ಬೇಲೂರು: ರಾಜ್ಯ ಸರ್ಕಾರದ ಮಹತ್ತ ಯೋಜನೆ ಯಾದ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ಆರಂಭಿಸುವ ಯೋಜನೆಯಲ್ಲಿ 5 ಶಾಲೆಗಳನ್ನು ತಾಲೂಕಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಆರಂಭಿಸಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ.
ಈಗಾಗಲೇ ತಾಲೂಕಿನ ಅರೇಹಳ್ಳಿ, ಹಳೇಬೀಡು, ಹಗರೆ, ಹಲ್ಮಿಡಿ, ಹಾಗೂ ಬೇಲೂರು ಪಟ್ಟಣ ಸೇರಿ ದಂತೆ ಐದು ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಬೋಧನೆ ಮಾಡಲು ಶಿಕ್ಷಣ ಇಲಾಖೆ ಈ ಬಗ್ಗೆ ಪೂರ್ವ ಸಿದ್ಧತೆ ಕೈಗೊಂಡಿದೆ.
ಮಹತ್ವದ ನಿರ್ಣಯ: ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಶೈಕ್ಷಣಿಕ ಹಿತ ದೃಷ್ಟಿಯಿಂದ ಇಂಗ್ಲಿಷ್ ಕಲಿಕೆಯ ಮಹತ್ವದ ನಿರ್ಣಯದಿಂದ ಗ್ರಾಮೀಣ ಪ್ರದೇಶದ ಬಡವರು, ದಲಿತರು, ಕೂಲಿ ಕಾರ್ಮಿಕರು ಹಾಗೂ ಹಿಂದುಳಿದ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮ ಶಿಕ್ಷಣ ದೊರೆಯಲಿದ್ದು ಸಾರ್ವಜನಿಕರ ಬಹುದಿನದ ಬೇಡಿಕೆಗೆ ಚಾಲನೆ ದೊರೆತಂತಾಗಿದೆ.
ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುವ ಸರ್ಕಾರದ ಯೋಜನೆ ಒಂದು ಉತ್ತಮ ಬೆಳವಣಿಗೆಯಾಗಿದೆ.
ಖಾಸಗಿ ಶಿಕ್ಷಣ ಸಂಸ್ಥೆಗಳು ಇಂಗ್ಲಿಷ್ ಮಾಧ್ಯಮ ನಡೆಸುವ ಮೂಲಕ ಸಾರ್ವಜನಿಕರಿಂದ ಲಕ್ಷಾಂತರ ರೂ. ಡೊನೇಷನ್ ಪಡೆಯುತ್ತಿದ್ದಾರೆ. ಇದರಿಂದ ಬಡ ಮಕ್ಕಳು ಹಣ ನೀಡಲಾಗದೇ ಇಂಗ್ಲಿಷ್ ಮಾಧ್ಯಮದಿಂದ ವಂಚಿತರಾಗುತ್ತಿದ್ದರು. ಇದನ್ನು ಮನಗಂಡು ರಾಜ್ಯ ಸರ್ಕಾರ ಬಡವರ ಮಕ್ಕಳು ಇಂಗ್ಲಿಷ್ ಕಲಿಯಬೇಕು ಎಂಬ ಯೋಜನೆ ಜಾರಿಗೆ ತಂದಿರುವುದಕ್ಕೆ ಸಾರ್ವಜನಿಕರು, ಮತ್ತು ಪೋಷಕರು ಸಂತಸ ವ್ಯಕ್ತ ಪಡಿಸಿದ್ದಾರೆ.
● ಡಿ.ಬಿ.ಮೋಹನ್‌ಕುಮಾರ್