Advertisement

ದಾಖಲೆ ನೀಡಲು 5 ಕೋಟಿ ಆಮಿಷ

10:39 AM Jul 22, 2018 | Team Udayavani |

ಬೆಂಗಳೂರು: “ಬೌರಿಂಗ್‌ ಕ್ಲಬ್‌ ಲಾಕರ್‌ಗಳಲ್ಲಿ ಹಣ ದಾಖಲೆ ಸಿಕ್ಕ ಮಾಹಿತಿ ಲಭ್ಯವಾದ ಕೂಡಲೇ ಅವಿನಾಶ್‌, ಕ್ಲಬ್‌ನ ನನ್ನ ಕಚೇರಿಗೆ ಬಂದು, ಲಾಕರ್‌ಗಳಲ್ಲಿ ಸಿಕ್ಕಿರುವ ಹಣ, ಆಭರಣ, ಆಸ್ತಿ ಪತ್ರಗಳು ತನಗೆ ಸೇರಿದ್ದು ಎಂದು ಒಪ್ಪಿಕೊಂಡಿದ್ದಾನೆ. ಅಲ್ಲದೆ, ಬೇಕಾದರೆ ಹಣ, ಆಭರಣ ನೀವೇ ಇಟ್ಟುಕೊಳ್ಳಿ, ಆಸ್ತಿ ದಾಖಲೆಗಳನ್ನು ಮಾತ್ರ ವಾಪಸ್‌ ಕೊಟ್ಟುಬಿಡಿ ಎಂದು ದುಂಬಾಲು ಬಿದ್ದಿದ್ದ’ ಎಂದು ಬೌರಿಂಗ್‌ ಕ್ಲಬ್‌ ಕಾರ್ಯದರ್ಶಿ ಶ್ರೀಕಾಂತ್‌ ತಿಳಿಸಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅವಿನಾಶ್‌ ತನ್ನ ಬಳಿ ಬಂದು ಹಣ ಇಟ್ಟುಕೊಂಡು ಆಸ್ತಿ ದಾಖಲೆ ಪತ್ರ ಕೊಡಿ ಎಂದಿದ್ದರು. ಆದರೆ, ಕಾನೂನು ಬಾಹಿರವಾಗಿ ಮುಚ್ಚಿಟ್ಟಿದ್ದು ತಪ್ಪು, ಈಗಾಗಲೇ ಐಟಿ ಒಪ್ಪಿಸಲಾಗಿದೆ. ನಿಮ್ಮ ಬಳಿ ದಾಖಲೆಗಳಿದ್ದರೆ ಐಟಿಗೆ ಸಲ್ಲಿಸಿ ಪಡೆದುಕೊಳ್ಳಿ ಎಂದು ಹೇಳಿಕಳುಹಿಸಿದೆ ಎಂದು ಹೇಳಿದರು. 

ಐದು ಕೋಟಿ ಆಫ‌ರ್‌: ಅದೇ ರೀತಿ ಜೂನ್‌ 19ರಂದು ಸಂಜೆ ಒಬ್ಬ ಮಧ್ಯವರ್ತಿ ಬಂದು, ತನ್ನ ಹೆಸರು ಮಾರ್ಟಿನ್‌ ಎಂದು ಪರಿಚಯಿಸಿಕೊಂಡ. ಔಪಚಾರಿಕ ಮಾತಿನ ಬಳಿಕ ಆತ ನೇರವಾಗಿ “ಈಗಲೇ ಐದು ಕೋಟಿ ರೂ. ನೀಡುತ್ತೇನೆ. ಲಾಕರ್‌ನಲ್ಲಿ ದೊರೆತಿರುವ ಆಸ್ತಿ ದಾಖಲೆಗಳಲ್ಲಿ, ಒಂದೇ ಒಂದು ದಾಖಲೆ ಕೊಡಿ’ ಎಂದು ಮನವಿ ಮಾಡಿದ. “ನನಗೆ ಹಣ ಬೇಡ ಐಟಿ ಅಧಿಕಾರಿಗಳಿಗೆ ಕೊಟ್ಟು ತೆಗೆದುಕೊಂಡು ಹೋಗು, ಅಧಿಕಾರಿಗಳನ್ನು ಕರೆಯುತ್ತೇನೆ ಎಂದ ಕೂಡಲೇ ಪರಾರಿಯಾಗಿಬಿಟ್ಟ’ ಎಂದು ತಿಳಿಸಿದರು. 

ದಾಖಲೆಗಳನ್ನು ನೀಡುವಂತೆ ಅವಿನಾಶ್‌ ಹಾಗೂ ಮಧ್ಯವರ್ತಿ ಕೇಳಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ನಾನು ಗಮನಿಸಿದ ಹಾಗೆ ಅದರಲ್ಲಿ ನಿತೇಶ್‌ ಎಸ್ಟೇಟ್‌ನ ಫೈಲ್‌ ಒಂದಿತ್ತು. ಜತೆಗೆ ಹಾಂಗ್‌ ಕಾಂಗ್‌ ಡಾಲರ್ ಎಕ್ಸ್‌ಚೇಂಜ್‌ ಕಂಪೆನಿ ಎಂಬ ಹೆಸರಿನ ಫೈಲ್‌, ಅಲ್ಲದೆ, ಹಲವು ಬಿಲ್ಡರ್‌ಗಳ ಒಂದು ಖಾಲಿ ಚೆಕ್‌ ಬುಕ್‌ ಇತ್ತು. ಹೀಗಾಗಿ ಆಸ್ತಿ ದಾಖಲೆಗಳ ಹಿಂದೆ ಪ್ರಭಾವಿಗಳು ಇರುವ ಶಂಕೆಯನ್ನೂ ತಳ್ಳಿ ಹಾಕುವಂತಿಲ್ಲ. 

ಅಲ್ಲದೆ, ದೂರವಾಣಿ ಕರೆಗಳು ಸಾಕಷ್ಟು ಬಂದಿದ್ದು, ಹಲವು ಕರೆಗಳನ್ನು ನಾನು ಸ್ವೀಕರಿಸಿಲ್ಲ. ದೇಶದ ಪ್ರಜೆಯಾಗಿ, ಅಕ್ರಮವಾಗಿ ಸಿಕ್ಕ ಹಣವನ್ನು ನಾನು ಸರ್ಕಾರಕ್ಕೆ ಒಪ್ಪಿಸಿದ್ದೇನೆ. ಮುಂದಿನದ್ದು ತನಿಖೆ ನಡೆಯಲಿ. ತನಿಖೆಗೆ ಸಂಪೂರ್ಣ ಸಹಕಾರ ನೀಡಿ ವಿಚಾರಣೆಗೆ ಕರೆದರೆ ಬರುವುದಾಗಿ ಐಟಿ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ಶ್ರೀಕಾಂತ್‌ ಹೇಳಿದರು.

Advertisement

ಲಾಕರ್‌ ಹೊಂದಲು ಅನುಮತಿ ಪಡೆದಿದ್ದ ನಮಗೆ ಲಾಕರ್‌ ಸಿಗುತ್ತಿರಲಿಲ್ಲ. ಹೀಗಾಗಿ ಆಡಳಿತ ಮಂಡಳಿ ಗಮನಕ್ಕೆ ತಂದು ಅನಧಿಕೃತ ಲಾಕರ್‌ ಬಳಕೆ ಮಾಡುತ್ತಿರುವವರನ್ನು ಪತ್ತೆ ಮಾಡುವಂತೆ ತಿಳಿಸಿದ್ದೆವು. ಈ ವೇಳೆ ಬ್ಯಾಡ್ಮಿಂಟನ್‌ ವಿಭಾಗದಲ್ಲಿಯೂ ಹಲವು ಅನಧಿಕೃತ ಲಾಕರ್‌ಗಳಿದ್ದು, ಜೂ.19ರಂದು ಲಾಕರ್‌ಗಳನ್ನು ಒಡೆಯುವಾಗ ಹಣ ದೊರೆತಿದೆ. 
 ಸಂದೀಪ ಸುದರ್ಶನ್‌, ಬ್ಯಾಡ್ಮಿಂಟನ್‌ ವಿಭಾಗದ ಉಸ್ತುವಾರಿ

ಕೋಟಿ ಕೋಟಿ ಹಣದ ರಹಸ್ಯಬಯಲಾಗಿದ್ದು ಹೀಗೆ..
5187 ಸದಸ್ಯರನ್ನು ಹೊಂದಿರುವ ಕ್ಲಬ್‌ನಲ್ಲಿ 672 ಲಾಕರ್‌ಗಳಿವೆ. ಬಿಲಿಯರ್ಡ್ಸ್‌, ಬ್ಯಾಡ್ಮಿಂಟನ್‌ ಸೇರಿ ಐದು ವಿಭಾಗದ ಕ್ರೀಡಾ ಪಟುಗಳಿಗೆ ಪ್ರತ್ಯೇಕವಾಗಿ ಲಾಕರ್‌ ನೀಡಲಾಗುತ್ತಿತ್ತು. ಕಳೆದ ಎರಡು ವರ್ಷಗಳಿಂದ ಅನಧಿಕೃತವಾಗಿ ಕೆಲವರು ಲಾಕರ್‌ ಬಳಸುತ್ತಿದ್ದ ಕಾರಣ, ಅನುಮತಿ ಪಡೆದಿದ್ದ ಸದಸ್ಯರಿಗೆ ಲಾಕರ್‌ ಸಿಗುತ್ತಿರಲಿಲ್ಲ. ಹೀಗಾಗಿ ಪರಿಶೀಲನೆ ನಡೆಸಿದಾಗ ಒಟ್ಟು 127 ಲಾಕರ್‌ಗಳು ಅನಧಿಕೃತವಾಗಿ ಬಳಕೆಯಾಗುತ್ತಿರುವುದು ಗೊತ್ತಾಗಿತ್ತು. ಹೀಗಾಗಿ, ಎಲ್ಲ ಸದಸ್ಯರಿಗೂ ಅನಧಿಕೃತವಾಗಿ ಲಾಕರ್‌ ಬಳಸುತ್ತಿದ್ದರೆ ತೆರವು ಮಾಡಿ ಎಂದು ನೋಟಿಸ್‌ ನೀಡಿ, ಸಂದೇಶಗಳನ್ನು ಕಳುಹಿಸಲಾಗಿತ್ತು. ಇಲ್ಲದಿದ್ದರೆ ಜು.17ರಂದು ಲಾಕರ್‌ ಒಡೆಯುವುದಾಗಿ ಡೆಡ್‌ಲೈನ್‌ ಸಹ ನೀಡಲಾಗಿತ್ತು.

ಆದರೆ, ಬಹುತೇಕರು ಪ್ರತಿಕ್ರಿಯೆ ನೀಡಲೇ ಇಲ್ಲ. ಹೀಗಾಗಿ ಜು.17ರಿಂದ ಆಡಳಿತ ಮಂಡಳಿ ಸದಸ್ಯರ ನೇತೃತ್ವದಲ್ಲಿಯೇ ಅನಧಿಕೃತ ಲಾಕರ್‌ಗಳ ಬೀಗ ಒಡೆದು ಕಾರ್ಯಾಚರಣೆ ನಡೆಸಲಾಯಿತು. ಜೂನ್‌ 19ರಂದು ಮಧ್ಯಾಹ್ನ 1.30ರ ಸುಮಾರಿಗೆ ಬ್ಯಾಡ್ಮಿಂಟನ್‌ ವಿಭಾಗದ ನಂ.69 , 71, 79 ಲಾಕರ್‌ಗಳನ್ನು ಒಡೆದಾಗ 6 ಲೆದರ್‌ ಬ್ಯಾಗ್‌ಗಳು ಕಂಡು ಬಂದವು. ಅವುಗಳಲ್ಲಿ ಕಂತೆ ಕಂತೆ ಹಣವಿರುವ ಬಗ್ಗೆ ಅನುಮಾನ ಬಂದ ಕಾರಣ ಕೇಂದ್ರ ವಿಭಾಗದ ಡಿಸಿಪಿ ಡಾ. ಚಂದ್ರಗುಪ್ತ ಅವರಿಗೆ ಮಾಹಿತಿ ನೀಡಲಾಯಿತು. 

ಡಿಸಿಪಿ ಸೇರಿದಂತೆ ಕಬ್ಬನ್‌ ಪಾರ್ಕ್‌ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ವಿಡಿಯೋ ಚಿತ್ರೀಕರಣದ ಮೂಲಕ ಬ್ಯಾಗ್‌ ತೆರೆದಾಗ 2000 ರೂ. ಮುಖಬೆಲೆಯ 18 ಬಂಡಲ್‌ಗ‌ಳಲ್ಲಿ ಹಣ, ವಜ್ರದ ಆಭರಣ, 10ರಿಂದ 100 ಗ್ರಾಂ. ತೂಕದವರೆಗಿನ ಚಿನ್ನದ ಬಿಸ್ಕೆಟ್‌ಗಳು, ಮತ್ತೂಂದು ಬ್ಯಾಗ್‌ನಲ್ಲಿ ಸುಮಾರು 15ಕ್ಕೂ ಹೆಚ್ಚು ಆಸ್ತಿ ದಾಖಲೆಗಳು ಕಂಡು ಬಂದವು. 

ಕೂಡಲೇ ಪೊಲೀಸರು ಅನಧಿಕೃತ ಹಣ ಪತ್ತೆ ಆಗಿರುವುದರಿಂದ ಐಟಿಗೆ ಮಾಹಿತಿ ನೀಡಲಾಯಿತು. ಜೂನ್‌ 20ರಂದು ಉನ್ನತ ಅಧಿಕಾರಿಗಳ ಐಟಿ ತಂಡ, ಜಾರಿ ನಿರ್ದೇಶನಾಲಯ ಅಧಿಕಾರಿಗಳ ತಂಡ ಆಗಮಿಸಿ, ಹಣ, ಆಭರಣ, ಆಸ್ತಿ ಪತ್ರಗಳನ್ನು ಜಫಿ ಮಾಡಿಕೊಂಡು ಕಾರ್ಯಾಚರಣೆ ನಡೆಸುತ್ತಿದೆ ಎಂದು ಪ್ರಕರಣ ಕುರಿತು ಕ್ಲಬ್‌ ಕಾರ್ಯದರ್ಶಿ ಶ್ರೀಕಾಂತ್‌ ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next