂದ್ರ ಸರಕಾರ ಪೆಟ್ರೋಲ್ ಹಾಗೂ ಡೀಸೆಲ್ ದರ ಇಳಿಸಿದಾಗ ಅಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ತೈಲಗಳ ದರವನ್ನು 7 ರೂ. ಕಡಿಮೆ ಮಾಡಿತ್ತು. ಹೀಗಾಗಿ ರಾಜ್ಯ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಮತ್ತೆ 5ರಿಂದ 7 ರೂ.ವರೆಗೆ ತೆರಿಗೆ ಹೆಚ್ಚಿಸಲು ಅವಕಾಶವಿದ್ದು, ಈ ನಿಟ್ಟಿನಲ್ಲಿ ಚಿಂತನೆ ನಡೆಯುತ್ತಿದೆ. ಆದರೆ ತೈಲ ಬೆಲೆ ಹೆಚ್ಚಳ ಮತ್ತೂಂದು ರಾಜಕೀಯ ಸಮರಕ್ಕೆ ಕಾರಣವಾಗುವ ಸಾಧ್ಯತೆ ಇದ್ದು, ಈ ಬಗ್ಗೆ ಮಾಹಿತಿ ಸೋರಿಕೆಯಾಗದಂತೆ ಎಚ್ಚರ ವಹಿಸಲಾಗಿದೆ. ನೋಂದಣಿ-ಮುದ್ರಾಂಕ
ನೋಂದಣಿ ಹಾಗೂ ಮುದ್ರಾಂಕ ಇಲಾಖೆಯಲ್ಲಿ 2022-23ನೇ ಸಾಲಿನಲ್ಲಿ ಶೇ.13 ರಷ್ಟು ರಾಜಸ್ವ ಸಂಗ್ರಹ ಹೆಚ್ಚಳವಾಗಿದೆ. ನಿಗದಿತ 15,000 ಕೋಟಿ ರೂ. ಗುರಿಯನ್ನು ಮೀರಿ 17,000 ಕೋ. ರೂ. ಸಂಗ್ರಹವಾಗಿತ್ತು. ಈ ಹಿನ್ನೆಲೆಯಲ್ಲಿ 2023-24ನೇ ಸಾಲಿಗೆ 19,000 ಕೋ.ರೂ. ಆದಾಯ ಸಂಗ್ರಹದ ಗುರಿ ನೀಡಲಾಗಿತ್ತು. ಸರಕಾರ ಈ ಅವಧಿಯಲ್ಲಿ ಎರಡು ಬಾರಿ ಶೇ.10ರಷ್ಟು ರಿಯಾಯಿತಿ ನೀಡಿತ್ತು. 1-1-2022ರಿಂದ 31-3-2022ರ ಅವಧಿಯಲ್ಲಿ ನೀಡಿದ ರಿಯಾಯಿತಿ ಯಲ್ಲಿ 82,784 ಆಸ್ತಿ ನೋಂದಣಿಯಿಂದ 4,343 ಕೋಟಿ ರೂ. ಹಾಗೂ 24-4-2022ರಿಂದ 27-7-2022ರ ಅವಧಿಯ ರಿಯಾಯಿತಿ ಸಂದರ್ಭ 1,73,937 ಆಸ್ತಿ ನೋಂದಣಿ ಮೂಲಕ 4,018.66 ಕೋಟಿ ರೂ. ರಾಜಸ್ವ ಸಂಗ್ರಹವಾಗಿದೆ. – ರಾಘವೇಂದ್ರ ಭಟ್